ಶನಿವಾರ, ಜುಲೈ 30, 2011

ಮಳೆ ನೀರು... ಸಮುದ್ರ ಮೀನು... ಐದು ದಿನ...



 'ನಮ್ಮಲ್ಲಿದ್ದುದು ಬರೀ ಒಂದು ದಿನಕ್ಕಾಗುವಷ್ಟು ನೀರು, ಆಹಾರ.... ಸಮುದ್ರದಲ್ಲಿ ಕಳೆಯಬೇಕಾಗಿ ಬಂದದ್ದು ಐದು ದಿನಗಳು... ಉಳಿದ ದಿನಗಳನ್ನು ಮಳೆಯ ನೀರನ್ನೇ ಕುಡಿದು, ಸಮುದ್ರದಲ್ಲಿ ಸಿಕ್ಕ ಮೀನನ್ನೇ ತಿಂದು ಹಸಿವು, ನೀರಡಿಕೆ ನೀಗಿಸಿಕೊಳ್ಳಬೇಕಾಯಿತು.... ಮಳೆಯಲ್ಲಿ ನೆನೆದುಕೊಂಡೇ ನಮ್ಮ ರಕ್ಷಣೆಗೆ ಯಾರಾದರೂ ಬಂದೇ ಬರುತ್ತಾರೆ ಎಂಬ ಧೈರ್ಯದಿಂದಲೇ ಅವಷ್ಟು ದಿನಗಳನ್ನು ಕಳೆದೆವು... ಕೊನೆಗೂ ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ, ಕೇರಳದ ಮೀನುಗಾರರಿದ್ದ 'ಮಿಸ್ಸಿಯಾ' ಬೋಟ್ ನಮ್ಮ ರಕ್ಷಣೆಗೆ ಬಂದೇ ಬಿಟ್ಟಿತು!....

ಇದು ಬೆಂಗರೆಯಿಂದ ಜು.23ರಂದು ಗಿಲ್ ನೆಟ್ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿ ಬಳಿಕ ನಾಪತ್ತೆಯಾಗಿ ಐದು ದಿನಗಳ ಕಾಲ ಹೊರ ಜಗತ್ತಿನ ಸಂಪರ್ಕವೇ ಇಲ್ಲದೆ ಸಮುದ್ರದಲ್ಲೇ ಕಳೆದು ಇದೀಗ ಮತ್ತೆ ನಗರಕ್ಕೆ ಬಂದ ಮೀನುಗಾರರಾದ ಬೆಂಗರೆಯ ಪ್ರಾನ್ಸಿ ಫ್ರಾಕ್, ಮನೋಹರ ಪುತ್ರನ್ ಹಾಗೂ ದೇರಳಕಟ್ಟೆಯ ವಿನ್ಸಿ ಅವರ ಕರಾಳ ನೆನಪುಗಳು.
ಶುಕ್ರವಾರ ಈ ಮೂವರೂ ಪರಶುರಾಮ ಎಕ್ಸ್ ಪ್ರೆಸ್ ರೈಲಿನ ಮೂಲಕ ಸುರಕ್ಷಿತವಾಗಿ ನಗರಕ್ಕೆ ಬಂದು ತಲುಪುವುದರೊಂದಿಗೆ ಕಳೆದ ಐದಾರು ದಿನಗಳಿಂದ ಅವರ ಮನೆ ಮಂದಿ, ಬಂಧು ಬಾಂಧವರಿಗಿದ್ದ ಆತಂಕಕ್ಕೆ ತೆರೆಬಿದ್ದಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಿಷ್ಟು....

ಜು.23ರಂದು ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಬೆಂಗ್ರೆಯಿಂದ ಹೊರಟ ಬೋಟು ಸಂಜೆ ನಾಲ್ಕು ಗಂಟೆಯ ವೇಳೆಗೆ ತಾಂತ್ರಿಕ ವೈಫಲ್ಯಕ್ಕೀಡಾಯಿತು. ತಕ್ಷಣ ಮನೆಗೆ ಸಂಪರ್ಕಿಸಿ ತಿಳಿಸಿದೆವು. ಬಳಿಕ ಫೋನ್ ಸಂಪರ್ಕ ತಪ್ಪಿಹೋಯಿತು. ಇದೇ ವೇಳೆ ಸಮುದ್ರದಲ್ಲಿ ಎದ್ದ ಅಬ್ಬರದಿಂದ ದೋಣಿ ದಕ್ಷಿಣದತ್ತ ಸಾಗತೊಡಗಿತು. ಸಮುದ್ರದಲ್ಲಿ ಬೇರೆ ಯಾವುದಾದರೂ ದೋಣಿ ಕಾಣಿಸುತ್ತಿದೆಯೇ ಎಂದು ಹುಡುಕಾಡಿದೆವಾದರೂ ಯಾವುದೂ ಕಾಣಿಸಲೇ ಇಲ್ಲ. ಇದ್ದ ನೀರು, ಆಹಾರ ಮುಗಿದಾಗ ಮಳೆ ನೀರೇ ಕುಡಿದೆವು, ಮೀನನ್ನೇ ಸುಟ್ಟು ತಿಂದೆವು. ಆದರೆ ದೇವರ ದಯೆ. ಗುರುವಾರ ಸಂಜೆ ದೂರದಲ್ಲೊಂದು ದೋಣಿ ಕಾಣಿಸಿತು. ಉಟ್ಟ ಲುಂಗಿಯನ್ನೇ ಹುಟ್ಟಿಗೆ ಕಟ್ಟಿ ರಕ್ಷಣೆಗೆ ಕೋರಿದೆವು. ಅದನ್ನು ಕಂಡ ಅವರು ಧಾವಿಸಿ ಬಂದು ನಮ್ಮನ್ನು ರಕ್ಷಿಸಿ ದ‌ಡಕ್ಕೆ ಕರೆತಂದರು. ಇತ್ತ ನಾವು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಲಾಗಿತ್ತು. ಕೋಸ್ಟ್ ಗಾರ್ಡ್ ಗಳೂ ನಮ್ಮನ್ನು ಹುಡುಕುತ್ತಿದ್ದರು. ರೈಲು ಪ್ರಯಾಣಕ್ಕೆ ಹಾಗೂ ಖರ್ಚಿಗೆ ಕೇರಳ ದೋಣಿ ಮೂಲಕ ಹಾಗೂ ಮೀನುಗಾರರು ಸಹಕರಿಸಿದರು. ಹಾಗಾಗಿ ಇಂದು ಸುರಕ್ಷಿತವಾಗಿ ಇಲ್ಲಿ ಬಂದಿಳಿಯಲು ಸಾಧ್ಯವಾಯಿತು...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ