ಶುಕ್ರವಾರ, ಆಗಸ್ಟ್ 5, 2011

ನಾಗರ ಪಂಚಮಿಯಂದು ನಾಗನ ದತ್ತು ಪಡೆದರು...


ನಾಗರ ಪಂಚಮಿ ದಿನದಂದು ಎಲ್ಲರೂ ಸಂಪ್ರದಾಯದಂತೆ ಕಲ್ಲಿನ ನಾಗನಿಗೆ ಭಯ ಭಕ್ತಿಗಳಿಂದ ಹಾಲೆರೆಯುತ್ತಿದ್ದರೆ, ಇಲ್ಲೊಬ್ಬರು ಈ ಹಬ್ಬವನ್ನು ತುಸು ಭಿನ್ನವಾಗಿ ಆಚರಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಮಂಗಳೂರಿನ ಚೋಲ್ಪಾಡಿ ಉಪೇಂದ್ರ ಕಾಮತ್ ಅವರು ನಿನ್ನೆ ಪಿಲಿಕುಳದ ನಿಸರ್ಗಧಾಮಕ್ಕೆ ತೆರಳಿ ನಾಗರ ಹಾವೊಂದನ್ನು ದತ್ತು ತೆಗೆದುಕೊಳ್ಳುವ ಮೂಲಕ ಹೊಸ ರೀತಿಯ ಹಬ್ಬಾಚರಣೆಗೆ ನಾಂದಿ ಹಾಡಿದ್ದಾರೆ.
ಒಂದಿಷ್ಟು ಹಿನ್ನೆಲೆ...
ಚೋಲ್ಪಾಡಿ ಉಪೇಂದ್ರ ಕಾಮತ್ ಅವರು ವಿಚಾರವಾದಿ ನರೇಂದ್ರ ಕಾಮತ್ ಅವರ ಸ್ನೇಹಿತ.
ನರೇಂದ್ರ ಕಾಮತ್ ನೇತೃತ್ವದಲ್ಲಿ ಇತ್ತೀಚೆಗೆ ಆರಂಭಿಸಲಾದ ಎಡ್ ವಿದೌಟ್ ರಿಲಿಜನ್ ಎಂಬ ಟ್ರಸ್ಟ್ ಗೆ ದೇಣಿಗೆ ನೀಡುವ ಸಲುವಾಗಿ ಇತ್ತೀಚೆಗೆ ಕಚೇರಿಗೆ ಬಂದವರು, ನಾಗರ ಹಾವಿಗೆ ನಾಗರ ಪಂಚಮಿಯಂದು ಆಹಾರ ನೀಡುವ ಆಸೆ ವ್ಯಕ್ತಪಡಿಸಿದ್ದರು. ಅದರಂತೆ ಪಿಲಿಕುಳ ನಿಸರ್ಗಧಾಮದಲ್ಲಿ ವಿಚಾರಿಸಿದಾಗ ಅವರು ನಾಗರ ಹಾವಿಗೆ ಹೊರಗಿನ ಆಹಾರ ಸ್ವೀಕರಿಸುವುದಿಲ್ಲ. ಬದಲಿಗೆ ಒಂದು ದಿನ ಆಹಾರ ನೀಡುವ ಬದಲಿಗೆ ಒಂದು ಹಾವನ್ನು ವಾರ್ಷಿಕ ದತ್ತು ತೆಗೆದುಕೊಳ್ಳಬಹುದು ಎಂದು ಸೂಚನೆ ನೀಡಿದ್ದರು.
ಅದರಂತೆ ನಿನ್ನೆ ಅಲ್ಲಿಗೆ ತೆರಳಿದ ಉಪೇಂದ್ರ ಕಾಮತ್ ಐದು ಸಾವಿರ ರೂ. ನೀಡಿ ಒಂದು ನಾಗರ ಹಾವನ್ನು ದತ್ತು ತೆಗೆದುಕೊಂಡಿದ್ದಾರೆ. ಅಲ್ಲದೆ ಮುಂದಿನ ವರ್ಷವೂ ಇದನ್ನು ಮುಂದುವರಿಸುವ ಭರವಸೆ ನೀಡಿದ್ದಾರೆ.
ನಾಗಾರಾಧನೆಯ ಹೆಸರಿನಲ್ಲಿ ಮಹಾರಾಷ್ಟ್ರದ ಹಲವೆಡೆಗಳಲ್ಲಿ ಹಾವಾಡಿಗರು ಹಾವನ್ನು ಹಿಡಿದು ಅದರ ಬಾಯಿಯನ್ನು ಹೊಲಿದು ಆಹಾರ ನೀಡದೆ ಪೂಜೆಗೆಂದು ತರುತ್ತಾರೆ. ಹಸಿದು ಬಾಯಾರಿದ ಹಾವು ತಮಗೆ ಸಿಕ್ಕಿದ ದ್ರವವನ್ನೇ ಸಿಕ್ಕಾಕ್ಷಣ ಕುಡಿಯುತ್ತದೆ. ಅಲ್ಲದೆ 'ಹಾವು ಹಾಲು ಕುಡಿದವು' ಎಂದು ಸಂಭ್ರಮಿಸಲಾಗುತ್ತದೆ. ಈ ರೀತಿ ಹಿಂಸೆ ಕೊಟ್ಟು ನಾಗರ ಪಂಚಮಿ ಆಚರಿಸುವ ಬದಲಿಗೆ ನಾಗರ ಹಾವುಗಳನ್ನು ದತ್ತು ತೆಗೆದುಕೊಂಡು ಪೋಷಿಸಿ ಆಚರಿಸಿಕೊಳ್ಳುವುದು ಒಳ್ಳೆಯದಲ್ಲವೇ ಎಂಬ ಪ್ರಶ್ನೆ ನರೇಂದ್ರ ನಾಯಕರದ್ದು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ