ಸೋಮವಾರ, ಆಗಸ್ಟ್ 1, 2011

ಈ ಮನೆಯ 'ಸದಾ ಆನಂದ' ಮರಳಿಸುವಿರಾ?


ಏಪ್ರಿಲ್ 12.
ಅಂದು ಆ ದುರ್ಘಟನೆ ಸಂಭವಿಸದೇ ಇರುತ್ತಿದ್ದರೆ ಬಹುಷಃ ಎಲ್ಲವೂ ಸರಿಯಾಗಿಯೇ ಇರುತ್ತಿತ್ತು.
ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ತೆಳ್ಳಾರು ಅಶ್ವತ್ಥಕಟ್ಟೆ ಬಳಿಯ ಆ ಕುಟುಂಬ ಆಗಷ್ಟೇ ಕೂಲಿ ಕೆಲಸ ಮಾಡಿಕೊಂಡಾದರೂ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿತ್ತು.
ಮನೆಯಲ್ಲಿದ್ದ ತಂದೆ, ತಾಯಿ, ಇಬ್ಬರು ತಮ್ಮಂದಿರ ಜವಾಬ್ದಾರಿ 20ರ ಹರೆಯದ ಹುಡುಗ ಸದಾನಂದನ ಹೆಗಲಲ್ಲಿತ್ತು.
ಕೆಲವು ಸಮಯದ ಹಿಂದಷ್ಟೇ ಕೂಲಿ ಕೆಲಸದಿಂದ ಗಾರೆ ಕೆಲಸದತ್ತ ಹೊರಳಿದ್ದ ಈತನಲ್ಲಿ ಸಂಸಾರದ ನೊಗ ಎಳೆಯಲು ಸಾಧ್ಯವಾಗುವಷ್ಟು ಸಂಪಾದಿಸುವ ಆತ್ಮವಿಶ್ವಾಸ ಚಿಗುರಿತ್ತು. ಈ ನಡುವೆ ತನ್ನ ಓರಗೆಯವರೆಲ್ಲ ಬೈಕ್ ನಲ್ಲಿ ಓಡಾಡುವುದನ್ನು ಕಂಡ ಸದಾನಂದನಲ್ಲೂ ತಾನು ಬೈಕ್ ಖರೀದಿಸಬೇಕು ಎಂಬ ಆಸೆ ಹುಟ್ಟಿತ್ತು. ಹಾಗೆ ಸ್ವಲ್ಪ ಸಾಲ ಮಾಡಿ ಬೈಕ್ ಖರೀದಿಸಿದ್ದೂ ಆಯ್ತು. ಒಂದಷ್ಟು ದಿನ ಎಲ್ಲವೂ ಸರಿಯಾಗಿಯೇ ಇತ್ತು. ಏಪ್ರಿಲ್ 12 ಬರುವ ತನಕ...
ಅಂದು ಕೂಡಾ ಎಂದಿನಂತೆ ಕೆಲಸಕ್ಕಾಗಿ ಪೇಟೆಗೆ ಬಂದಿದ್ದ ಸದಾನಂದ ಕೆಲಸಕ್ಕೆ ರಜೆ ನೀಡಿದ್ದ ಕಾರಣ ಬೈಕ್ ನಲ್ಲಿ ಮನೆ ಕಡೆಗೆ ವಾಪಾಸಾಗುತ್ತಿದ್ದ. ಆದರೆ ವಿಧಿಯಾಟ ಬೇರೆಯದೇ ಆಗಿತ್ತು. ದಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸದಾನಂದನ ಬದುಕಿನ ಅದಷ್ಟು ಕನಸುಗಳನ್ನು ಅದು ಕಸಿದುಕೊಂಡೇ ಬಿಟ್ಟಿತು.
ಅಪಘಾತದಲ್ಲಿ ತಲೆಗೆ ಬಿದ್ದ ಗಂಭೀರ ಏಟಿನಿಂದ ಆ ದಿನ ತಪ್ಪಿದ ಪ್ರಜ್ಞೆ ಹುಡುಗನಿಗೆ ಇನ್ನೂ ಮರಳಿಲ್ಲ. ಅಪಘಾತದ ತಕ್ಷಣ ಸದಾನಂದನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಮಿದುಳಿನ ಎರಡು ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿದೆ. ಎರಡು ತಿಂಗಳಕಾಲ ಅಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಬಳಿಕ ಜೂ.13 ರಂದು ಅದೇ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿದೆ. ವೈದ್ಯರು ನಿಧಾನಕ್ಕೆ ಚೇತರಿಕೆ ಸಾಧ್ಯ ಎಂದು ಹೇಳಿದ್ದಾರೆ. ಹಾಗಾಗಿ ಈಗ ಮನೆಯಲ್ಲೇ ಇರಿಸಿಕೊಂಡು ಟ್ಯೂಬ್ ಮೂಲಕ ದ್ರವಹಾರವನ್ನಷ್ಟೇ ನೀಡಲಾಗುತ್ತಿದೆ.
ಕುಟುಂಬದ ಏಕೈಕ ಆಧಾರ ಸ್ತಂಭವಾದ ಸದಾನಂದನ ಸ್ಥಿತಿ ಹೀಗಾದ ಮೇಲೆ ಮನೆ ಮಂದಿ ಕಂಗಾಲಾಗಿ ಹೋಗಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಮುಗಿಸಿದ ಇಬ್ಬರು ಸಹೋದರರ ಶಿಕ್ಷಣ ನಿಂತುಹೋಗಿದೆ. ತಂದೆ, ತಾಯಿ ಹಾಗೂ ಇಬ್ಬರು ಸಹೋದರರು ಖಾಲಿ ಕೈಗಳೊಂದಿಗೆ ಆತನ ಸೇವೆಗೆ ನಿಂತಿದ್ದಾರೆ. ಶೌಚ, ಸ್ನಾನ, ಆಹಾರ ಎಲ್ಲವೂ ಮಲಗಿದಲ್ಲೇ ಅಥವಾ ಎತ್ತಿ ಒಯ್ದು ಪೂರೈಸಬೇಕು. ಹಾಸಿಗೆ ಹಿಡಿದಿರುವ ಈ ಯುವಕ ಕಣ್ಣಾಲಿಗಳಲ್ಲಿ ಜೀವಸೆಲೆಯ ಒಂದು ಮಿಂಚು, ತುಟಿಯಲ್ಲೊಂದು ನಗು ಪುಟ್ಟ ಮಾತಿಗಾಗಿ ತಾಯಿ, ತಂದೆ ಸಹೋದರರ ಪ್ರತೀಕ್ಷೆ ನೋಡಿದವರ ಕರುಳು ಕಿವುಚುತ್ತದೆ.
ಚಿಕಿತ್ಸೆಗಾಗಿ ಇಲ್ಲಿಯವರೆಗೆ ಸುಮಾರು ಮೂರು ಲಕ್ಷ ರೂ. ಗಳಿಗೆ ಮಿಕ್ಕಿ ವಿನಿಯೋಗವಾಗಿದೆ. ನಿತ್ಯ ಔಷಧ, ಅನುಪಾನಕ್ಕೆ ಮತ್ತೆಷ್ಟೋ ಹಣಬೇಕು. ಕುಟುಂಬ ದುಡಿಮೆ ಇಲ್ಲದೆ ಕಂಗಾಲಾಗಿದೆ. ಈತನಕ ಅವರಿವರಿಂದ ಎಂದು ಒಂದಿಷ್ಟು ಸಹಾಯ ಬಂದಿದೆಯಾದರೂ ಐದು ಸೆಂಟ್ಸ್ ಮನೆ ಬದುಕಿಗೆ ಎರಡು ಲಕ್ಷ ರೂ ಸಾಲದ ಬಲೆಗೆ ಬಿದ್ದಿದೆ. ಈ ಕುಟುಂಬಕ್ಕೆ ನೆರವಿನ ಹಸ್ತ ಬೇಕಿದೆ. ಮಾನವೀಯತೆಯ ಸ್ಪರ್ಶ ಬೇಕಿದೆ.
ಸಂತೈಸುವ ಮನಸ್ಸುಗಳು, ರಮೇಶ್ ನಾಯಕ್, ತೆಳ್ಳಾರು ಅಶ್ವತ್ಥ ಕಟ್ಟೆ ಅಂಚೆ, ದುರ್ಗಾ ಗ್ರಾಮ, ಕಾರ್ಕಳ ತಾಲೂಕು. ಈ ವಿಳಾಸ ಸಂಪರ್ಕಿಸಬಹುದು. ಧನ ಸಹಾಯದ ನೆರವು ನೀಡಬಯಸುವವರು ಸಿಂಡಿಕೇಟ್ ಬ್ಯಾಂಕ್ , ತೆಳ್ಳಾರು ಶಾಖೆಯ ಎಸ್.ಬಿ.ಖಾತೆ ಸಂಖ್ಯೆ 02152200016685 ಕ್ಕೆ ಪಾವತಿಸಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ