ಸೋಮವಾರ, ಜೂನ್ 6, 2011

ಭತ್ತ ಬೇಸಾಯಕ್ಕೆ ಕರಾವಳಿಯಲ್ಲಿ ರಂಗಸಜ್ಜು !

ಮುಂಗಾರು ಶುರುವಾಗಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಇಳೆ ಹದಗೊಂಡಿದ್ದು, ಈ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂ‌ಡಿದೆ. ಕೃಷಿ ಕಾರ್ಯಕ್ಕೆ ಕರಾವಳಿಯಲ್ಲಿ ರಂಗ ಸಜ್ಜು ಗೊಂ‌ಡಿದೆ.

ಮಾಮೂಲಿಯಾಗಿ ಮಳೆಗಾಲದ ಆರಂಭದಲ್ಲಿ ಸಿಡಿಲಬ್ಬರ, ಹಾನಿಗಳು ಮಾಮೂಲಿ. ಆದರೆ ಈ ಬಾರಿ ಮುಂಗಾರು ಪ್ರವೇಶದ ಬಳಿಕ ಇದುವರೆಗೂ ಸಿಡಿಲಬ್ಬರ ಅನಾಹುತಗಳು ಸುದ್ದಿ ಮಾಡಿಲ್ಲ.
ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಕರಾವಳಿಯುದ್ದಕ್ಕೂ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಗದ್ದೆಗಳ ಉಳುಮೆ ಕೆಲಸ ವೇಗ ಪಡೆದುಕೊಂಡಿದೆ. ಹಿಂದಿನಂತೆ ಕಾರ್ತಿ ಬೆಳೆಗೆ ಸಸಿ ಮಡಿಗಳನ್ನು ಮಾಡಿ ನೇಜಿ ಹಾಕುವ ಪದ್ಧತಿ ಅಪರೂಪವಾಗಿದೆ. ಈಗೇನಿದ್ದರೂ ನೇರ ಗದ್ದೆಗೆ ಬೀಜ ಬಿತ್ತನೆ. ಬದಲಾದವಣೆಗೆ ರೈತರೂ ಹೊರತಾಗಿಲ್ಲ. ಉಳುಮೆ ಪೂರ್ಣಗೊಳ್ಳುತ್ತಿದ್ದಂತೆಯೇ ಇನ್ನು ಹತ್ತು ದಿನಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ. ಮಳೆ ಇದೇ ರೀತಿ ಸರಿಯಾಗಿ ಸುರಿದಲ್ಲಿ ಈ ತಿಂಗಳಾಂತ್ಯಕ್ಕೆ ಬೈಲುಗದ್ದೆಗಳಿಗೆ ಬಿತ್ತನೆ ಕಾರ್ಯ ಪೂರ್ಣಗೊಳ್ಳಲಿದೆ.
ಜಿಲ್ಲೆಯಲ್ಲಿ ಮಜಲು ಮತ್ತು ಬೆಟ್ಟುಗದ್ದೆಗಳ ಸಾಗುವಳಿ ಹೆಚ್ಚು ಕಡಿಮೆ ನಿಂತೇ ಹೋಗಿದೆ. ಆದರೆ ಉತ್ತಮ ಮಳೆಯಾದಲ್ಲಿ ಮಾತ್ರ ಕೆಲವೆಡೆ ಮಜಲು ಸಾಗುವಳಿ ನಡೆಯುವ ಸಾಧ್ಯತೆಯಿದೆ. ಅಕ್ಕಿಗೆ ದರ ಏರುತ್ತಿರುವ ಹಿನ್ನೆಲೆಯಲ್ಲಿ ಭತ್ತದ ಕೃಷಿಗೆ ಸ್ವಲ್ಪ ಮಟ್ಟಿನ ಉತ್ತೇಜನ ದೊರಕಿದ್ದು ಈ ಬಾರಿ ಕಂಡುಬರುತ್ತದೆ. ಜೊತೆಗೆ ಈ ವರ್ಷ ಹೊರತು ಪಡಿಸಿದರೆ ಕಳೆದ ಹತ್ತು ವರ್ಷಗಳಿಂದ ಅಡಿಕೆ ಮಾರುಕಟ್ಟೆ ಕುಸಿದಿದ್ದ ಹಿನ್ನೆಲೆಯಲ್ಲಿ ಅಳಿದುಳಿದ ಗದ್ದೆಗಳಲ್ಲಿಯೂ ಉತ್ತಮವಾಗಿ ಸಾಗುವಳಿ ಮಾಡುವತ್ತ ಅನೇಕ ರೈತರು ಮನ ಮಾಡಿದ್ದರು.
ಶ್ರೀಪದ್ಧತಿ ಕಡೆಗೆ ಆಸಕ್ತಿ


ಸುಧಾರಿತ ಮಾದರಿಯ ಶ್ರೀಪದ್ಧತಿಯ ಸಾಲು ನಾಟಿ ಜಿಲ್ಲೆಯಲ್ಲಿ ಪ್ರಚಾರ ಪಡೆಯುತ್ತಿದೆ.
ಹೆಚ್ಚಿನ ರೈತರು ಈ ಪದ್ಧತಿಯ ಸಾಲುನಾಟಿ ಬೇಸಾಯ ಕಡೆಗೆ ಆಸಕ್ತಿ ವಹಿಸಿದ್ದಾರೆ. ಕಡಿಮೆ ಪ್ರಮಾಣದ ಬಿತ್ತನೆ ಬೀಜ ಮತ್ತು ಇಳುವರಿ ದೃಷ್ಟಿಯಿಂದ ಯಶಸ್ವಿ ಎನಿಸಿರುವ ಶ್ರೀಪದ್ಧತಿಗೆ ಸರಕಾರದ ಕೃಷಿ ಇಲಾಖೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಶೇಷ ಪ್ರೇರಣೆ ಒದಗಿ ಬಂದಿದ್ದು, ಶ್ರೀಪದ್ಧತಿಯ ಯಶಸ್ವಿ ವಿಸ್ತರಣೆಗೆ ಅನುಕೂಲವಾಗಿದೆ.
ಕಾರ್ಮಿಕರೇ ಸಿಗುತ್ತಿಲ್ಲ...
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಭತ್ತದ ಗದ್ದೆಯಲ್ಲಿ ದುಡಿಯಲು ಕೃಷಿ ಕಾರ್ಮಿಕರೇ ಸಿಗುತ್ತಿಲ್ಲ ಎನ್ನುವ ಪರಿಸ್ಥಿತಿ ರೈತರ ಆಸಕ್ತಿಗೆ ತಣ್ಣೀರು ಚೆಲ್ಲಿದೆ. ಇರುವ ಗದ್ದೆಗಳನ್ನು ಕೂಡಾ ಯಂತ್ರದ ಸಹಾಯದಿಂದಲೇ ನಿರ್ವಹಿಸುವ ಪರಿಸ್ಥಿತಿ ಎದುರಾಗಿರುವುದರಿಂದ ಮುಂಗಾರು ಸಾಕಷ್ಟು ಉತ್ತಮ ರೀತಿಯಲ್ಲಿ ಬಂದರೂ ಕೂಡಾ ಜಿಲ್ಲೆಯಲ್ಲಿ ನೂರು ಶೇಕಡಾ ಬಿತ್ತನೆ ಸಾಧ್ಯವಾಗುವುದು ಮಾತ್ರ ಸಂದೇಹವೇ.
ಗೊಬ್ಬರದ ಕೊರತೆ, ಹಳ್ಳಿಗಳಲ್ಲಿ ಜಾನುವಾರು ಸಾಕದೇ ಇರುವುದರಿಂದ ಸೆಗಣಿ ಗಂಜು, ಸಾವಯವ ಗೊಬ್ಬರದ ಕೊರತೆ ಕೂಡಾ ಬೇಸಾಯ ವಲಯವನ್ನು ತೀವ್ರವಾಗಿ ಕಾಡುತ್ತಿದೆ. ಇವೆಲ್ಲವುಗಳಿಂದಾಗಿ ಕ್ಷೀಣಿಸಿರುವ ಬೇಸಾಯ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಗರಿಗೆದರುವ ಸಾಧ್ಯತೆ ಮಾತ್ರ ದೂರವೇ ಎನ್ನಬಹುದು.

ನೀರು ಧಾರಾಳವಿದ್ದರೂ ಆ ನೀರಿನ ಬಳಕೆಯಿಂದ ಕೃಷಿ ಚಟುವಟಿಕೆಯನ್ನು ವ್ಯವಸ್ಥಿತವಾಗಿ ನಡೆಸಲು, ವಿಸ್ತರಿಸಲು ಹಲವು ವಿಧದ ಅಡ್ಡಿಗಳು ರೈತನ ಮುಂದಿದೆ. ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಕರಗುತ್ತಿರುವ ಭತ್ತದ ಬೇಸಾಯದ ವಿಸ್ತೀರ್ಣ ಹೆಚ್ಚುವ ಸಾಧ್ಯತೆಗಳಂತೂ ಕಂಡು ಬರುತ್ತಿಲ್ಲ. ಆದರೂ ಸರಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಕೈ ಜೋ‌ಡಿಸಿರುವುದರಿಂದ ಜಿಲ್ಲೆಯಲ್ಲಿ ಕೆಲವೆಡೆಯಾದರೂ ಭತ್ತದ ಕೃಷಿ ಉಳಿದುಕೊಂ‌ಡಿದ್ದು, ಮುಂಗಾರು ಅನುಕೂಲಕರವಾಗಿ ಇದೇ ರೀತಿ ಮುಂದುವರಿದರೆ ಮಾತ್ರ ಉತ್ತಮ ಫಸಲು ನೀರಿಕ್ಷಿಸಬಹುದು ಎಂಬುದು ಹಿರಿಯ ಕೃಷಿಕರ ಅಭಿಪ್ರಾಯವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ