ಶನಿವಾರ, ಜೂನ್ 4, 2011

ಸೈನಿಕ ಹುಳುಗಳ ದಾಳಿ: ರೈತ ಕಂಗಾಲು



ಅನ್ನದಾತ ಕಂಗಾಲಾಗಿದ್ದಾನೆ.
ಉಡುಪಿ ತಾಲೂಕಿನ ಪರ್ಕಳ, ಹಿರೇಬೆಟ್ಟು, ಶೆಟ್ಟಿ ಬೆಟ್ಟು, ಹೆರ್ಗ, ಬೈರಂಜೆ, ಪರಂಪಳ್ಳಿ, ಆತ್ರಾಡಿ, ಪರೀಕ, ಬ್ರಹ್ಮಾವರದ ಕುಕ್ಕೆಹಳ್ಳಿ, ಬೆಳ್ಳಂಪಳ್ಳಿ ಸೇರಿದಂತೆ ಇಲ್ಲಿನ ಹಲವೆಡೆಗಳಲ್ಲಿ ಅನ್ನದಾತ ಬೆಳೆದ ಭತ್ತದ ಬೆಳೆಯನ್ನು 'ಸೈನಿಕ ಹುಳು' ತಿಂದು
ತೇಗುತ್ತಿದೆ.
ಕಳೆದ ಮೂಱ್ನಾಲ್ಕು ದಿನಗಳಿಂದ ಕಾಣಿಸಿಕೊಂಡಿರುವ ಈ ಹುಳುಗಳು ಅತ್ಯಂತ ವೇಗದಲ್ಲಿ ಹರಡಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡುತ್ತಿದೆ.
ಕಳೆದ ಮಳೆಗಾಲದಲ್ಲಿ ಕಾರ್ಕಳ ತಾಲೂಕಿನಲ್ಲಿ ಕಂಡು ಬಂದಿದ್ದ ಈ ಹುಳಗಳು ಭತ್ತದ ಸಸಿ ಮಡಿಗೆ ಬಹಳಷ್ಟು ಹಾನಿ ಮಾಡಿದ್ದವು ಈ ಬಾರಿ ಇಲ್ಲಿ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಹುಟ್ಟು ಹಾಕಿದೆ.
ಒಂದು ಇಂಚು ಉದ್ದ, ಕಂದು ಬಣ್ಣದಲ್ಲಿರುವ ಈ ಹುಳ ಮಳೆ ಬಂದಾಗ ಮರೆಯಾಗಿ ಮಳೆ ಬಿಟ್ಟು ಬಿಸಿಲು ಹರಡಿದಾಗ ಭಾರೀ ಸಂಖ್ಯೆಯಲ್ಲಿ ಪ್ರತ್ಯಕ್ಷವಾಗುತ್ತದೆ. ಹಗಲಿನಲ್ಲಿ ಕಾಣ ಸಿಗದ ಈ ಹುಳುಗಳ ಕಾರ್ಯಾಚರಣೆ ಏನಿದ್ದರೂ ರಾತ್ರಿ ವೇಳೆ ಮಾತ್ರ. ಸಸಿಮಡಿಗಳಲ್ಲಿ ಅವಿತಿರುವ ಈ ಹುಳಗಳು ಸಸಿಗಳನ್ನೆಲ್ಲ ತಿಂದು ಹಾಕುವುದರಿಂದ ಭತ್ತದ ಗದ್ದೆಗಳು ದನ ಮೇಯ್ದ ರೀತಿಯಲ್ಲಿ ಕಾಣುತ್ತಿದೆ. ಕೇವಲ ಎಲೆಗಳನ್ನು ಮಾತ್ರ ತಿನ್ನುವ ಈ ಹುಳಗಳು ಗಡುಸಾದ ಭಾಗವನ್ನು ಮಾತ್ರ ಬಿಡುತ್ತಿದೆ. ಇತ್ತೀಚೆಗಂತೂ ಇದರ ಹಾನಿ ಹೆಚ್ಚಿನ ಮಟ್ಟದಲ್ಲಿದೆ.
ಬಾತುಕೋಳಿಯ ಜಾತಿಯ ಪಕ್ಷಿಗಳು ಇವನ್ನು ಆಹಾರವಾಗಿ ಸೇವಿಸುತ್ತವೆ. ಸಾಕುಕೋಳಿಗಳಿಗೆ ಇವೆಂದರೆ ಅಲರ್ಜಿ.



ಕೃಷಿ ವಿಜ್ಞಾನಿಗಳ ಭೇಟಿ
ಸೈನಿಕ ಹುಳ ಬಾಧೆಯಿರುವ ಪ್ರದೇಶಗಳಿಗೆ ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಹನುಮಂತಪ್ಪ, ಕೀಟಶಾಸ್ತ್ರ ತಜ್ಞರಾದ ‌ಡಾ.ಶಿವಣ್ಣ ಬಿ.ಡಾ.ಎಸ್.ಯು. ಪಾಟೀಲ್, ಕೃಷಿ ವಿಜ್ಞಾನಿ ಡಾ.ಧನಂಜಯ ಭೇಟಿ ನೀಡಿ ಸ್ಥಳೀಯ ಕೃಷಿಕರಿಗೆ ಈ ಹುಳಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದ್ದಾರೆ.
ತಿಂದು ಹಾಕಿದ ಎಲೆಗಳು ಹಾಗೂ ಹುಳದ ಹಿಕ್ಕೆಗಳಿಂದಷ್ಟೇ ಅವುಗಳ ಇರುವಿಕೆ ಗುರುತಿಸಬಹುದಾಗಿದೆ. ಬೆಳೆದ ಹುಳಗಳು ಹುಣ್ಣಿನಲ್ಲಿ ಹಾಗೂ ತೆಂ‌ಡೆಗಳ ಒಳಗೆ ಕೋಶಾವಸ್ಥೆ ಹೊಂದುತ್ತದೆ ಮಳೆ ನೀರಿನಲ್ಲಿ ಇವುಗಳ ಕೊಚ್ಚಿ ಹೋಗುವುದರಿಂದ ಮುಂದೆ ಅವುಗಳು ಹೋಗಿ ಸೇರುವ ಸ್ಥಳದಲ್ಲಿಯೂ ಈ ಅಪಾಯ ವಿಸ್ತರಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸುತ್ತಾರೆ ಕೃಷಿ ಇಲಾಖೆಯ ವಿಜ್ಞಾನಿಗಳು.
ನಿರ್ವಹಣೆ ಹೇಗೆ?
ಈ ಸೈನಿಕ ಹುಳಗಳು ಗುಡ್ಡ ಅಥವಾ ಕಾಡು ಪ್ರದೇಶದಲ್ಲಿ ಅಭಿವೃದ್ಧಿ ಹೊಂದುತ್ತವಾದ್ದರಿಂದ ಕೃಷಿ ಕ್ಷೇತ್ರದ ಸುತ್ತಮುತ್ತ ಚೊಕ್ಕಟವಾಗಿಡುವುದು ಮುಖ್ಯ.
ಅಲ್ಲದೆ ಕೃಷಿ ಕ್ಷೇತ್ರದ ಸುತ್ತ ಒಂದು ಅಡಿ ಅಥವಾ ಅದಕ್ಕಿಂತಲೂ ಆಳದ ಕಾಲುವೆ ತೋಡುವುದೂ ಇದರ ಹರಡುವಿಕೆ ತಡೆಗಟ್ಟಲು ಇನ್ನೊಂದು ಉಪಾಯ. ಈ ಹುಳ ಬಾಧೆ ಕಂಡು ಬಂದಾಗ ಎಕರೆಗೆ 10.ಕೆ.ಜಿ. ಮೆಲಾಥಿಯಾನ್ ಪುಡಿಯನ್ನು ಸಂಜೆ ವೇಳೆ ಧೂಳೀಕರಿಸಬೇಕು. ವಿಷ ಪಾಷಾಣದ ಮಿಶ್ರಣ 125 ಮಿ.ಮೀ, ಮನೋಕ್ರೋಟೋಫಾಸ್, 15 ಕೆ.ಜಿ., ಅಕ್ಕಿ, ಗೋಧಿ ತೌಡು 2 ಕೆ.ಜಿ. ಬೆಲ್ಲ ಒಂದು ಲೀಟರ್ ನೀರಿನಲ್ಲಿ ಬೆರೆಸಿ 48 ಗಂಟೆಗಳ ಕಾಲ ಮಡಿಕೆಯಲ್ಲಿ ಸಂಗ್ರಹಿಸಿಟ್ಟು ಗದ್ದೆಗೆ ಎರಚಬೇಕು ಎನ್ನುತ್ತಾರೆ ಬ್ರಹ್ಮಾವರದ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಶಿವಣ್ಣ ಬಿ.



ಮನುಷ್ಯನಿಗೆ ಅಪಾಯವಿಲ್ಲ
ಸೈನಿಕ ಹುಳುಗಳು ಭತ್ತದ ಗದ್ದೆಯ ಮೇಲೆ ಆಕ್ರಮಣ ಮಾಡಿದರೆ ಭತ್ತದ ಸಸಿ ಮಡಿಗಳಿಗೆ ಸಾಕಷ್ಟು ಹಾನಿಯಾಗುತ್ತಿವೆ ಆದರೆ ಇವುಗಳಿಂದ ಮಾನವನಿಗೇನೂ ಅಪಾಯವಿಲ್ಲ. ಇವನ್ನು ಕೈಯಲ್ಲಿ ಹಿಡಿದರೂ ಕಚ್ಚುವುದಿಲ್ಲ. ಈ ಹುಳುಗಳು ಒಂದು ಇಂಚಿನಷ್ಟು ಉದ್ದವಿದ್ದು, ಕಂದುಬಣ್ಣ ಹೊಂದಿರುತ್ತದೆ ಹಗಲು ವೇಳೆ ಕಾಣಸಿಗುವುದು ಅಪರೂಪ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ