ದೇಶದಲ್ಲಿ ಹೊಸ ಬದಲಾವಣೆ ತರುವ ಕೇಂದ್ರ ಲೋಕಪಾಲ್ ಮಸೂದೆ, ಹಿರಿಯ ಗಾಂಧೀವಾದಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಮೂರು ತಿಂಗಳ ಹಗ್ಗಜಗ್ಗಾಟದ ಬಳಿಕ ಕೊನೆಗೂ ಜಾರಿಯಾಗುವ ಕಾಲ ಸನ್ನಿಹಿತವಾಗಿದೆ.
ಅಣ್ಣಾ ನೇತೃತ್ವದ ಗಾಂಧಿ ಗಿರಿಗೆ ಮಣಿದ ಸರಕಾರ ಮಸೂದೆಯನ್ನು ಪಾರ್ಲಿಮೆಂಟ್ ನ ಉಭಯ ಸದನಗಳಲ್ಲಿ ಮಂಡಿಸಿ ಧ್ವನಿ ಮತದಿಂದ ಅಂಗೀಕಾರ ನೀಡಿದೆ.
ಮಸೂದೆಗೆ ಸಂಬಂಧಿಸಿದಂತೆ ದೇಶದ ಪ್ರಧಾನಿಯೂ ಲೋಕಪಾಲ ವ್ಯಾಪ್ತಿಗೆ ಬರಬೇಕೆನ್ನುವ ಶರತ್ತು ಸಹಿತ ಅಣ್ಣಾ ಮುಂದಿಟ್ಟ ಮೂರು ಪ್ರಮುಖ ಒತ್ತಾಯಗಳನ್ನು ಸರಕಾರ ಅಂತಿಮ ಕ್ಷಣದಲ್ಲಿ ಒಪ್ಪಿದ್ದು ನಿನ್ನೆ ಇಡೀ ದಿನ ವ್ಯಾಪಕ ಚರ್ಚೆ ನಡೆಸಿ ಉಭಯ ಸದನಗಳಲ್ಲಿ ಧ್ವನಿಮತದ ಅಂಗೀಕಾರದಿಂದ ಜನಲೋಕಪಾಲ್ ಮಸೂದೆ ಸ್ವೀಕರಿಸಿದೆ.
ಈ ಸಂಬಂಧ ಸರಕಾರ ನೀಡಿರುವ ಹೇಳಿಕೆಯಲ್ಲಿ ಸಂಸತ್ ನಲ್ಲಿ ಮಂಡಿಸಲಾದ ಈ ಮಸೂದೆಯನ್ನು ಸ್ಥಾಯೀ ಸಮಿತಿ ವಿಮರ್ಶೆಗೆ ಒಪ್ಪಿಸುವ ತೀರ್ಮಾನವನ್ನು ಸಂಸತ್ತು ಅಂಗೀಕರಿಸಿದ್ದು, ಇದು ಲೋಕಪಾಲ್ ಕಾನೂನು ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಹೆಜ್ಜೆ ಇಟ್ಟಂತಾಗಿದೆ. ಸಂಸತ್ ಅನುಮೋದನೆಯ ಮಾಹಿತಿಯನ್ನು ಸ್ವೀಕರ್ ಅವರ ಸಹಿಯೊಂದಿಗೆ ಸರಕಾರ ನಿನ್ನೆ ರಾತ್ರಿಯೇ ನಿರಶನ ನಿರತ ಅಣ್ಣಾಗೆ ಒಪ್ಪಿಸಿದ್ದು, ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಿತ್ತು. ಹನ್ನೆರಡು ದಿನಗಳ ನಿರಂತರ ಉಪವಾಸ ಸತ್ಯಾಗ್ರಹದ ಮಧ್ಯೆಯೂ ಅಣ್ಣಾ ನಿಲುವಿನಲ್ಲಿ ಧೃಢತೆಯಿದ್ದು, ಅಂತಿಮ ಗುರಿ ತಲುಪುವಲ್ಲಿ ಅಣ್ಣಾ ಯಶಸ್ವಿಯಾಗಿದ್ದಾರೆ. ಕೇಂದ್ರದ ಪತ್ರವನ್ನು ಸ್ವೀಕರಿಸಿ ನಿರಶನ ಅಂತ್ಯಗೊಳಿಸಿರುವ ಅಣ್ಣಾ ಇದೊಂದು ಅರ್ಧಂಶ ಗೆಲುವು ಇನ್ನರ್ಧಾಂಶ ಗೆಲುವು ಇನ್ನಷ್ಟೇ ಬರಬೇಕಾಗಿದೆ ಎನ್ನುವ ಮೂಲಕ ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ಹೋರಾಟವನ್ನು ಜೀವಂತವಿರಿಸುವ ಮತ್ತು ಮುಂದುವರಿಸುವ ಸಂಕಲ್ಪವನ್ನು ಪುನರುಚ್ಛರಿಸಿದ್ದಾರೆ. ಅದರೊಂದಿಗೆ ಈ ಹೋರಾಟ ಕೇಂದ್ರ ಸರಕಾರ ಜನ ಲೋಕಪಾಲ್ ಮಸೂದೆ ಜಾರಿಗೆ ಹೊಸ ಅಡ್ಡಿ ಆತಂಕಗಳನ್ನು ಮುಂದಿರಿಸದಂತೆ ಪರೋಕ್ಷ ಎಚ್ಚರಿಕೆಯೂ ನೀಡಿದೆ.ಕಳೆದ ಹನ್ನೆರಡು ದಿನಗಳಿಂದ ದೇಶಕ್ಕೆ ದೇಶವೇ ಅಚ್ಚರಿ ಪಡುವ ರೀತಿಯಲ್ಲಿ ಅಬಾಲವೃದ್ಧರಾದಿ ಜನತೆ ಅಣ್ಣಾ ಬೆಂಬಲಕ್ಕೆ ನಿಂತಿದ್ದು ಬಲುದೊಡ್ಡ ದಾಖಲೆಯನ್ನೇ ಸೃಷ್ಟಿಸಿತ್ತು. ಸ್ವಾತಂತ್ರ್ಯ ಹೋರಾಟದ ಬಳಿಕ ಜಯಪ್ರಕಾಶ್ ನಾರಾಯಣ್ ರ ಸಮಗ್ರ ಕ್ರಾಂತಿ ಹೊರತು ಪಡಿಸಿದರೆ ಇಂತದ್ದೊಂದು ದೊಡ್ಡ ಸತ್ಯಾಗ್ರಹ ಮತ್ತು ಹೋರಾಟ ಈ ತನಕ ನಡೆದಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದರೆ, ಬೆಳೆದು ನಿಂತಿರುವ ಭ್ರಷ್ಟಾಚಾರವನ್ನು ತೊಡೆದು ಹಾಕಿ ಸ್ವಾತಂತ್ರ್ಯದ ಫಲವನ್ನು ದೇಶದೆಲ್ಲರಿಗೆ ಲಭ್ಯಗೊಳಿಸುವ ಹೋರಾಟವಾಗಿ ಈ ಚಳವಳಿಯನ್ನು ಅರ್ಥೈಸಲಾಗಿದೆ.
ಗಾಂಧಿ ಪ್ರೇರಿತ ಸತ್ಯಾಗ್ರಹ, ಹೋರಾಟದ ಶಕ್ತಿ ಭಾರತದಲ್ಲಿ ಈಗಲೂ ಜೀವಂತವಾಗಿದೆ ಎಂಬುದನ್ನು ಅಣ್ಣಾ ಹಜಾರೆ ಈ ಮೂಲಕ ಸ್ಥಿರೀಕರಿಸಿದ್ದು, ಒಳ್ಳೆಯ ಜನನಾಯಕನೊಬ್ಬ ಪ್ರಾಮಾಣಿಕವಾಗಿ ಹೋರಾಟಕ್ಕಿಳಿದರೆ ಇಡೀ ದೇಶವೇ ಆತನ ಜೊತೆ ಕೈ ಜೋಡಿಸುತ್ತದೆ ಎಂಬುದನ್ನು ಅಣ್ಣಾ ಪುನರಪಿ ಸಾಬೀತುಗೊಳಿಸಿದ್ದಾರೆ.
ಸರಕಾರದ ಎಚ್ಚರಿಕೆಯ ನಡೆ..
ಜನ ಲೋಕಪಾಲ್ ಮಸೂದೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಅಣ್ಣಾ ಹಜಾರೆಯವರನ್ನು ಬಂಧಿಸುವ ಮೂಲಕ ಆರಂಭದಲ್ಲಿ ಕೊಂಚ ಎಡವಿದ್ದರೂ ಅಂತಿಮವಾಗಿ ದೇಶದ ಜನರ ಮನಸ್ಥಿತಿಯನ್ನು ಮತ್ತು ಮಿತಿಮೀರಿದ ಭ್ರಷ್ಟಾಚಾರದ ಪರಿಣಾಮಗಳನ್ನು ಲಕ್ಷಿಸಿ ಈ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸುವ ಮೂಲಕ ಮತ್ತು ಅದಕ್ಕೆ ಸಹಮತ ಸಾಧಿಸುವ ನಿಟ್ಟಿನಲ್ಲಿ ಅಂತಿಮವಾಗಿ ಸರಿಯಾದ ಸಮಾಧಾನ ನೀಡಿದೆ. ಮಸೂದೆ ಸಂಬಂಧಿಸಿದಂತೆ ಬಿಜೆಪಿ ಸಹಿತ ಅನೇಕ ರಾಜಕೀಯ ಪಕ್ಷಗಳಲ್ಲಿ ಇದ್ದ ಇಬ್ಬಂದಿ ನಿಲುವುಗಳು ಕಳೆದ ಹತ್ತು ದಿನಗಳಲ್ಲಿ ವಿವಿಧ ರೀತಿಯಲ್ಲಿ ಬಯಲಾಗಿದ್ದು, ಅಂತಿಮವಾಗಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸ್ಥಿರವಾದ ಒಂದು ನಿಲುವಿಗೆ ಬರುವಂತಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಹಮತ ಏರ್ಪಡಿಸುವಲ್ಲೂ ಯಶಸ್ವಿಯಾಗಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ