ಶುಕ್ರವಾರ, ಆಗಸ್ಟ್ 5, 2011

ರಸ್ತೆ ಮಧ್ಯೆ ಭಾರತದ ಭೂಪಟ..!



ಈ ಚಿತ್ರವನ್ನು ಒಮ್ಮೆ ಗಮನವಿಟ್ಟು ನೋಡಿ.
ಇಲ್ಲಿ ರಸ್ತೆ ಮಧ್ಯೆಯೇ ಯಾರೋ ರಾಷ್ಟ್ರಾಭಿಮಾನಿಗಳು ನಮ್ಮ ದೇಶದ ಭೂಪಟವನ್ನು ಮೂಡಿಸಿದ್ದಾರೆ ಎಂದುಕೊಂಡಿರಾ...?
ನಿಮ್ಮ ಊಹೆ ತಪ್ಪು.
ಇಲ್ಲಿ ರಸ್ತೆ ಮದ್ಯೆ ಭಾರತದ ಭೂಪಟವನ್ನು ಹೋಲುವ ಆಳಗಲದ ಹೊಂಡ ಮೂಡಿರುವುದು ಸತ್ಯ. ಮತ್ತು ಇದರಿಂದ ವಾಹನ ಸವಾರರು, ಜನಸಾಮಾನ್ಯರು ಪಡುತ್ತಿರುವ ಬವಣೆಗಳೂ ಅಷ್ಟಿಷ್ಟಲ್ಲ.
ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡಿನ ಸಂಪರ್ಕ ರಸ್ತೆಯಾದ, ದೇಶದ ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಪ್ರಸಕ್ತ ಸ್ಥಿತಿಗೆ ಹಿಡಿದ ಒಂದು ಕೈಗನ್ನಡಿ. ಈ ರಾ.ಹೆದ್ದಾರಿಯಲ್ಲಿ ಪಂಪ್ ವೆಲ್ ನಿಂದ ತೊಕ್ಕೊಟ್ಟುವರೆಗಿನ ರಸ್ತೆಯ ಈಗಿನ ದಯನೀಯ ಸ್ಥಿತಿಯ ಒಂದು 'ಝಲಕ್' ಅಷ್ಟೇ.

ಈ ಹೆದ್ದಾರಿಯಲ್ಲಿ ಬರುವ ಎಕ್ಕೂರು ಜಂಕ್ಷನ್ ನಲ್ಲಿ ರಸ್ತೆ ಮಧ್ಯೆ ಅಲ್ಲಲ್ಲಿ ಉಂಟಾಗಿರುವ ಹೊಂಡಗಳಿಂದ ಹೆದ್ದಾರಿ ಸಂಚಾರ ಎಂಬುದು ನರಕಸದೃಷ ಅನುಭವ ನೀಡುವ ಒಂದು ಪ್ರಕ್ರಿಯೆಯಾಗಿ ಬಿಟ್ಟಿದೆ. ಮಳೆ ಬಂದರಂತೂ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ ಬಿಡುತ್ತದೆ. ಈ ಭೀಮಗಾತ್ರದ ಹೊಂಡಗಳ ತುಂಬಾ ನೀರು ನಿಂತು ಹಲವು ಆವಾಂತರಗಳಿಗೆ ಕಾರಣವಾಗುತ್ತದೆ. ಈ ಹೊಂಡಗಳ ಆಳ-ಅಗಲ ತಿಳಿಯದೆ ವಾಹನಗಳನ್ನು ಓಡಿಸುವ ಧಾವಂತದಲ್ಲಿ ಹೊಂಡದ ಮಧ್ಯೆ ಸಿಲುಕಿಕೊಂಡ ವಾಹನಗಳು ಮೇಲೆ ಬರಲಾರದೆ ಏದುಸಿರು ಬಿಡುವ ಸಂದರ್ಭ ಹಲವು ಬಾರಿ ಇದಿರಾಗಿದೆ. ಈ ಹೊಂಡದ ಕೆಸರ ನೀರಿನ ಅಭಿಷೇಕ ಇಲ್ಲಿ ಸಾಗುವ ವಾಹನಗಳಿಗೆ, ಜನಸಾಮಾರಿಗೆ ಒಂದು ದೈನಂದಿನ ಅನುಭವ ಎಂಬಂತಾಗಿದೆ.
ಮುಸಲಧಾರೆಯ ಮಳೆ ಸುರಿಯುವ ಕರಾವಳಿ ಪ್ರದೇಶದ ರಸ್ತೆಗಳು ಮುಂಗಾರು ಮಳೆಯ ಮೊದಲ ಹೊಡೆತಕ್ಕೇ ಕಂಗಾಲಾಗಿ, ಜೀರ್ಣಾವಸ್ಥೆಗೆ ತಲುಪುವುದು ಕಳೆದ ಹಲವು ಅಪಘಾತ ಸಮಸ್ಯೆಗಳಿಗೆ ಕಾರಣವಾಗಿದೆ. ಈ ಬಗ್ಗೆ ಸಾಕಷ್ಟು ಮನವಿ, ಹೋರಾಟ, ಪ್ರತಿಭಟನೆಗಳು ನಡೆದ ಬಳಿಕ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಳ್ಳುವುದು, ಆ ಬಳಿಕ ರಸ್ತೆ ದುರಸ್ತಿಗೆ ಅನುದಾನ ಹೊಂದಿಸಿಕೊಳ್ಳುವುದು, ಟೆಂಡರ್ ಕರೆಯುವುದು.. ಇತ್ಯಾದಿ ಪ್ರಕ್ರಿಯೆಗಳೆಲ್ಲಾ ನಡೆದು ರಸ್ತೆ ದುರಸ್ತಿ ಕಾಮಗಾರಿಗೆ ಚಾಲನೆ ದೊರಕುವಾಗ ಜನವರಿ ತಿಂಗಳು ಬಂದಿರುತ್ತದೆ. ಆ ಬಳಿಕ ನಾಲ್ಕೈದು ತಿಂಗಳು ರಸ್ತೆ ಸುಸ್ಥಿತಿಯಲ್ಲಿರುತ್ತದೆ. ಅಲ್ಲಿಗೆ ಮತ್ತೆ ಮಳೆಗಾಲ... ಮತ್ತೆ ರಸ್ತೆಯಲ್ಲಿ ಹೊಂಡ, ಮತ್ತದೇ ಸಮಸ್ಯೆ. ಹೋರಾಟ, ರಸ್ತೆ ದುರಸ್ತಿ ಎಂಬ ಕಣ್ಣೊರೆಸುವ ನಾಟಕ..
ಇದು ಎಂದೂ ಮುಗಿಯದ ಕಥೆ ಎಂದನಿಸುತ್ತದೆ..ಏನಂತೀರಿ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ