ಎಂಥಾ ಮಳೆ ಮಾರಾಯರೆ!
ಚಿಟಪಟ...ಚಿಟಪಟ.. ಅಂತ ಒಂದೇ ಸಮನೆ ಸುರಿಯುವ ಈ ಜಡಿಮಳೆಗೆ ಕಿಟಕಿ ಬದಿಯಲ್ಲೊಂದು ಛೇರ್ ಎಳೆದುಕೊಂಡು, ಕೈಯಲ್ಲಿ ಬಿಸ್ಸಿ, ಬಿಸಿ ಟೀ ಹಿಡಿದು, 'ಜನಜೀವನ ಅಸ್ತವ್ಯಸ್ತ', 'ಕರಾವಳಿಯಲ್ಲಿ ಮುಸಲಧಾರೆ', 'ತಗ್ಗು ಪ್ರದೇಶ ಜಲಾವೃತ', 'ಕೃತಕ ನೆರೆ'... ಅಂತ ಪೇಪರ್ ಹೆಡ್ಡಿಂಗ್ ಓದೋ ಮಜಾನೇ ಬೇರೆ.
ಆದರೆ ಎಲ್ಲರೂ ಹಿಡಿಶಾಪ ಹಾಕುವ ಈ ಮಳೆ ಅಂದರೆ ನನಗಂತೂ ತುಂಬಾ ಇಷ್ಟ.
ಯಾಕೋ ಗೊತ್ತಿಲ್ಲ ಈ ಮಳೆಯಲ್ಲಿ ನೆನೆಯೋದು ನನ್ನ ಇಷ್ಟದ ಹವ್ಯಾಸಗಳಲ್ಲಿ ಒಂದು.
ನನ್ನ ಪಾಲಿಗೆ ಮಳೆ ಅಂದರೆ ನೆನಪು, ಮಳೆ ಎಂದರೆ ದುಃಖ, ಮಳೆ ಅಂದರೆ ಸಂಭ್ರಮ, ಮಳೆ ಅಂದರೆ ಗೆಳೆಯ...
ಈ ಮಳೆಯ ಜೊತೆಯಲ್ಲೇ ಸಾಗುತ್ತಾ ಸಾಗುತ್ತಾ ಬಾಲ್ಯದ ಆ ಸುಂದರ ದಿನಗಳಿಗೆ ಗುಡ್ ಬೈ ಹೇಳಿ ಅದ್ಯಾವಾಗ ದೊಡ್ಡವನಾದೆನೋ ತಿಳಿಯಲಿಲ್ಲ.
ಚಿಕ್ಕಂದಿನಲ್ಲಿ ಅಮ್ಮ ಮೈತುಂಬ ರೇನ್ ಕೋಟ್ ಹಾಕಿಸಿ, ತಲೆಗೊಂದು ಮಂಕೀಕ್ಯಾಪ್ ಜೊತೆಗೆ ರೈನ್ ಕೋಟಿನ ಟೊಪ್ಪಿಯನ್ನೂ ಹಾಕಿ ಮಳೆಯಲ್ಲಿ ಒಂದಿಂಚೂ ನೆನೆಯದಂತೆ ಜೋಪಾನವಾಗಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದುದ್ದು ನಿನ್ನೆ ಮೊನ್ನೆ ಅಲ್ವಾ ಅಂತ ಅನಿಸುತ್ತಿದೆ.
ಬಾಲ್ಯದ ತುಂಟಾಟ, ಕೀಟಲೆ ಚೇಷ್ಟೆಗಳು ಮಳೆಯೊಂದಿಗೆ ನೆನಪಾಗಿ ದಾಖಲಾಗಿ ಹೋಗಿದೆ. ನೋಡ ನೋಡುತ್ತಲೇ ರೈನ್ ಕೋಟ್ ಬದಲಿಗೆ ಕೊಡೆ ಬಂತು. ಅದರಲ್ಲೂ ಹೈಸ್ಕೂಲ್ ಮೆಟ್ಟಿಲೇರಿದ ಮೇಲಂತೂ ಕೊಡೆಗೂ ವಿದಾಯ ಹೇಳಿ ಮಳೆಯಲ್ಲೇ ನೆನೆದುಕೊಂಡು ಆಕ್ಸಿ...ಆಕ್ಸಿ.. ಅಂತ ಸೀನುವುದು ಅಭ್ಯಾಸವಾಯಿತು.
ನಮ್ಮ ಅವಸ್ಥೆ ನೋಡಿ ಲೆಕ್ಕದ ಮೇಸ್ಟ್ರು ಗರಂ ಆಗುತ್ತಿದ್ದರಲ್ಲದೆ ಬೆನ್ನಿಗೊಂದಿಷ್ಟು ಬಿಸಿ ಮುಟ್ಟಿಸಿ ಬುದ್ದಿವಾದ ಹೇಳುತ್ತಿದ್ದರು.
ಆ ಕ್ಷಣಕ್ಕೆ ಅವರು ಹೇಳಿದ್ದೆಲ್ಲದಕ್ಕೂ ಓಕೆ... ಶಾಲೆ ಬಿಟ್ಟಿತೆಂದರೆ ಛೇ..ಛೇ...ಈ ಮಳೆಗೆ ಕೊಡೆಯಾಕೆ?
ಇಂದು ಅದೆಲ್ಲ ನೆನಪಾಗುತ್ತಿದೆ.
ಯಾಕೆಂದರೆ ಹೊರಗಡೆ ಮಳೆ ಸುರಿಯುತ್ತಿದೆ. ಪ್ರೈಮರಿ ಸ್ಕೂಲ್ ನ ಚೆಡ್ಡಿ ದಿನದಿಂದ ಕಾಲೇಜ್ ನ ಜೀನ್ಸುವರೆಗೂ ಮಳೆಯೊಂದಿಗೇ ಬದುಕು ನಡೆದು ಬಂದಿದೆ.
ಚಾರ್ಲಿ ಚಾಪ್ಲೀನ್ ಒಂದು ಕಡೆ ಹೇಳುತ್ತಾನೆ, ಮಳೆಯಲ್ಲಿ ನೆನಯೋದು ಅಂದರೆ ನನಗೆ ತುಂಬಾಇಷ್ಟ. ಯಾಕೆಂದರೆ ಅಲ್ಲಿ ಕಣ್ಣುಗಳು ಅಳುತ್ತಿರುವುದು ಬೇರೆಯವರಿಗೆ ಗೊತ್ತಾಗುವುದೇ ಇಲ್ಲ.. ಎಷ್ಟೊಂದು ನಿಜ ಅಲ್ವಾ?
ಇಂದು ಇದೆಲ್ಲವನ್ನು ದಾಟಿ ಉದ್ಯೋಗ ಸೇರಿಕೊಂಡಿದ್ದೇನೆ. ಖಾಸಗಿ ಕಂಪೆನಿಗಳ ಉದ್ಯೋಗವೆಂದರೆ ಹಾಗೆಯೆ, ಅಲ್ಲಿ ಕಟ್ಟುನಿಟ್ಟಾದ ನಿಯಮಗಳಿರುತ್ತದೆ. ಡ್ರೆಸ್ ಕೋಡ್ ಇರುತ್ತದೆ. ತುಂಬಾ 'ನೀಟ್' ಆಗಿರಬೇಕಾಗುತ್ತದೆ.
ಹಾಗಾಗಿ ಬಾಲ್ಯದ, ಯೌವನದ ತುಂಟಾಟಗಳೆಲ್ಲ ನೆನಪಾಗಿ ಮತ್ತೆ ಮಳೆಯ ತೆಕ್ಕೆಗೆ ಬಿದ್ದುಬಿಡಬೇಕು ಅಂತ ಅನಿಸುತ್ತಾದರೂ, ಬರೀ ಕಿಟಕಿ ಬದಿಯಿಂದ ನೀರ ಹನಿ ನೋಡುವುದಕ್ಕಷ್ಟೇ ಆ ಆಸೆ ಸೀಮಿತಗೊಳ್ಳುತ್ತದೆ.
ಸಾಗರದಂತಹಾ ಜೀವನದಲ್ಲಿ ನೆನಪುಗಳೆಂಬ ಪ್ರತೀ ಅಲೆಯೂ ಪ್ರತೀ ಕ್ಷಣ ದಡಕ್ಕೆ ಅಪ್ಪಳಿಸುತ್ತಾ ಕಣ್ಣಮುಂದೆ ನೂರಾರು ಮಧುರ ಕ್ಷಣ ಗಳನ್ನು ಹೊತ್ತು ತರುತ್ತದೆ. ಪ್ರತಿಬಾರಿಯೂ ಮಳೆ ಸುರಿದಾಗ ನಾನು ಮತ್ತೆ ಖುಷಿಪಡುತ್ತೇನೆ.
ಹಾಗೆ ಆಸೆ ತೀರದೆ ಮಳೆಯ ತೆಕ್ಕೆಗೆ ಬಿದ್ದಾಗಲೆಲ್ಲ ಚಾರ್ಲಿಚಾಪ್ಲೀನ್ ನೆನಪಾಗುತ್ತಾನೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ