ಶನಿವಾರ, ಜುಲೈ 16, 2011

ಜ್ವರ ಬಂದರೆ...

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ...
ಸರಕಾರ ತೆಗೆದುಕೊಂಡಿರುವ ನಿರ್ಧಾರ ಸರಿ ಎಂದಾದರೆ  ಗಾದೆ ಮಾತು ಈ ಕೇರಳಿಗರಿಗೆ ಅಕ್ಷರಶಃ ಹೊಂದುತ್ತದೆ.
ವಿಷಯ ಏನಂದ್ರೆ ಗ್ಯಾಸ್ ಸಂಪರ್ಕ ವಿಲ್ಲದ ಕುಟುಂಬಗಳಿಗೆ ಇದುವರೆಗೆ ನೀಡಲಾಗುತ್ತಿದ್ದ ಅಡುಗೆ ಸೀಮೆ ಎಣ್ಣೆಯ ಪರವಾನಿಗೆ ರದ್ದುಪಡಿಸಲು ಕೇರಳ ಸರಕಾರ ತೀರ್ಮಾನಿಸಿದೆಯಂತೆ!
ಅದಕ್ಕೆ ಕಾರಣ ಪರವಾನಿಗೆ ವ್ಯಾಪಕವಾಗಿ ದುರುಪಯೋಗ ವಾಗುತ್ತಿರುವ ದೂರುಗಳು ಕೇಳಿಬರುತ್ತಿರುವುದು.
ಮೊನ್ನೆಯಷ್ಟೇ ತಿರುವನಂತಪುರದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವೇಳೆ ಇದು ಜಾರಿಗೆ ಬಂದಲ್ಲಿ ಸೀಮೆಎಣ್ಣೆ ನಂಬಿಯೇ ಅಕ್ಕಿಯನ್ನು ಅನ್ನ ಮಾಡಿ ಉಣ್ಣುವ ಕುಟುಂಬಗಳಿಗೆ ಮುಂದಿನ ಅಗಸ್ಟ್ ನಿಂದ ನೋ ಸೀಮೆ ಎಣ್ಣೆ.
ಅಡುಗೆ ಅನಿಲ ರಹಿತ ಕುಟುಂಬಗಳಿಗೆ ರಾಜ್ಯ ಸರಕಾರ ಸೀಮೆಎಣ್ಣೆ ಸ್ಟೌಗಾಗಿ ಪ್ರತೀ ತಿಂಗಳು 6 ಲೀಟರ್ ಸೀಮೆಎಣ್ಣೆ ಸಬ್ಸಿಡಿ ದರದಲ್ಲಿ ವಿತರಿಸುತ್ತಿತ್ತು. ರಾಜ್ಯದ 2.63 ಲಕ್ಷ ಕುಟುಂಬ ಗಳಿಗೆ ಈ ಪರವಾನಿಗೆ ನೀಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪರವಾನಿಗೆ ವ್ಯಾಪಕವಾಗಿ ದುರುಪಯೋಗವಾಗುತ್ತಿರುವುದು ಸರಕಾರಕ್ಕೆ ಗೊತ್ತಾಗಿದೆ. ಹಾಗಾಗಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ.
ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಗಗನಕ್ಕೇರಿರುವುದು ಗೊತ್ತಿರುವ ಸಂಗತಿ. ಅದೇ ತೈಲ ಕುಟುಂಬಕ್ಕೆ ಸೇರುವ ಸೀಮೆಎಣ್ಣೆ ಬೆಲೆಯೂ ವಿಪರೀತ ಎಂಬಂತೆ ಏರಿಕೆಯಾಗಿದೆ. ಇಂದೂ ಕೂಡಾ ರಾಜ್ಯದಲ್ಲಿ ಅನೇಕ ಕುಟುಂಬಗಳು ಅಡುಗೆ ಅನಿಲ ಸಂಪರ್ಕಹೊಂದಿಲ್ಲ. ಅವರೆಲ್ಲ ಸೀಮೆಎಣ್ಣೆ ಸ್ಟೌ ವನ್ನೇ ನಂಬಿಕೊಂಡಿದ್ದಾರೆ. ಅಲ್ಲದೆ ಈ ಯೋಜನೆಗೆ ಇವರು ಅರ್ಹ ಫಲಾನುಭವಿಗಳೂ ಹೌದು.
ಸರಕಾರದ ಈ ತೀರ್ಮಾನ ಇವರನ್ನು ಆತಂಕಕ್ಕೆ ತಳ್ಳಿದೆ.
ಇಲ್ಲಿ ಯಾರೋ ಬೆರಳೆಣಿಕೆಯ ವಂಚಕರು ನಡೆಸುತ್ತಿರುವ ಕೃತ್ಯಕ್ಕೆ ಅದೆಷ್ಟೋ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ.
ಸರಕಾರಈ ಯೋಜನೆ ಜಾರಿಗೆ ಬರುವುದಂತೂ ಖಚಿತ. ಜೊತೆಗೆ ಗ್ಯಾಸ್ ಖರೀದಿಸಲೂ ಶಕ್ತಿ ಇಲ್ಲದವರು ಇನ್ನಷ್ಟು ತೊಂದರೆಗೊಳಗಾಗುವುದೂ ನಿಜ.
'ಬಗ್ಗಿದವನಿಗೆ ಗುದ್ದು ಹೆಚ್ಚು' ಇದೂ ಇವರಿಗೆ ಅನ್ವಯವಾಗುತ್ತಾ?
ಗೊತ್ತಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ