ಭಾನುವಾರ, ಆಗಸ್ಟ್ 28, 2011

ಗಾಂಧಿ ಟೋಪಿಗೆ ಅಣ್ಣಾಗರಿ, ಮತ್ತೊಮ್ಮೆ ಗೆದ್ದಿತು ಗಾಂಧಿಗಿರಿ!


ದೇಶದಲ್ಲಿ ಹೊಸ ಬದಲಾವಣೆ ತರುವ ಕೇಂದ್ರ ಲೋಕಪಾಲ್ ಮಸೂದೆ, ಹಿರಿಯ ಗಾಂಧೀವಾದಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಮೂರು ತಿಂಗಳ ಹಗ್ಗಜಗ್ಗಾಟದ ಬಳಿಕ ಕೊನೆಗೂ ಜಾರಿಯಾಗುವ ಕಾಲ ಸನ್ನಿಹಿತವಾಗಿದೆ.
ಅಣ್ಣಾ ನೇತೃತ್ವದ ಗಾಂಧಿ ಗಿರಿಗೆ ಮಣಿದ ಸರಕಾರ ಮಸೂದೆಯನ್ನು ಪಾರ್ಲಿಮೆಂಟ್ ನ ಉಭಯ ಸದನಗಳಲ್ಲಿ ಮಂಡಿಸಿ ಧ್ವನಿ ಮತದಿಂದ ಅಂಗೀಕಾರ ನೀಡಿದೆ.
ಮಸೂದೆಗೆ ಸಂಬಂಧಿಸಿದಂತೆ ದೇಶದ ಪ್ರಧಾನಿಯೂ ಲೋಕಪಾಲ ವ್ಯಾಪ್ತಿಗೆ ಬರಬೇಕೆನ್ನುವ ಶರತ್ತು ಸಹಿತ ಅಣ್ಣಾ ಮುಂದಿಟ್ಟ ಮೂರು ಪ್ರಮುಖ ಒತ್ತಾಯಗಳನ್ನು ಸರಕಾರ ಅಂತಿಮ ಕ್ಷಣದಲ್ಲಿ ಒಪ್ಪಿದ್ದು ನಿನ್ನೆ ಇಡೀ ದಿನ ವ್ಯಾಪಕ ಚರ್ಚೆ ನ‌ಡೆಸಿ ಉಭಯ ಸದನಗಳಲ್ಲಿ ಧ್ವನಿಮತದ ಅಂಗೀಕಾರದಿಂದ ಜನಲೋಕಪಾಲ್ ಮಸೂದೆ ಸ್ವೀಕರಿಸಿದೆ.
ಈ ಸಂಬಂಧ ಸರಕಾರ ನೀಡಿರುವ ಹೇಳಿಕೆಯಲ್ಲಿ ಸಂಸತ್ ನಲ್ಲಿ ಮಂಡಿಸಲಾದ ಈ ಮಸೂದೆಯನ್ನು ಸ್ಥಾಯೀ ಸಮಿತಿ ವಿಮರ್ಶೆಗೆ ಒಪ್ಪಿಸುವ ತೀರ್ಮಾನವನ್ನು ಸಂಸತ್ತು ಅಂಗೀಕರಿಸಿದ್ದು, ಇದು ಲೋಕಪಾಲ್ ಕಾನೂನು ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಹೆಜ್ಜೆ ಇಟ್ಟಂತಾಗಿದೆ. ಸಂಸತ್ ಅನುಮೋದನೆಯ ಮಾಹಿತಿಯನ್ನು ಸ್ವೀಕರ್ ಅವರ ಸಹಿಯೊಂದಿಗೆ ಸರಕಾರ ನಿನ್ನೆ ರಾತ್ರಿಯೇ ನಿರಶನ ನಿರತ ಅಣ್ಣಾಗೆ ಒಪ್ಪಿಸಿದ್ದು, ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಿತ್ತು. ಹನ್ನೆರಡು ದಿನಗಳ ನಿರಂತರ ಉಪವಾಸ ಸತ್ಯಾಗ್ರಹದ ಮಧ್ಯೆಯೂ ಅಣ್ಣಾ ನಿಲುವಿನಲ್ಲಿ ಧೃಢತೆಯಿದ್ದು, ಅಂತಿಮ ಗುರಿ ತಲುಪುವಲ್ಲಿ ಅಣ್ಣಾ ಯಶಸ್ವಿಯಾಗಿದ್ದಾರೆ. ಕೇಂದ್ರದ ಪತ್ರವನ್ನು ಸ್ವೀಕರಿಸಿ ನಿರಶನ ಅಂತ್ಯಗೊಳಿಸಿರುವ ಅಣ್ಣಾ ಇದೊಂದು ಅರ್ಧಂಶ ಗೆಲುವು ಇನ್ನರ್ಧಾಂಶ ಗೆಲುವು ಇನ್ನಷ್ಟೇ ಬರಬೇಕಾಗಿದೆ ಎನ್ನುವ ಮೂಲಕ ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ಹೋರಾಟವನ್ನು ಜೀವಂತವಿರಿಸುವ ಮತ್ತು ಮುಂದುವರಿಸುವ ಸಂಕಲ್ಪವನ್ನು ಪುನರುಚ್ಛರಿಸಿದ್ದಾರೆ. ಅದರೊಂದಿಗೆ ಈ ಹೋರಾಟ ಕೇಂದ್ರ ಸರಕಾರ ಜನ ಲೋಕಪಾಲ್ ಮಸೂದೆ ಜಾರಿಗೆ ಹೊಸ ಅಡ್ಡಿ ಆತಂಕಗಳನ್ನು ಮುಂದಿರಿಸದಂತೆ ಪರೋಕ್ಷ ಎಚ್ಚರಿಕೆಯೂ ನೀಡಿದೆ.
ಕಳೆದ ಹನ್ನೆರಡು ದಿನಗಳಿಂದ ದೇಶಕ್ಕೆ ದೇಶವೇ ಅಚ್ಚರಿ ಪಡುವ ರೀತಿಯಲ್ಲಿ ಅಬಾಲವೃದ್ಧರಾದಿ ಜನತೆ ಅಣ್ಣಾ ಬೆಂಬಲಕ್ಕೆ ನಿಂತಿದ್ದು ಬಲುದೊಡ್ಡ ದಾಖಲೆಯನ್ನೇ ಸೃಷ್ಟಿಸಿತ್ತು. ಸ್ವಾತಂತ್ರ್ಯ ಹೋರಾಟದ ಬಳಿಕ ಜಯಪ್ರಕಾಶ್ ನಾರಾಯಣ್ ರ ಸಮಗ್ರ ಕ್ರಾಂತಿ ಹೊರತು ಪಡಿಸಿದರೆ ಇಂತದ್ದೊಂದು ದೊಡ್ಡ ಸತ್ಯಾಗ್ರಹ ಮತ್ತು ಹೋರಾಟ ಈ ತನಕ ನಡೆದಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದರೆ,  ಬೆಳೆದು ನಿಂತಿರುವ ಭ್ರಷ್ಟಾಚಾರವನ್ನು ತೊಡೆದು ಹಾಕಿ  ಸ್ವಾತಂತ್ರ್ಯದ ಫಲವನ್ನು ದೇಶದೆಲ್ಲರಿಗೆ ಲಭ್ಯಗೊಳಿಸುವ ಹೋರಾಟವಾಗಿ ಈ ಚಳವಳಿಯನ್ನು ಅರ್ಥೈಸಲಾಗಿದೆ.
ಗಾಂಧಿ ಪ್ರೇರಿತ ಸತ್ಯಾಗ್ರಹ, ಹೋರಾಟದ ಶಕ್ತಿ ಭಾರತದಲ್ಲಿ ಈಗಲೂ ಜೀವಂತವಾಗಿದೆ ಎಂಬುದನ್ನು ಅಣ್ಣಾ ಹಜಾರೆ ಈ ಮೂಲಕ ಸ್ಥಿರೀಕರಿಸಿದ್ದು, ಒಳ್ಳೆಯ ಜನನಾಯಕನೊಬ್ಬ ಪ್ರಾಮಾಣಿಕವಾಗಿ ಹೋರಾಟಕ್ಕಿಳಿದರೆ ಇಡೀ ದೇಶವೇ ಆತನ ಜೊತೆ ಕೈ ಜೋಡಿಸುತ್ತದೆ ಎಂಬುದನ್ನು ಅಣ್ಣಾ ಪುನರಪಿ ಸಾಬೀತುಗೊಳಿಸಿದ್ದಾರೆ.
ಸರಕಾರದ ಎಚ್ಚರಿಕೆಯ ನಡೆ..
ಜನ ಲೋಕಪಾಲ್ ಮಸೂದೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಅಣ್ಣಾ ಹಜಾರೆಯವರನ್ನು ಬಂಧಿಸುವ ಮೂಲಕ ಆರಂಭದಲ್ಲಿ ಕೊಂಚ ಎಡವಿದ್ದರೂ ಅಂತಿಮವಾಗಿ ದೇಶದ ಜನರ ಮನಸ್ಥಿತಿಯನ್ನು ಮತ್ತು ಮಿತಿಮೀರಿದ ಭ್ರಷ್ಟಾಚಾರದ ಪರಿಣಾಮಗಳನ್ನು ಲಕ್ಷಿಸಿ ಈ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸುವ ಮೂಲಕ ಮತ್ತು ಅದಕ್ಕೆ ಸಹಮತ ಸಾಧಿಸುವ ನಿಟ್ಟಿನಲ್ಲಿ ಅಂತಿಮವಾಗಿ ಸರಿಯಾದ ಸಮಾಧಾನ ನೀಡಿದೆ. ಮಸೂದೆ ಸಂಬಂಧಿಸಿದಂತೆ ಬಿಜೆಪಿ ಸಹಿತ ಅನೇಕ ರಾಜಕೀಯ ಪಕ್ಷಗಳಲ್ಲಿ ಇದ್ದ ಇಬ್ಬಂದಿ ನಿಲುವುಗಳು ಕಳೆದ ಹತ್ತು ದಿನಗಳಲ್ಲಿ ವಿವಿಧ ರೀತಿಯಲ್ಲಿ ಬಯಲಾಗಿದ್ದು, ಅಂತಿಮವಾಗಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸ್ಥಿರವಾದ ಒಂದು ನಿಲುವಿಗೆ ಬರುವಂತಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಹಮತ ಏರ್ಪಡಿಸುವಲ್ಲೂ ಯಶಸ್ವಿಯಾಗಿದೆ.

ಶನಿವಾರ, ಆಗಸ್ಟ್ 20, 2011

ನೋಡಿ ನಿರ್ಮಲ ಜಲ ಸಮೀಪದಿ...


ಕರಾವಳಿಗೂ ಯಕ್ಷಗಾನಕ್ಕೂ ಅದೇನೋ ಅವಿನಾಭಾವ ಸಂಬಂಧ. ಮಳೆ ನಿಂತು ಹೋದರೂ ಹನಿ ನಿಲ್ಲಲಿಲ್ಲ ಎಂಬಂತೆ ಯಕ್ಷಗಾನ ದೊಡ್ಡ ಮೇಳಗಳು ರಜೆ ಘೋಷಿಸಿ ಕಲಾವಿದರು ಮನೆಯತ್ತ ಹೆಜ್ಜೆ ಹಾಕಿದರೂ ನಮ್ಮಲ್ಲಿ ಯಕ್ಷಮಾತೆಯ ಗೆಜ್ಜೆಯ ನಿನಾದ ಮಾತ್ರ ನಿಲ್ಲುವುದಿಲ್ಲ.
ಮಳೆಗಾಲದಲ್ಲಿ  ಸಾಮಾನ್ಯವಾಗಿ ದೊಡ್ಡದೊಡ್ಡ ಮೇಳಗಳಿಗೆ ರಜೆಯ ಕಾಲ. ಹಾಗಾಗಿ ದೊಡ್ಡ ಮೇಳಗಳ ಅನುಪಸ್ಥಿತಿಯಲ್ಲಿ  ಯಕ್ಷಸೇವೆಯಲ್ಲಿ ತೊಡಗುವುದೇ ಈ ಚಿಕ್ಕಮೇಳ.
ಏನಿದು ಚಿಕ್ಕಮೇಳ?
ಚಿಕ್ಕ ಮೇಳ ಎಂದರೆ ಯಕ್ಷಗಾನ ಮೇಳದ ಕಿರು ರೂಪ. ದೊಡ್ಡ ಮೇಳಗಳಲ್ಲಿ ಇರುವಷ್ಟು ಕಲಾವಿದರು ಇದರಲಿಲ್ಲ. ಇಲ್ಲಿ ಭಾಗವತರು, ಚೆಂಡೆವಾದಕರು, ಮದ್ದಳೆಯವರು , ಶೃತಿಗಾರ ಹಾಗೂ ಇಬ್ಬರು ವೇಷದಾರಿಗಳಷ್ಟೇ ಯಕ್ಷಗಾನ ನಡೆಸಿಕೊಡುತ್ತಾರೆ. ವ್ಯತ್ಯಾಸವೆಂದರೆ ಒಂದು ಪ್ರಸಂಗವನ್ನೂ ಪೂರ್ತಿಯಾಗಿ ಆಡಿತೋರಿಸುವುದು ಇಲ್ಲಿ ಸಾಧ್ಯವಿಲ್ಲ. ಚಿಕ್ಕಮೇಳಗಳು ಯಾವುದಾದರೊಂದು ಪೌರಾಣಿಕ ಪ್ರಸಂಗದ ಆಯ್ದ ಭಾಗವನ್ನಷ್ಟೇ ಇಲ್ಲಿ ನಿರೂಪಿಸುತ್ತಾರೆ.
ಈ ಚಿಕ್ಕ ಮೇಳಗಳ ಕಲಾಸೇವೆ ಏನಿದ್ದರೂ ಮುಖ್ಯವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ಸಂದರ್ಭದಲ್ಲಿ. ಈ ಸಮಯದಲ್ಲಿ ಕಲಾವಿದರ ಪುಟ್ಟ ತಂಡವೊಂದು ರೂಪುಗೊಳ್ಳುತ್ತದೆ. ಬಳಿಕ ತಮ್ಮ ಕಲಾ ಪ್ರಕಾರಗಳೊಂದಿಗೆ ಹೊರಟು ಒಂದಷ್ಟು ಮನೆಗಳನ್ನು ಗುರುತಿಸಿ ಹಿಂದಿನ ದಿನ ಅವರಿಂದ ಆಮಂತ್ರಣ ಪಡೆದುಕೊಳ್ಳಲಾಗುತ್ತದೆ. ಕಾರ್ಯಕ್ರಮದ ಪ್ರಯುಕ್ತ ಗಣಪತಿ ಸ್ವಸ್ತಿಕಕ್ಕೆ ಬೇಕಾಗುವ ಕೆಲವೇ ವಸ್ತುಗಳ ಪಟ್ಟಿ ಬರೆದುಕೊಟ್ಟು ಸಂಜೆ ಇಂತಹಾ ಸಮಯಕ್ಕೆ ಬರುವುದಾಗಿ ಹೇಳಿ ಅಲ್ಲಿಂದ ವಿದಾಯ ಕೋರುತ್ತದೆ. ನಂತರ ಮಾರನೇ ದಿನ ನಿಗದಿತ ಸಮಯಕ್ಕೆ ಅಲ್ಲಿ ಯಕ್ಷ ಝೆಂಕಾರ ಅನುರಣಿಸುತ್ತದೆ.
ಎಲ್ಲರಿಗೂ ಸಂಭ್ರಮ!
ಮನೆಯೊಳಗೆ ಯಕ್ಷಗಾನ ನಡೆದರೆ ಅದು ಶುಭಪ್ರದ ಎನ್ನುವುದು ನಮ್ಮಲ್ಲಿ ಹಿಂದಿನಿಂದಲೂ ಇರುವ ನಂಬಿಕೆ. ಇಂದಿಗೂ ಹಲವು ಮನೆಗಳಲ್ಲಿ ಯಕ್ಷಗಾನ ಬಯಲಾಟ ಆಡಿಸುವ ಪದ್ದತಿಯಿದೆ. ಯಕ್ಷಗಾನ ಆಡಿಸುತ್ತೇನೆ ಎಂದು ಹೊತ್ತ ಎಷ್ಟೋ ಹರಿಕೆಗಳು ಫಲನೀಡಿದ ಉದಾಹಣೆಗಳೂ ನಮ್ಮ ಮುಂದಿದೆ. ಹಾಗಾಗಿ ಅದೇ ಕಲಾಪ್ರಕಾರವಾಗಿರುವ ಈ ಚಿಕ್ಕ ಮೇಳಗಳು ಮನೆಗೆ ಆಗಮಿಸಿದಾಗ ಸಹಜವಾಗಿಯೇ ಮನೆಯ ಹಿರಿಕಿರಿಯರಾದಿ ಎಲ್ಲರೂ ಸಂಭ್ರಮ ಪಡುತ್ತಾರೆ.
ಸುಮಾರು ಅರ್ಧಗಂಟೆಗಳಷ್ಟು ಕಾಲ ಈ ಯಕ್ಷಗಾನ ಜರುಗುತ್ತದೆ. ಪ್ರದರ್ಶನದ ಬಳಿಕ ಇಷ್ಟಾನುಸಾರ ನೀಡಿದ ಕಾಣಿಕೆ ಪ‌ಡೆಯುವ ಈ ಚಿಕ್ಕಮೇಳಗಳು ಮುಂದೆ ಇನ್ನೊಂದು ಮನೆಯತ್ತ ಸಾಗುತ್ತದೆ.
ಪ್ರಸ್ತುತ ಚಿತ್ರದಲ್ಲಿರುವ ತಂಡ ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿಯ ಕಲಾವಿದರದ್ದು. ಇಲ್ಲಿ ಭಾಗವತರಾಗಿ ಅಶೋಕ ಕುಂದರ್ ಅಲ್ಲೂರು, ಮದ್ದಲೆಯಲ್ಲಿ ಮಹಾಬಲ ಬುಕ್ಕಿಗುಡ್ಡೆ, ಶ್ರುತಿಯಲ್ಲಿ ನಾಗರಾಜ ಸಿದ್ಧಾಪುರ, ಕಲಾವಿದರಾದ ಜಯರಾಮ ಶಂಕರ ನಾರಾಯಣ, ಸ್ತ್ರೀವೇಷದಲ್ಲಿ ವಿಶ್ವನಾಥ ಕಿರಾಡಿಯವರಿದ್ದಾರೆ. ಚಿಕ್ಕಮೇಳದ ಮೆನೇಜರ್ ಪ್ರಭಾಕರ್ ನಾಯಕ್ ನಂಚಾರು ಹಾಗೂ ಯಜಮಾನರು ದಿನಕರ ಕುಂದರ್ ನಡೂರು ಮಂದಾರ್ತಿ.
ಇತ್ತೀಚಿನ ದಿನಗಳಲ್ಲಿ ಬಯಲಾಟ ನೋಡುವ ವ್ಯವಧಾನ ನಮ್ಮಲ್ಲಿ ಕಡಿಮೆಯಾಗುತ್ತಿದೆ. ಅಂತದ್ದರ ನಡುವೆ ಇಂತಹಾ ಯಕ್ಷಗಾನದ ಸಾರವನ್ನು ತಿಳಿಸುವ ಚಿಕ್ಕಮೇಳಗಳು ಈ ರೀತಿಯಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ಇಂದಿನ ಪ್ರಬಲ ಮಾಧ್ಯಮವಾಗಿ ರೂಪುಗೊಂಡಿರುವ ಟೀವಿ ವಾಹಿನಿಗಳಲ್ಲಿ ಮೂಡಿ ಬರುವ ರಿಯಾಲಿಟಿ ಶೋ, ಧಾರಾವಾಹಿ ಇನ್ನೊಂದು ಮತ್ತೊಂದರ ನಡುವೆ ಕರಾವಳಿಯ ಗಂಡುಕಲೆ ಯಕ್ಷಗಾನ ಅಪಾಯದಂಚಿನಲ್ಲಿರುವುದಂತೂ ಸತ್ಯ
ಯುವಜನತೆ ಇಂತಹಾ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವಂತಾಗಬೇಕು. ಈ ಲೇಖನಕ್ಕೆ ಚಿತ್ರಗಳನ್ನು ಒದಗಿಸಿದವರು ಸಚಿನ್ ಬಾರಕೂರು. ಮಾಹಿತಿ ನೀಡಿದವರು ವಿಜಯ್ ಬಾರಕೂರು.
ಅವರಿಗೆ ಕೃತಜ್ಞತೆಗಳು.

ನೋಟಿನ ಮಾಲೆ, ಚಕ್ಕುಲಿ, ಲಡ್ಡು!

ನಾಳೆ ಬೆಳಗಾದರೆ ಪೊಡವಿಗೊಡೆಯನ ನೆಲೆವೀಡು ಉಡುಪಿಯಲ್ಲಿ ಸಂಭ್ರಮವೋ ಸಂಭ್ರಮ.
ಅದಕ್ಕೆ ಕಾರಣ ಕಿಟ್ಟಣ್ಣನ ಜನ್ಮದಿನ.
ಈಗಾಗಲೇ ಶ್ರೀಕೃಷ್ಣ ಮಠದಲ್ಲಿ ಅದಕ್ಕಾಗಿ ಭರದ ತಯಾರಿ ಪೂರ್ಣಗೊಂಡಿದೆ.
ಒಂದೆಡೆ ವಿಟ್ಲಪಿಂಡಿಯಂದು ರಥಬೀದಿಯಲ್ಲಿ ಮೊಸರು ಕುಡಿಕೆ ಒಡೆಯಲು ಕುಡಿಕೆ ಕಟ್ಟುವ ಕಾರ್ಯ ಭರದಿಂದ ಸಾಗುತ್ತಿದ್ದರ, ಇನ್ನೊಂದೆಡೆ ಕೃಷ್ಣನ ದರ್ಶನಕ್ಕಾಗಿ ಬರುವ ಲಕ್ಷಾಂತರ ಭಕ್ತಾದಿಗಳಿಗೆ ವಿತರಿಸಲು ಚಕ್ಕುಲಿ, ಲಡ್ಡುಗಳ ತಯಾರಿಕೆಯ ಕಾರ್ಯ ವೇಗ ಪಡೆದುಕೊಂಡಿದೆ.

ಭಕ್ತರಿಗೆ ಚಕ್ಕುಲಿ, ಲಡ್ಡು ಪ್ರಸಾದವಾಗಿ ವಿತರಿಸುವುದು ಇಲ್ಲಿನ ರೂಢಿ, ಅದಕ್ಕಾಗಿಯೇ 75 ಸಾವಿರ ಲಡ್ಡು ಹಾಗೂ 1.5 ಲಕ್ಷ ಚಕ್ಕುಲಿ ತಯಾರಿ ಕಾರ್ಯ ವಾರದ ಹಿಂದೆಯೇ ಶುರುವಾಗಿದೆ. ಸುಮಾರು 15 ಮಂದಿ ಅಡುಗೆ ಭಟ್ಟರು ಈ ಕಾಯಕದಲ್ಲಿ ತೊ‌ಡಗಿಕೊಂಡಿದ್ದಾರೆ. ಇದಕ್ಕೆ ನೇತೃತ್ವವನ್ನು ಖುದ್ದು ಪರ್ಯಾಯ ಶೀರೂರು ಮಠಾಧೀಶರೇ ವಹಿಸಿಕೊಂಡಿದ್ದಾರೆ. ಭಕ್ತರಿಗೆ ಹಂಚಲ್ಪಡುವ ಈ ಪ್ರಸಾದ ತಯಾರಿಕೆಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ. ಜಗದೋದ್ಧಾರನಿಗೆ ಇದೇ ತಿಂಡಿಗಳನ್ನು ಮೊದಲು ನೈವೇದ್ಯ ಮಾಡಲಾಗುತ್ತದೆ.
ನಾಳೆಯ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆಯಿದೆ. ಮೊಸರು ಕುಡಿಕೆ ಒಡೆಯವುದು, ಮಲ್ಲಗಂಬ ಏರುವುದು, ಹುಲಿವೇಷ ಸ್ಪರ್ಧೆಗಳು ಕಣ್ಣಿಗೆ ಹಬ್ಬಉಂಟುಮಾಡುತ್ತದೆ. ಹುಲಿ ವೇಷ ಇಲ್ಲಿನ ವಿಶೇಷ ಆಕರ್ಷಣೆಯಾಗಿದ್ದು, ಈ ಹುಲಿ ವೇಷಧಾರಿಗಳಿಗೆ ಸ್ವಾಮೀಜಿಗಳೇ ಖರ್ಚು ಭರಿಸುತ್ತಾರಲ್ಲದೆ ನೋಟಿನ ಮಾಲೆಯನ್ನೇ ಹಾಕಿ ಗೌರವಿಸುತ್ತಾರೆ.
ಅಂತೂ ಉಡುಪಿಯಲ್ಲಿ ಹಬ್ಬ ಜೋರಿರುತ್ತದೆ.
ಪುರುಸೋತ್ತಾದರೆ ನೀವೂ ಬನ್ನಿ!

ಗುರುವಾರ, ಆಗಸ್ಟ್ 18, 2011

ದಿನಕಳೆದರೂ ಗೂಡು ಸೇರದ ಬಾವುಟಗಳು!

ಸ್ವಾತಂತ್ರ್ಯ ದಿನಾಚರಣೆ ಮುಗಿದು ದಿನಗಳೇ ಉರುಳಿವೆ.
ಹಿಂದೆಲ್ಲ ಧ್ವಜ ಹಾರಿಸಿ ಸಿಹಿ ಹಂಚಿ ಸಂಭ್ರಮಿಸಿದ ಮರು ದಿನವೇ ತ್ರಿವರ್ಣ ಧ್ವಜಗಳು ಗೂಡು ಸೇರುತ್ತಿದ್ದವು.
ಆದರೆ ಇಂದಿನ ಪರಿಸ್ಥಿತಿ ತುಸು ಭಿನ್ನವಾಗಿದೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಕಳೆದು ಮೂಱ್ನಾಲ್ಕು ದಿನಗಳು ಕಳೆದರೂ ತ್ರಿವರ್ಣ ಧ್ವಜ ಹಾರುತ್ತಲೇ ಇದೆ.
ಇದಕ್ಕೆ ಕಾರಣ ಮರೆವು ಅಲ್ಲ.
ಅಣ್ಣ ಹಜಾರೆ ಎಂಬ ಮುತ್ಸದ್ಧಿ ಯಿಂದ ಹತ್ತಿಕೊಂಡಿರುವ ಭ್ರಷ್ಟಾಚಾರ ವಿರುದ್ಧದ ಕಿಡಿ. ಇಂದು ಈ ಹೋರಾಟಕ್ಕೆ ದೇಶದಾದ್ಯಂತ ಬೆಂಬಲ ಸಿಕ್ಕಿದೆ. ಎಲ್ಲರ ಕೈಯಲ್ಲಿ ವಿಜೃಂಭಿಸುತ್ತಿರುವ ತ್ರಿವರ್ಣಧ್ವಜದ ಪಟ ಪಟ ಸದ್ದಿಗೆ ಭ್ರಷ್ಟರು ಕಂಗಾಲಾಗಿ ಹೋಗಿದ್ದಾರೆ. ಜನಲೋಕಪಾಲ್ ಜಾರಿಗಾಗಿ ಅಣ್ಣಾ ಹಜಾರೆ ಹಮ್ಮಿಕೊಂಡಿರುವ ಸತ್ಯಾಗ್ರಹ ಇದೀಗ ದೇಶದೆಲ್ಲೆಡೆ ಎರಡನೇ ಸ್ವಾತಂತ್ರ್ಯ ಸಂಗ್ರಾಮವೋ ಎಂಬಂತೆ ರೂಪುಗೊಂಡಿದೆ.
ಪ್ರತೀ ರಾಜ್ಯದಲ್ಲೂ ಅಣ್ಣಾ ಹೋರಾಟಕ್ಕೆ ಬೆಂಬಲ ಸಿಗುತ್ತಿದೆ. ವಿದ್ಯಾರ್ಥಿಗಳು, ನೌಕರರು, ಸ್ವಯ ಸೇವಾ ಸಂಸ್ಥೆಗಳು, ವೈದ್ಯರು, ವಕೀಲರು, ಸ್ವಾತಂತ್ರ್ಯ ಹೋರಾಟಗಾರರು... ಹೀಗೆ ದೇಶ ಪ್ರೇಮಿಗಳ ದಂಡೇ ರಸ್ತೆಗಿಳಿದು ಬೆಂಬಲ ಸೂಚಿಸುತ್ತಿವೆ.
ಹೀಗೆ ಅಣ್ಣಾರ ಉದ್ದೇಶ ಈಡೇರಿಕೆಗಾಗಿ ಮೆರವಣಿಗೆ, ಸತ್ಯಾಗ್ರಹ, ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವ ಮಂದಿಯ ಕೈಯಲೆಲ್ಲಾ ತ್ರಿವರ್ಣ ಧ್ವಜ ರಾರಾಜಿಸುತ್ತಿರುವುದು ಸ್ವಾತಂತ್ರ್ಯ ಸಂಗ್ರಾಮವನ್ನು ಮತ್ತೆ ನೆನಪಿಸುತ್ತಿದೆ.
'ತ್ರಿವರ್ಣ ಧ್ವಜಕೈಯಲ್ಲಿದ್ದರೆ ಅದೇನೋ ಉತ್ಸಾಹ ಬಂದಂತಾಗುತ್ತದೆ. ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ತ್ರಿವರ್ಣಧ್ವಜ ಹಿಡಿದೇ ಭಾಗವಹಿಸುವುದು ಇಷ್ಟವಾಗುತ್ತದೆ' ಎನ್ನುತ್ತಾಳೆ ಕಾಲೇಜು ವಿದ್ಯಾರ್ಥಿನಿ ಶೋಭ.
ಬೆಂಗಳೂರಿನಲ್ಲಿ ನಡೆದ ಸತ್ಯಾಗ್ರಹದಲ್ಲಿ ವಿಶೇಷವಾಗಿ ಗಮನಿಸಬಹುದಾದ್ದೆಂದರೆ ಈ ಬಾರಿ ಎಲ್ಲರಲ್ಲೂ ಖಾದಿ ಬಾವುಟ ಹಿಡಿದಿರುವುದು. ಪ್ಲಾಸ್ಟಿಕ್ ನಿಂದಾಗುವ ಅಪಾಯದ ಕುರಿತು ಎಲ್ಲರೂ ಜನಜಾಗೃತಿ ಮೂಡಿರುವುದಕ್ಕೆ ಇದು ಸಾಕ್ಷಿ ನೀಡಿದೆ. ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಜನತೆ ಪ್ಲಾಸ್ಟಿಕ್ ಬಾವುಟ ತೊರೆಯುವ ಮೂಲಕ ದೇಶ ಪ್ರೇಮವಷ್ಟೇ ಅಲ್ಲ, ಪರಿಸರ ಪ್ರೇಮವನ್ನೂ ತೋರಿಸಿದ್ದಾರೆ.
ಅಣ್ಣಾ ನೇತೃತ್ವದಲ್ಲಿ ಆರಂಭವಾಗಿರುವ ಸತ್ಯಾಗ್ರಹ, ಚಳವಳಿಗಳು ಸರಕಾರಕ್ಕೆ ನಷ್ಟ ತಂದು ಕೊಟ್ಟರೂ ತ್ರಿವರ್ಣ ಧ್ವಜ ವ್ಯಾಪಾರಿಗಳಿಗೆ ಮಾತ್ರ ಭರ್ಜರಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ವ್ಯಾಪಾರ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಈ ಸಂಖ್ಯೆಯಲ್ಲಿ ಧ್ವಜ ಮಾರಾಟವಾಗಿದೆ ಎನ್ನುತ್ತಾರೆ ವ್ಯಾಪಾರಿಯೋರ್ವರು.
'ಜೈ ಹೋ ಅಣ್ಣಾ!

ಭಾನುವಾರ, ಆಗಸ್ಟ್ 14, 2011

ಅಂದು ದಾಸ್ಯ ಮುಕ್ತ ದೇಶಕ್ಕಾಗಿ, ಇಂದು ಭ್ರಷ್ಟಾಚಾರ ಕ್ಲೇಶಕ್ಕಾಗಿ...

ಸಾಗಿದೆ ಹೋರಾಟ... ಚಳವಳಿ!



ನಾಳೆ ಆಗಸ್ಟ್ 15. ದೇಶದೆಲ್ಲೆಡೆ ದೊಡ್ಡ ಸಂಭ್ರಮ.
ದೂರದ ದೆಹಲಿಯ ಕೆಂಪುಕೋಟೆಯಿಂದ ಹಿಡಿದು ಇಲ್ಲೇ ನಮ್ಮ ಸುತ್ತಮುತ್ತಲಿನ ಶಾಲೆ, ಕಾಲೇಜು, ಕಚೇರಿ, ಸಂಘ ಸಂಸ್ಥೆಗಳಲ್ಲೆಲ್ಲ ಪರಸ್ಪರ ಸ್ವಾತಂತ್ರ್ಯೋತ್ಸವದ್ದೇ ಶುಭಾಶಯ ವಿನಿಮಯ.
ಎಲ್ಲೆಲ್ಲೂ ತಿರಂಗದ ಪಟ... ಪಟ ಹಾರಾಟ. ಪರಸ್ಪರ ಸಿಹಿ-ಖುಷಿಗಳ ಹಂಚೋಣ.
ಹೌದು,
ನಮಗೆ ಸ್ವಾತಂತ್ರ್ಯ ಬಂದು 64 ವರ್ಷಗಳು ಕಳೆದು ಹೋದವು. ಪರಕೀಯರ ಕಪಿಮುಷ್ಠಿಯಿಂದ ಹೊರಬರಲು ಅದೇನೆಲ್ಲಾ ಪಡಿಪಾಟಲು ಪಡ‌ಬೇಕಾಯಿತು, ಅದೆಷ್ಟು ಬಲಿದಾನಗಳು ಬೇಕಾದವು ಎನ್ನುವುದು ಇದಿಷ್ಟು ವರ್ಷ ಕಳೆದರೂ ನಾವ್ಯಾರೂ ಮರೆತಿಲ್ಲ. ಮರೆಯಲು ಸಾಧ್ಯವೂ ಇಲ್ಲ.
ಸತ್ಯಾಗ್ರಹದ ಮೂಲಕ ನಮ್ಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಆಯಾಮ ತಂದು ಕೊಟ್ಟವರು ಮಹಾತ್ಮಾಗಾಂಧಿ. ಈಗ ಅವರು ನಮ್ಮೊಂದಿಗಿಲ್ಲ. ನಮ್ಮನ್ನವರು ಅಗಲಿ ವರ್ಷಗಳೇ ಸಂದಿವೆ. ಆದರೂ ಅವರ ನೇತೃತ್ವದಲ್ಲಿ ತರಲಾದ 'ಸ್ವಾತಂತ್ರ್ಯ ಜ್ಯೋತಿ' ನಂತರದ ಬಹಳಷ್ಟು ವರ್ಷಗಳಲ್ಲಿ ಚೆನ್ನಾಗಿಯೇ ಉರಿಯುತ್ತಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಆ ಜ್ಯೋತಿಗೆ ಭ್ರಷ್ಟಾಚಾರವೆಂಬ ಕೆಟ್ಟ ತೈಲ ಸೇರಿಕೊಳ್ಳುವವರೆಗೆ.
ಇಂದು ಅದೇ ಜ್ಯೋತಿಯ ಬೆಳಕಲ್ಲಿ ನಾವಿದ್ದೇವಾದರೂ ಅವರೆಲ್ಲ ಸೇರಿ ತಂದು ಕೊಡುವಾಗ ಇದ್ದ ಪ್ರಖರತೆ ಈಗ ಖಂಡಿತಾ ಅದಕ್ಕೆ ಇಲ್ಲ. ದಿನದಿಂದ ದಿನಕ್ಕೆ ಕೆಟ್ಟ ತೈಲದ ಪ್ರಮಾಣ ಹೆಚ್ಚುತ್ತಲೇ ಹೋಗುತ್ತಿದೆ. ಪರಿಣಾಮ, ಜ್ಯೋತಿ ಮಸುಕಾಗುತ್ತಿದೆಯಲ್ಲದೆ ಹಾಕಿದ ಬತ್ತಿಯೂ ಕರಟಿ ಹೋಗಿ ನಿಧಾನಕ್ಕೆ ನಂದುವ ಲಕ್ಷಣ ಗೋಚರಿಸುತ್ತಿದೆ.
ಈ ಜ್ಯೋತಿಯನ್ನು ಮತ್ತೆ ಉದ್ದೀಪನ ಗೊಳಿಸುವವರಾರು ಎಂಬ ನಿರೀಕ್ಷೆಯಲ್ಲಿರುವಾಗಲೇ ಮತ್ತೊಂದು ಆಶಾಕಿರಣ ನಮ್ಮ ನಡುವೆ ಆವಿರ್ಭವಿಸಿರುವುದು ನಿಜಕ್ಕೂ ಖುಷಿಯ ಸಂಗತಿ. ಬಹುಷಃ ಭಾರತ ಮಾತೆಗೂ ಇದು ಸಂತಸ ತಂದಿರಬಹುದು.
ಭ್ರಷ್ಟಾಚಾರಕ್ಕೆ ಸಿಕ್ಕಿದೇಶ ನಲುಗುತ್ತಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ ಆವಿರ್ಭವಿಸಿರುವ ಈ ಅಣ್ಣಾ ಹಜಾರೆ ಎಂಬ ಮುತ್ಸದ್ದಿ ಗಾಂಧೀಜಿಯ ಹೋರಾಟದ ಸಿದ್ಧಾಂತಗಳ ಪ್ರತಿಪಾದಕರೂ ಹೌದು. ಅವರೀಗ ಕೈಗೆತ್ತಿಕೊಂಡಿರುವ 'ಜನಲೋಕಪಾಲ್ ಮಸೂದೆ' ಕುರಿತ ಹೋರಾಟ ಒಂದರ್ಥದಲ್ಲಿ ಎರಡನೇ ಸ್ವಾತಂತ್ರ್ಯ ಹೋರಾಟವಾಗಿ ರೂಪುಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ಈಗ ಭಾರತದ ಜನತೆ ಅವರೊಂದಿಗೆ ನಿಲ್ಲಬೇಕಿದೆ. ಈ ಹೋರಾಟದಲ್ಲಿ ಹಜಾರೆಯನ್ನು ಗೆಲ್ಲಿಸುವ ಮೂಲಕ ನಾವೂ ಗೆದ್ದು, ಗಾಂಧೀಜಿ ಕಂಡ ಭ್ರಷ್ಟಾಚಾರ ರಹಿತ ಸ್ವತಂತ್ರ ಹಾಗೂ ಸಮೃದ್ಧ ಭಾರತ ರೂಪುಗೊಳಿಸಬೇಕಿದೆ. ಮಾತ್ರವಲ್ಲ, ಮತ್ತೊಮ್ಮೆ ನಿಜಾರ್ಥದಲ್ಲಿ ಸ್ವತಂತ್ರ, ಸಂಪೂರ್ಣ ಪ್ರಜಾಸತ್ತಾತ್ಮಕ  ಗಣರಾಜ್ಯವಾಗಿ ಭಾರತ ತನ್ನ ಅಸ್ತಿತ್ವ ಕಂಡುಕೊಳ್ಳಬೇಕಿದೆ.
'ಹೀಗೇ ಕುಳಿತರೆ ನಮ್ಮ ದೇಶವನ್ನು
ನಿರ್ನಾಮ ಮಾಡಿಬಿಡುತ್ತಾರೆ.
ಭ್ರಷ್ಟಾಚಾರ ತೊಲಗಿಸಬೇಕು,
ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ'
ಹೀಗೆಂದು ಎಲ್ಲರಿಗಿಂತ ಮುಂದಾಗಿ ಉಪವಾಸ ಕುಳಿತು ಸರಕಾರವನ್ನೇ ನಡುಗಿಸಿದ ಈ ಅಣ್ಣಾ ಸಾಮಾನ್ಯರೇನಲ್ಲ.
ಅಣ್ಣಾ ಹಜಾರೆ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಡಾ.ಕಿಷನ್ ಬಾಬುರಾವ್ ಹಜಾರೆ ಜನಿಸಿದ್ದು 1940 ರಲ್ಲಿ. ಅವರು ಮೂಲತಃ ಮುಂಬೈ ಸಮೀಪದ ಅಹಮ್ಮದ್ ನಗರ ಜಿಲ್ಲೆಯ ಪುಟ್ಟ ಹಳ್ಳಿಯಿಂದ ಬಂದವರು.  ತಂದೆ ಆಯುರ್ವೇದ ಫಾರ್ಮಸಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅಣ್ಣಾಗೆ ಆರು ಮಂದಿ ಸೋದರ- ಸೋದರಿಯರು. ಬಡತನದ ಬೇಗೆಯಿಂದ ಮುಂಬೈಗೆ ಬಂದ ಅಣ್ಣಾ ಅಲ್ಲಿಯೇ ಉದ್ಯೋಗ ಹಿಡಿದುಕೊಂ‌ಡು ಒಂದಷ್ಟು ವರ್ಷಗಳನ್ನು ಕಳೆದರು. ಬಳಿಕ 1963ರಲ್ಲಿ ಭಾರತೀಯ ಸೇನೆ ಸೇರುವ ಮೂಲಕ ದೇಶ ಸೇವೆಗೆ ತಮ್ಮನ್ನು ತಾವು ಪೂರ್ಣವಾಗಿ ಅರ್ಪಿಸಿಕೊಂಡರು. 1965ರಲ್ಲಿ ನಡೆದ ಭಾರತ- ಪಾಕಿಸ್ಥಾನ ಯುದ್ಧದಲ್ಲಿ ಪವಾಡವೋ ಎಂಬಂತೆ ಬದುಕಿ ಬಂದ ಅಣ್ಣಾ 1975ರಲ್ಲಿ ಸೇನೆಯ ವೃತ್ತಿಗೆ ಸ್ವನಿವೃತ್ತಿ ಘೋಷಿಸಿ ತಮ್ಮ ಹಳ್ಳಿಯಾದ ರಾಲೆಗನ್ ಸಿದ್ಧಿಗೆ ಬಂದರು. ಬಳಿಕ 'ತರುಣ್ ಮಂಡಲ್' ಹೆಸರಿನ ಯುವಕರ ಸಂಘವೊಂದನ್ನು ಕಟ್ಟಿಕೊಂಡು ಹಳ್ಳಿಯ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತರು. ಅಣ್ಣಾ ನೇತೃತ್ವದಲ್ಲಿ ಆ ಹಳ್ಳಿ ಅದೆಷ್ಟು ಅಭಿವೃದ್ಧಿ ಹೊಂದಿತೆಂದರೆ ಅವರ ಕಾರ್ಯ ಗುರುತಿಸಿ 1992ರಲ್ಲಿ ಭಾರತ ಸರ್ಕಾರವೇ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.
ಇಷ್ಟೇ ಅಲ್ಲ, ಸಾಮಾಜಿಕ ಕಾಳಜಿ ಹೊಂದಿರುವ ಅಣ್ಣಾ ಸಮಾಜಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ಹಳ್ಳಿಯಲ್ಲಿ ಶಿಕ್ಷಣ ಹಾಗೂ ಸುಶಿಕ್ಷಿತರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ 1979ರಲ್ಲಿ 'ಸಂತ ಯಾದವ ಬಾಬಾ ಶಿಕ್ಷಣ ಪ್ರಸರಕ ಮಂ‌ಡಲಿ' ನಿರ್ಮಾಣ ಮಾಡಿ ಸುಮಾರು ನಾಲ್ಕು ಲಕ್ಷ ರೂ.ಗಳ ಸರಕಾರ ಧನ ಸಹಾಯದೊಂದಿಗೆ ಹೈಸ್ಕೂಲ್ ನಿರ್ಮಾಣಕ್ಕೆ ನೆರವಾದರು. 2005- ಮಾಹಿತಿ ಹಕ್ಕು ಕಾಯ್ದೆ ಕಾರ್ಯಗತವಾದ ಮೇಲೆ ಈ ಕಾಯ್ದೆ ಕುರಿತು ಜನಜಾಗೃತಿ ಮೂಡಿಸುತ್ತಾ ರಾಜ್ಯದಲ್ಲಿ 12 ಸಾವಿರ ಕಿಲೋ ಮೀಟರ್ ಗೂ ಹೆಚ್ಚು ದೂರ ಸಂಚರಿಸಿದರು. ಈ ಬಗ್ಗೆ ಒಂದು ಲಕ್ಷ ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. ರಾಜ್ಯದ 24 ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಿದರು. ಈ ಮಹಾ ಚಳುವಳಿಯಲ್ಲಿ ಭಿತ್ತಿಪತ್ರ ಪ್ರದರ್ಶನಗೊಂಡವು. ಕಾಯ್ದೆಯ ನಿಬಂಧನೆಗಳ ಪುಸ್ತಕಗಳನ್ನು ಸಾಮಾನ್ಯ ದರದಲ್ಲಿ ವಿತರಿಸಲಾಯಿತು. ಇದು ಎಲ್ಲೆಡೆ ಸಾಕಷ್ಟು ಜಾಗೃತಿ ಉಂಟು ಮಾಡಿತ್ತಲ್ಲದೆ, ನಾಗರಿಕ ಹಕ್ಕುಗಳ ಬಗ್ಗೆ ಸಾಮಾನ್ಯ ಜನರೂ ತಿಳಿಯುವಂತಾಯಿತು.
ಇಂದು ನಿನ್ನೆಯಲ್ಲ, ಭ್ರಷ್ಟಾಚಾರದ ವಿರುದ್ಧ ಅಣ್ಣಾ ಬಹುಹಿಂದಿನಿಂದಲೂ ಹೋರಾ‌ಟ ನಡೆಸುತ್ತಲೇ ಬಂದಿದ್ದಾರೆ.
'The dream of India as a Strong nation
will not be realised without self reliant
self-sufficient villages, this can be
achived only through social commitment
and involvement of the common man'
ಎನ್ನುವ ಅಣ್ಣಾ ಕೆಟ್ಟ ತೈಲದಿಂದಾಗಿ ಮಬ್ಬು ಮಬ್ಬಾಗಿ ಉರಿಯುವ ಜ್ಯೋತಿಯನ್ನು ಮತ್ತೆ ಉದ್ದೀಪನ ಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸ್ವಾತಂತ್ರ್ಯ ಸಿಕ್ಕಿ ಇವಿಷ್ಟು ವರ್ಷಗಳಾದರೂ ಸ್ವತಂತ್ರ ಭಾರತ ಎಂದು ಎದೆಯುಬ್ಬಿಸಿ ಹೇಳಲು ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿಯಲ್ಲಿ ಅವರ ಹೋರಾಟಕ್ಕೆ ಖಂಡಿತಾ ಬೆಂಬಲ ಸಿಗಲೇ ಬೇಕಿದೆ.
ಒಂದರ್ಥದಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ದೇಶಕ್ಕೆ ಹೊಸತೊಂದು ದಿಕ್ಕು ತೋರಬೇಕಾಗಿದೆ. ಜನಲೋಕಪಾಲ್ ಮಸೂದೆ ಸಂಬಂಧಿಸಿದಂತೆ ರಾಷ್ಟವ್ಯಾಪಿ ಚರ್ಚೆಗೆ ಚಾಲನೆ ದೊರಕಿರುವ ಈ ಸಂದರ್ಭದಲ್ಲಿ ಈ ಕುರಿತು ಹೋರಾಟ ಕೈಗೆತ್ತಿಕೊಳ್ಳುವ ಜೊತೆಗೆ ಭಾರತವನ್ನು ಭ್ರಷ್ಟಾಚಾರ ಮುಕ್ತ ಗೊಳಿಸುವ ಮೂಲಕ 47ರ ಸ್ವಾತಂತ್ರ್ಯದ ಪರಮೋಚ್ಛ ಉದ್ದೇಶವನ್ನು ಈಡೇರಿಸಿಕೊಳ್ಳುವತ್ತ ನಾವಿದನ್ನು ಬಳಸಿಕೊಳ್ಳಬೇಕಾಗಿದೆ.
ಕರ್ನಾಟಕದಲ್ಲಿ ಲೋಕಾಯುಕ್ತರು ಭ್ರಷ್ಟಾಚಾರ ವಿರುದ್ಧ ನಡೆಸಿದ ಹೋರಾಟ ಮತ್ತು ಘನತೆಯಿಂದ ಹುದ್ದೆ ನಿರ್ವಹಿಸಿದ ರೀತಿ ಹಾಗೂ ಸಮಸ್ತ ಕಾರ್ಯನಿರ್ವಹಣೆ ಜನಲೋಕಪಾಲ ಮಸೂದೆಯ ನಿರ್ವಹಣೆಯಲ್ಲೂ ಯಶಸ್ಸಿನ ಸಾಧ್ಯತೆಗಳತ್ತ ಬೊಟ್ಟುಮಾಡಿದೆ.
ದೇಶವ್ಯಾಪಿ ಚಳವಳಿಗೆ ಇದು ಸಕಾಲ. ಭವ್ಯ ಹಾಗೂ ಸಮೃದ್ಧ ಭಾರತದ ಮರು ನಿರ್ಮಾಣಕ್ಕಾಗಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹೊಸ ಹೋರಾಟಕ್ಕೊಂದು ಸ್ಪೂರ್ತಿಯಾಗಬೇಕು.
ಆ ಮೂಲಕ ಸ್ವಾತಂತ್ರ್ಯ ಜ್ಯೋತಿಯಲ್ಲಿ ಸೇರಿರುವ ಕೆಟ್ಟತೈಲ ನಿರ್ಮೂಲನೆಯಾಗಬೇಕು.

ಶುಕ್ರವಾರ, ಆಗಸ್ಟ್ 12, 2011

ಕಡಲ ಮಕ್ಕಳ ರಜೆ ಮುಗಿಯಿತು...!

ಕಡಲ ಮಕ್ಕಳು ಮತ್ತೆ ತಮ್ಮ ಕಾಯಕದತ್ತ ಮುಖ ಮಾಡಿದ್ದಾರೆ.
ಐವತ್ತೇಳು ದಿನಗಳ ಸುದೀರ್ಘ ರಜೆಯ ಬಳಿಕ ಬುಧವಾರ ಅರಬ್ಬಿ ಕಡಲಲ್ಲಿ ಮತ್ತೆ ಮತ್ಸ್ಯ ಬೇಟೆ ಆರಂಭಗೊಂಡಿದ್ದು ಕರಾವಳಿಯಲ್ಲಿ ಮೀನುಗಾರಿಕಾ ಋತು ಆರಂಭಗೊಂಡಂತಾಗಿದೆ.
ಅತ್ತ ಅರಬ್ಬಿ ಕಡಲಿಗೆ ಒಂದೊಂದಾಗಿ ಮೀನುಗಾರಿಕಾ ಬೋಟ್ ಗಳು ಇಳಿಯುತ್ತಿದ್ದರೆ, ಇತ್ತ ಮೀನುಗಾರಿಕಾ ಬಂದರ್ ನಲ್ಲಿ ಹೊಸ ಹುರುಪು ಕಾಣಿಸಿಕೊಂಡಿದೆ.
ಈ ಬಾರಿ ಮೀನುಗಾರಿಕೆಯಲ್ಲಿ ತೊಡಗಲಿರುವ ದೋಣಿಗಳ ಪೈಕಿ ಯಾಂತ್ರೀಕೃತ ಸಣ್ಣ ದೋಣಿಗಳ ಸಂಖ್ಯೆ ಹೆಚ್ಚು. ಸುಮಾರು ಎರಡು ಸಾವಿರಕ್ಕೂ ಅಧಿಕ ಮೀನುಗಾರಿಕಾ ದೋಣಿಗಳಲ್ಲಿ 65 ಪರ್ಸಿಯನ್ ಬೋಟ್, 900 ಟ್ರಾಲ್ ಬೋಟ್, 1100 ಮೋಟಾರು ಬೋಟ್ ಗಳು ಸೇರಿದ್ದು, ಇವೆಲ್ಲ ಮೀನುಗಾರಿಕೆಗೆ ತೆರಳಿವೆ ಎಂದು ಇಲಾಖೆ ಮೂಲಗಳು ತಿಳಿಸಿದೆ.
ಆಳ ಸಮುದ್ರ ಮೀನುಗಾರಿಕೆ ದೋಣಿಗಳು ಒಂದು ವಾರದ ಮೊದಲೇ ಸಮುದ್ರಕ್ಕಿಳಿದಿದೆ. ಕೆಲವು ಸಮುದ್ರ ಮೀನುಗಾರರು ಆ.13 ರಂದು ಸಮುದ್ರ ಪೂಜೆ ನೆರವೇರಿಸಿ ಬಳಿಕ ಮೀನುಗಾರಿಕೆಗೆ ಇಳಿಯಲಿದ್ದಾರೆ.
ಕರ್ನಾಟಕ ಸಮುದ್ರ ಮೀನುಗಾರಿಕಾ ಕಾಯ್ದೆ 1986ರ ಅನ್ವಯ ರಾಜ್ಯ ಸರಕಾರ ಜೂ.15 ರಿಂದ ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧವಿಧಿಸಿ ರಜೆ ಘೋಷಿಸಿತ್ತು. ಈ ಅವಧಿ ಮೀನುಗಳ ಸಂತಾನೋತ್ಪತ್ತಿ ಕಾಲವಾಗಿದೆಯಲ್ಲದೆ ವಾತಾವರಣದಲ್ಲೂ ಏರುಪೇರು ಇರುವುದರಿಂದ ಈ ಅವಧಿಯನ್ನು ರಜೆ ಎಂದು ಘೋಷಿಸಲಾಗುತ್ತದೆ.
ಇದೀಗ ರಜೆಯ ಕಾಲ ಮುಕ್ತಾಯಗೊಂಡಿದ್ದು ವಾತಾವರಣವೂ ತಿಳಿಯಾಗಿರುವುದರಿಂದ ಮೀನುಗಾರರು ಸಂತಸದಿಂದಲೇ ತಮ್ಮ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
ಈ ಬಾರಿ ಹೆಚ್ಚು ಮೀನಿನ ಇಳುವರಿ ಸಿಗುವ ನಿರೀಕ್ಷೆ ಅವರದು.!

ಅಡಿಕೆಯ ಮಾನ ಕಳೆದೀತು ಕೊಳೆರೋಗ...

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬುದೊಂದು ನಾಣ್ಣುಡಿ.
ಈಗ ಮಾರುಕಟ್ಟೆಯಲ್ಲಿ ಅಡಿಕೆಯ ಮಾನ ಉಚ್ಚ್ರಾಯ ಸ್ಥಿತಿಯಲ್ಲಿದೆ. ಆದರೆ ಅಡಿಕೆ ಕೃಷಿಯನ್ನು ಬೆಂಬಿಡದೆ ಕಾಡುವ ಕೊಳೆರೋಗಕ್ಕೂ ಮಳೆಗಾಲಕ್ಕೂ ಬಿಡಿಸಲಾರದ ನಂಟು.
ಮಳೆಗಾಲದಲ್ಲಿ ಹೆಚ್ಚಾಗಿ ಅಡಿಕೆತೋಟಗಳನ್ನು ಕಾಡುವ ಕೊಳೆರೋಗದ ಬಗ್ಗೆ ಕೃಷಿಕರು ಮುನ್ನೆಚ್ಚರಿಕೆ ವಹಿಸಲು ಇದು ಸಕಾಲವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ಬೆಳೆ ಅಡಿಕೆ.
ಇದರಲ್ಲಿ ಯಾವುದೇ ಸಂಶಯಕ್ಕೆ ಆಸ್ಪದವಿಲ್ಲ. ಈ ಭಾಗದ ಕೃಷಿಕರಿಗೆ ಆರ್ಥಿಕ ಹಾಗೂ ಸಾಮಾಜಿಕ ಸುಭ್ರದತೆ ಒದಗಿಸುವಲ್ಲಿ ಮುಖ್ಯ ಪಾತ್ರ ಅಡಿಕೆಯದ್ದೇ.
ಇಲ್ಲಿ ಸರಿಸುಮಾರು 27,645 ಹೆಕ್ಟೇರ್ ಗಳಿಗೂ ಹೆಚ್ಚಿನ ಭೂಮಿಯಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಆರ್ಥಿಕ ಸಬಲತೆಗೆ ಯೋಗ್ಯವಾದ ಬೆಳೆ ಅಂತ ಹೇಳಬಹುದಾದರೂ ಇದೇನು ಅಷ್ಟು ಸಲೀಸಾಗಿ ಬೆಳೆಯುವ ಕೃಷಿ ಪ್ರಕಾರ ಅಲ್ಲ.
ಈ ಭಾಗದಲ್ಲಿ ಅನೇಕ ವರ್ಷಗಳಿಂದ ಅಡಿಕೆ ಬೆಳೆಯುತ್ತಾ ಬರಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ಬದಲಾಗುತ್ತಿರುವ ಋತುಮಾನಕ್ಕೆ ಕಾಣಿಸಿಕೊಳ್ಳುತ್ತಿರುವ ಕೀಟ ಹಾಗೂ ರೋಗಗಳಿಂದಾಗಿ ಅಡಿಕೆ ಗುಣಮಟ್ಟ ಹಾಗೂ ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ಈಗಂತೂ ಮಳೆಗಾಲ. ಎಲ್ಲೆಡೆ ಅಡಿಕೆಗೆ ಕೊಳೆರೋಗದ್ದೇ ಆತಂಕ. ಮಳೆ ನೀರಿಗೆ ಸಾಮಾನ್ಯವಾದ ಈ ರೋಗ ಅಡಿಕೆ ಇಳುವರಿ ಮೇಲೆ ಮಾತ್ರ ತೀವ್ರ ದುಷ್ಪರಿಣಾಮ ಬಿರುತ್ತದೆ.
ಈ ರೋಗ ತೋಟವೊಂದಕ್ಕೆ ಲಗ್ಗೆ ಇಟ್ಟಿತೆಂದರೆ ಇಳುವರಿಯಲ್ಲಿ ಶೇ.50 ರಿಂದ 90 ರಷ್ಟು ನಷ್ಟ ಉಂಟಾಯಿತೆಂದೇ ಅರ್ಥ.
ಕೊಳೆರೋಗದ ಲಕ್ಷಣ
ಮೊದಲಿಗೆ ಅಡಿಕೆ ಕಾಯಿಗಳ ಮೇಲೆ ಹಚ್ಚ ಹಸಿರು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತದೆ. ನಂತರ ಇದೇ ಮಚ್ಚೆಗಳು ದೊಡ್ಡದಾಗಿ ಕಾಯಿಗಳ ಮೇಲ್ಬಾಗದಲ್ಲೂ ಆವರಿಸಿ ನಿಧಾನಕ್ಕೆ ಕೊಳೆಯುವಂತೆ ಮಾಡುತ್ತದೆ.
 ರೋಗದ ತೀವ್ರತೆ ಹೆಚ್ಚಾದಾಗ ಅಡಿಕೆ ಕಾಯಿಗಳು ದಟ್ಟ ಹಸಿರು ಬಣ್ಣಕ್ಕೆ ತಿರುಗಿ ನೋಡನೋಡುತ್ತಲೇ ತೊಟ್ಟಿನಿಂದ ಕಳಚಿ ಉದುರಿಹೋಗುತ್ತಿದೆ.
ಹರಡುವಿಕೆ
ಕೊಳೆರೋಗ ಫೈಟಾಪ್ರತ್ ಆರಕೆ ಎಂಬ ಶಿಲೀಂದ್ರದಿಂದ ಹರಡುತ್ತದೆ. ಗಾಳಿ ಹಾಗೂ ಮಳೆ ಹನಿ ಮೂಲಕ ಆರೋಗ್ಯವಂತ ಕಾಯಿಗಳನ್ನು ಆವರಿಸಿಕೊಂಡು ನಾಲ್ಕೈದು ದಿನಗಳಲ್ಲಿ ಶಿಲೀಂದ್ರ ಹೆಚ್ಚಿ ರೋಗ ವ್ಯಾಪಿಸತೊಡಗುತ್ತದೆ.
ಕಡಿಮೆ ಉಷ್ಣಾಂಶ, ಹೆಚ್ಚು ಮಳೆ ತೇವಾಂಶದಿಂದ ಕೂಡಿದ ವಾತಾವರಣ, ಒಟ್ಟಾಗಿ ಬರುವ ಮಳೆ ಬಿಸಿಲು ಈ ರೋಗ ಹರಡುವಿಕೆಗೆ ಅನುಕೂಲವಾಗಿರುತ್ತದೆ.
ಹತೋಟಿ ಹೇಗೆ?
ಕೊಳೆ ರೋಗ ತಗುಲಿದ ಕಾಯಿಗಳು, ಒಣಗಿದ ಗೊಂಚಲುಗಳನ್ನು ಮೊದಲು ತೆಗೆದು ನಾಶಪಡಿಸಬೇಕು. ಅಡಿಕೆ ಗೊನೆಗೆ ಪಾಲಿಥೀನ್ ಹೊದಿಕೆ ಕಟ್ಟುವುದರಿಂದಲೂ ರೋಗದ ಹತೋಟಿ ಸಾಧ್ಯ. ಮೂರು ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್ ಪ್ರತೀ ಲೀಟರ್ ನೀರಿನಲ್ಲಿ ಅಥವಾ ಶೇಕಡಾ ಒಂದರ ಬೋರ್ಡೊ ದ್ರಾವಣವನ್ನು ಅಡಿಕೆ ಗೊನೆಗಳ ಮೇಲೆ ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಸಬೇಕು. ಬಳಿಕ 30 ರಿಂದ 45 ದಿನಗಳ ಅಂತರದಲ್ಲಿ ಎರಡನೇ ಸಿಂಪಡಣೆ.
ಒಂದು ವೇಳೆ ಮಳೆಗಾಲ ಮುಂದುವರಿದಲ್ಲಿ ಮೂರನೇ ಬಾರಿಯೂ ಸಿಂಪಡಸಬೇಕಾಗುವುದು. ರೋಗಾಣು ಮಣ್ಣಿನ ಪದರಲ್ಲೂ ಬದುಕುವುದರಿಂದ ಮಣ್ಣು ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು. ಕೊಳೆರೋಗ ನಿವಾರಿಸಲು ಕೃಷಿಕರ ಸಹಾಯಕ್ಕೆ ತೋಟಗಾರಿಕಾ ಇಲಾಖೆ 'ಹಾಟ್ ಕ್ಲಿನಿಕ್'ಗಳನ್ನು ಸ್ಥಾಪಿಸಿದೆ.
ಬೋರ್ಡೋದ್ರಾವಣ ತಯಾರಿಕಾ ವಿಧಾನ
ಬೋರ್ಡೋ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ ನಾಶಕ. ಇದನ್ನು ವೈಜ್ಞಾನಿಕವಾಗಿ ತಯಾರಿಸಿದರೆ ಮಾತ್ರ ಸಸ್ಯ ರೋಗಗಳ ಸಮರ್ಪಕ ನಿರ್ವಹಣೆ ಸಾಧ್ಯ.
ಬೋರ್ಡೋ ದ್ರಾವಣ ತಯಾರಿಕೆಗೆ ಬೇಕಾದ ವಸ್ತುಗಳು ಮೈಲುತುತ್ತು ಒಂದು ಕೆ.ಜಿ, ಸುಣ್ಣ ಒಂದು ಕೆ.ಜಿ, ನೀರು ನೂರು ಲೀಟರ್, 10 ಲೀಟರ್ ಸಾಮರ್ಥ್ಯದ ಎರಡು ಪ್ಲಾಸ್ಟಿಕ್ ಬಕೆಟ್, 100 ಲೀಟರ್ ಸಾಮರ್ಥ್ಯದ ಒಂದು ಪ್ಲಾಸ್ಟಿಕ್ ಡ್ರಮ್.
ಒಂದು ಕೆ.ಜಿ. ಮೈಲುತುತ್ತನ್ನು ಸಂಪೂರ್ಣ 10ಲೀಟರ್ ನೀರಿನಲ್ಲಿ ಕರಗಿಸಬೇಕು. ಒಂದು ಕೆ.ಜಿ ಸುಣ್ಣವನ್ನು ಮತ್ತೊಂದು 10 ಲೀಟರ್ ನೀರಿನಲ್ಲಿ ಕರಗಿಸಬೇಕು. ಎರಡನ್ನು ಒಂದು ಪ್ಲಾಸ್ಟಿಕ್ ಡ್ರಮ್ ಗೆ ಸುರಿಯಬೇಕು. ಈಗ ಬೋರ್ಡೋ ದ್ರಾವಣ ಸಿದ್ಧ. ಇದು ಸರಿ ಇದೆಯೇ ಎಂದು ಪರೀಕ್ಷಿಸಲು ಶುದ್ಧವಾದ ಚಾಕು ಅಥವಾ ಬ್ಲೇಡ್ ನ್ನು ದ್ರಾವಣದಲ್ಲಿ ಅದ್ದಿ ತೆಗೆದಲ್ಲಿ ಅದರ ಮೇಲೆ ಕಂದು ಅಥವಾ ಕೆಂಪು ಬಣ್ಣ ಕಂಡಬಂದಲ್ಲಿ ದ್ರಾವಣ ಆಮ್ಲಯುಕ್ತವಾಗಿದ್ದು, ಸಿಂಪಡಣೆಗೆಯೋಗ್ಯವಾಗಿಲ್ಲ ಎಂಬುದಾಗಿ ತಿಳಿಯಬೇಕು. ಇದನ್ನು ಸರಿಪಡಿಸಲು ಇನ್ನೂ ಸ್ವಲ್ಪ ಸುಣ್ಣ ತಿಳಿಯನ್ನು ದ್ರಾವಣಕ್ಕೆ ಸೇರಿಸಬೇಕು. ನಂತರ ಚಾಕೂ ಬ್ಲೇಡ್ ನ್ನು ದ್ರಾವಣದಲ್ಲಿ ಅದ್ದಿದಾಗ ಅದು ಹೊಳಪಾಗಿದಲ್ಲಿ ದ್ರಾವಣ ಸಿಂಪಡಣೆಗೆ ಸೂಕ್ತ ಎಂದು ತಿಳಿಯುವುದು ಹಾಗೂ ಕೂಡಲೇ ದ್ರಾವಣವನ್ನು ಸಿಂಪಡಸಬೇಕು. ಅಡಿಕೆ ಕೊಳೆರೋಗ ನಿಯಂತ್ರಿಸಲು ರೈತರು ಮೈಲುತುತ್ತು ಬಳಸಿದ್ದಲ್ಲಿ ತೋಟಗಾರಿಕಾ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್, ಜಿಲ್ಲಾ ವಲಯ ಸಸ್ಯ ಸಂರಕ್ಷಣೆ ಯೋಜನೆ ಹಾಗೂ ರಾಜ್ಯ ವಲಯ ತೋಟಗಾರಿಕಾ ಬೆಳೆಗಳ ರೋಗ ಮತ್ತು ಕೀಟಗಳ ಸಮಗ್ರ ನಿಯಂತ್ರಣ ಯೋಜನೆಗಳಲ್ಲಿ ಶೇ.50ರಷ್ಟು ಸಹಾಯಧನ ದೊರೆಯಲಿದೆ.
ದಕ್ಷಿಣ ಕನ್ನಡ , ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅತೀ ಹೆಚ್ಚು. ಹಾಗಾಗಿ ಅಡಿಕೆ ಬೆಳೆಗೆ ಕೊಳೆ ರೋಗ ಭೀತಿಯೂ ಹೆಚ್ಚು. ಸೂಕ್ತ ಮುನ್ನೆಚ್ಚರಿಕೆ ವಹಿಸಕೊಂಡಲ್ಲಿ ರೋಗಗಳನ್ನು ತಡೆಗಟ್ಟಿ ಉತ್ತಮ ಗುಣಮಟ್ಟದ ಅತಿಹೆಚ್ಚು ಇಳುವರಿ ಪಡೆಯಲು ಖಂಡಿತಾ ಸಾಧ್ಯವಿದೆ.