ಬುಧವಾರ, ಏಪ್ರಿಲ್ 13, 2011

ಈ ಜೀವಕ್ಕೆ ಅಪಾಯವಾಗಬಾರದು...
ಮೂಢನಂಬಿಕೆ ಬಿತ್ತುವ, ಪೊಳ್ಳು ಪವಾಡ ನಡೆಸುವ, ಅಮಾಯಕರ ಭಾವನೆಗಳಿಗೆ ಮಂಕುಬೂದಿ ಎರಚುವ... ಹೀಗೆ ನೂರೆಂಟು ಅಪವಾದಗಳು ಬಾಬಾ ಮೇಲಿದೆಯಾದರೂ, ಇಂದು ಜಗತ್ತಿನ ಅದೆಷ್ಟೋ ಲಕ್ಷ ಮಂದಿಯ ಮನದಲ್ಲಿ ಬಾಬಾ ಜೀವಕ್ಕೆ ಅಪಾಯವಾಗಬಾರದು... ಎಂಬ ಭಾವನೆಯಿರುವುದು ಖಂಡಿತಾ ಸುಳ್ಳಲ್ಲ.
 ಬಾಬಾ ಪವಾಡ ಪುರುಷನಲ್ಲದಿರಬಹುದು, ತಾನೇ ಭಗವಂತ ಎಂದು ಹೇಳಿಕೊಳ್ಳುವುದು ಸುಳ್ಳೇ ಆಗಿರಬಹುದು. ನೂರಾರು ಕೋಟಿ ರೂ.ಗಳ ಆಸ್ತಿ ಮಾಡಿರಿವುದು ನಿಜವೇ ಇರಬಹುದು. ಅದೇನೇ  ಆದರೂ ಸಮಾಜಕ್ಕೆ ಬಾಬಾ ನೀಡಿದ ಸೇವೆ ಮಾತ್ರ ಆತನ ಶತ್ರುಗಳ ಬಾಯನ್ನೂ ಮುಚ್ಚಿಸಬಲ್ಲಂತಿದೆ.
ಅನಂತಪುರ ಜಿಲ್ಲೆಯ ಪುಟ್ಟಪರ್ತಿ ಗ್ರಾಮದಲ್ಲಿ 1926ರ ನವೆಂಬರ 20 ರಂದು ಈಶ್ವರಮ್ಮ, ಪೆದ್ದ ವೆಂಕಮರಾಜು ದಂಪತಿಯ ಪುತ್ರನಾಗಿ ಜನಿಸಿದ ಈ ಬಾಬಾಗೆ ಈಗ ಭರ್ತಿ 85 ವರ್ಷ!
ಒಂದು ಕಾಲಕ್ಕೆ ಕುಗ್ರಾಮವಾಗಿದ್ದ ಪುಟ್ಟಪರ್ತಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆಯೆಂದರೆ ಅದಕ್ಕೆ ಕಾರಣ ಬಾಬಾ ಎನ್ನುವುದು ಸ್ಪಟಿಕ ಸತ್ಯ. 1944ರ ಸುಮಾರಿಗೆ ಪುಟ್ಟಪರ್ತಿಯಲ್ಲಿ ಪುಟ್ಟದಾದ ಮಂದಿರ ನಿರ್ಮಾಣದೊಂದಿಗೆ ಶುರುವಾದ ಬಾಬಾ ಯಾತ್ರೆ ಬಳಿಕ 1950ರಲ್ಲಿ ಪ್ರಶಾಂತಿ ನಿಲಯ, 1954ರಲ್ಲಿ ಉಚಿತ ಆಸ್ಪತ್ರೆ ನಿರ್ಮಾಣ.. ಹೀಗೆ ಸಾಗುತ್ತಲೇ ಹೋಗಿದೆ. ಮೊನ್ನೆ ಮೊನ್ನೆ ಬಾಬಾ ಅಸೌಖ್ಯಗೊಂಡು ಆಸ್ಪತ್ರೆ ಸೇರುವವರೆಗೆ.
ಬಾಬಾ ಅದೆಷ್ಟು ಸಮರ್ಥ ಸಂಘಟನಾಗಾರರೆಂದರೆ ಅವರ ಅನುಪಸ್ಥಿತಿಯಲ್ಲೂ ಅವರು ಸ್ಥಾಪಿಸಿದ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಟ್ರಸ್ಟ್ ಗಳು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿವೆ.
ಬಾಬಾ ಶಿಕ್ಷಣ ಸಂಸ್ಥೆಗಳು ಇಂದಿಗೂ ಶಿಸ್ತಿಗೆ ಹೆಸರಾಗಿ ಉಳಿದುಕೊಂಡಿದೆ. ಇಲ್ಲಿ ಶಿಕ್ಷಣ ಕೊಡಿಸಿದರೆ ಮಕ್ಕಳು ಉತ್ತಮ ಪ್ರಜೆಯಾಗಿ, ಶಿಸ್ತುಬದ್ಧ ಜೀವನಕ್ಕೆ ಮುನ್ನುಡಿ ಹಾಕಿಕೊಳ್ಳಬಲ್ಲರು ಎನ್ನುವ ನಂಬಿಕೆ ಈಗಲೂ ಲಕ್ಷಾಂತರೂ ಪೋಷಕರ ಮನಸ್ಸಲ್ಲಿದೆ. ಸತ್ಯಸಾಯಿ ಸೇವಾ ಸಮಿತಿ 1996ರಲ್ಲಿ ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ತಂದ ಕುಡಿಯುವ ನೀರಿನ ಯೋಜನೆಯಿಂದಾಗಿ ಅದೆಷ್ಟೂ ಮಂದಿ ಇಂದಿಗೂ ಬಾಬಾರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಯೋಜನೆಯಿಂದಾಗಿ ಅನಂತಪುರ ಜಿಲ್ಲೆಯ 750 ಹಳ್ಳಿಗಳಿಗೆ ಶುದ್ಧನೀರು ಸರಬರಾಜಾಗುತ್ತಿದೆಯಲ್ಲದೆ, ಬರಡಾದ ಭೂಮಿಯಲ್ಲಿ ಇಂದು ಹಸುರು ಚಿಗುರೊಡೆದಿದೆ.
ತಾನು ದೇವರು ಎನಿಸಿಕೊಳ್ಳಬೇಕಾದರೆ ದೈವಾಂಶಸಂಭೂತನಾಗಿರಬೇಕೆಂದೇನೂ ಇಲ್ಲ. ಜೀವಿಗಳ ಹಿತ ಕಾಯುವವನನ್ನೇ ದೇವರೆನುತ್ತೇವೆ. ಬಾಬಾ ಕೂಡಾ ತನ್ನ ವಿವಿಧ ಯೋಜನೆಗಳ ಮೂಲಕ ಜನರ ಹಿತ ಕಾಪಾಡುವ ಯತ್ನ ಇಲ್ಲಿ ಮಾಡಿರುವುದು ಸುಳ್ಳಲ್ಲ.
ಇಲ್ಲಿ ಗಮನಿಸಬೇಕಾದು ಏನೆಂದರೆ ಯಾರೂ ವಿವಾದಾತೀತರಲ್ಲ ಎನ್ನುವುದು.ಅದರಲ್ಲೂ ಕೆಲವೊಂದು ಬಾಬಾಗಳು, ಸ್ವಾಮೀಜಿ ಎನಿಸಿಕೊಂಡವರು, ಧಾರ್ಮಿಕ ಮುಖಂಡರನ್ನು ಸದಾ ಒಂದಲ್ಲಾಒಂದು ವಿವಾದ ಬೆನ್ನತ್ತುತ್ತಲೇ ಇರುತ್ತದೆ. ಸಹಜವಾಗಿಯೇ ಸತ್ಯಸಾಯಿಬಾಬ ಬೆನ್ನಲೂ ವಿವಾದಗಳು ಸುತ್ತಿಕೊಂಡಿವೆ.
ಆದರೆ ಕಳೆದು ಹೋದ ಈ 85 ವರ್ಷಗಳಲ್ಲಿ ಬಾಬಾ ಬೆಳೆದ ವೇಗ, ಕಟ್ಟಿದ ಸಂಸ್ಥೆಗಳು, ಜನಪರ ಕಾಳಜಿ, ವಿಶಿಷ್ಟ ವ್ಯಕ್ತಿತ್ವ, ಸಾಧನೆಗಳೇ ಇಂದು ಆತನನ್ನು ಉಳಿದವರಿಗಿಂತ ವಿಭಿನ್ನವಾಗಿಸಿದೆ ಮತ್ತು ಗೌರವಿಸುವಂತೆ ಮಾಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ