ಗುರುವಾರ, ಜುಲೈ 21, 2011

ಆಗೆಲ್ಲ ನೇಚರೇ ನಮಗೆ ಟೀಚಱ್ರು!

internet picture

ಗಿರಿ ಸಿರಿ ನೆಲ ಹೊಲ...
ನೇಚರೇ ನಮ್ ಟೀಚರು...
ಟೀವಿಯಲ್ಲಿ ಹರಿದು ಬಂದ ಈ ಹಾಡು ಮತ್ತು ಅದರ ದೃಶ್ಯಗಳನ್ನು ಕಂಡಾಗ ನೆನಪುಗಳು ಸರಿದು ಹೋದದ್ದು ಹತ್ತಿಪ್ಪತ್ತು ವರ್ಷಗಳ ಹಿಂದೆ.
ಆಗ ನಮ್ಮೂರು ಇಂದಿನಂದೆ ಕಾಂಕ್ರೀಟ್ ಕಾಡಾಗಿರಲಿಲ್ಲ. ಮನೆ ಸುತ್ತ ಎತ್ತ ತಿರುಗಿದರೂ ಬರೀ ಹಸಿರಷ್ಟೇ ಇತ್ತು.
ಆಗೆಲ್ಲಾ ಮಳೆಗಾಲ ಬಂತೆಂದರೆ ನಮಗೆಲ್ಲಾ ಖುಷಿಯೋ ಖುಷಿ. ಧೋ ಎಂದು ಸುರಿಯುತ್ತಿದ್ದ ಮಳೆಗೆ ಮನೆಯಲ್ಲಿ ಹರಿದುಬರುತ್ತಿದ್ದ ಬೈಗುಳವನ್ನು ಕಿವಿಗೆ ಹಾಕಿಕೊಳ್ಳದೆ ಅಂಗಿ-ಚೆಡ್ಡಿ ಸಿಕ್ಕಿಸಿಕೊಂಡು ನಾವೊಂದಿಷ್ಟು ಗೆಳೆಯರು ಮಳೆಯಲ್ಲೇ ಹೊರಟು ಬಿಡುತ್ತಿದ್ದೆವು. ಹೊಲ ಗದ್ದೆ, ಚಿಕ್ಕಪುಟ್ಟ ಝರಿ, ತೊರೆಗಳು, ಕಣಿಗಳಲ್ಲಿ ಹರಿದು ಹೋಗುತ್ತಿದ್ದ ಸ್ಫಟಿಕ ಸ್ವಚ್ಛ ನೀರು ನಮಗಾಗಿಯೇ ಒಂದು ಅದ್ಭುತ ಲೋಕ ಸೃಷ್ಟಿಸಿಕೊಡುತ್ತಿತ್ತು. ಮಳೆ ಬಿದ್ದೊಡನೇ ಅರಳಿಕೊಳ್ಳುವ ಅದೆಷ್ಟೋ ಹೂವುಗಳು, ಅಲ್ಲೊಂದು ಇಲ್ಲೊಂದು ಉಳಿದುಕೊಂಡ ಕುಂಟಾಲಕಾಯಿ, ಮೊಳಕೆಯೊಡೆದ ಗೇರುಬೀಜ, ಹರಿದುಬರುವ ಒಸರು ನೀರಲ್ಲಿ ಪಟಪಟನೆ ಬಾಲ ಬಡಿಯುವ ಹೆಸರೇ ಇಲ್ಲದ ಮೀನು. ಒಂದಾ ಎರಡಾ?
ಮನೆಯಿಂದ ಗೊತ್ತೇ ಆಗದಂತೆ ಅಡಗಿಸಿಕೊಂಡು ತರುತ್ತಿದ್ದ ಚೊಂಬುಗಳಲ್ಲಿ ಮೀನು ಹಿಡಿಯುವ ಕಸರತ್ತು. ಸಣ್ಣ ಸಣ್ಣ ನೀರಿನ ಹರಿವಿಗೆ ಅಣೆಕಟ್ಟು(!) ಕಟ್ಟುವ ಕೆಲಸ, ಅಬ್ಬ, ಎಷ್ಟೊಂದು ಶ್ರದ್ಧೆ ಇತ್ತಲ್ಲವಾ ಆಗ? ಅಂತ ಇಂದು ಅಂದುಕೊಳ್ಳುತ್ತೇನೆ.
ಸುತ್ತಮುತ್ತ ತುಂಬಿ ಹರಿಯುತ್ತಿದ್ದ ಹಳ್ಳ, ತೊರೆಗಳಲ್ಲಿ ಈಜಾಡುತ್ತಾ, ಮೈ ಮೇಲೆ ನೀರೆರಚಿಕೊಳ್ಳುತ್ತಾ, ನನ್ನ ಕಾಗದದ ದೋಣಿ ಅದೆಷ್ಟು ದೂರ ಹೋಗುತ್ತದೆ ಅಂತ ನಮ್ಮಲ್ಲೇ ಪರಸ್ಪರ ಜಿದ್ದಿಗೆ ಬೀಳುತ್ತಿದ್ದ ಆ ಕ್ಷಣಗಳು ಛೇ ಮತ್ತೊಮ್ಮೆ ನನ್ನ ಬದುಕಲ್ಲಿ ಬರಲಾರದೇ? ಎಂದು ಹಳಹಳಿಸುತ್ತೇನೆ.
ಅದನ್ನೆಲ್ಲ ಇಂದಿನ ಮಕ್ಕಳಿಗೆ ಹೇಳಿದರೆ ಅವರು ನಗುತ್ತಾರೆ. ಯಾವ ಓಬೀರಾಯನ ಕಾಲದಲ್ಲಿದ್ದೀರಾ... ಅಂತ ಕೇಳುತ್ತಾರೆ. ಇದರಲ್ಲಿ ಅವರ ತಪ್ಪೇನಿಲ್ಲ. ಅವರು ಇಂದು ಕಂಪ್ಯೂಟರ್ ಯುಗದಲ್ಲಿದ್ದಾರೆ. ಅಪ್ಪ-ಅಮ್ಮಂದಿರ ವಿಶೇಷ ಕಾಳಜಿಯಡಿ ಬೆಳೆಯುತ್ತಿದ್ದಾರೆ. ಅವರಿಗಿಂದು ನೋಡಬೇಕೆಂದರೂ ಕಣ್ಣೆದುರು ಹಳ್ಳಿಗಳೇ ಸಿಗುತ್ತಿಲ್ಲ. ಝರಿ ತೊರೆಗಳು ಚಿತ್ರದಲ್ಲಿ ಮಾತ್ರ. ಅದರೇನಿದ್ದರೂ ಸ್ಕೂಲು, ಟ್ಯೂಷನ್ನು, ಸಂಗೀತ ಕ್ಲಾಸು, ಕರಾಟೆ, ರಿವಿಜನ್ನು, ಸ್ಪೆಷಲ್ ಕ್ಲಾಸು ಅಂತ ಬ್ಯುಸೀ! ಮಳೆಗಾಲದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ನೀರು ನಿಂತಿದ್ದು ಅವರಿಗೆ ಕಾಣಸಿಕ್ಕರೂ ಕ್ಷಣಕಾಲದಲ್ಲಿ ನಗರಪಾಲಿಕೆಯೋ ಪುರಸಭೆಯೋ ಅದನ್ನು ರಿಪೇರಿ ಮಾಡಿ ಸ್ವಚ್ಛಗೊಳಿಸಿರುತ್ತದೆ. ಮಳೆಗಾಲದ ಹಳ್ಳಿ ಹೀಗಿತ್ತು... ಎಂದು ಅವರಿಗೆ ವರ್ಣಿಸುವುದಾದರೂ ಹೇಗೆ?
ಹಿಂದೆಲ್ಲಾ ನಮ್ಮ ಬಾಲ್ಯದಲ್ಲಿ ಸಾಂತಣಿ, ಪುಳಿಂಕಟೆ, ಹೆಬ್ಬಲಸಿನ ಬೀಜ, ಖಾರ ಹಪ್ಪಳ, ಸಿಹಿ ಹಪ್ಪಳ, ಮಾಂಬಳ, ಹಲಸಿನ ಸೋಳೆ, ಉಪ್ಪು ನೀರಿನ ಮಾವು, ಹಲಸು ಎಂದೆಲ್ಲ ತಯಾರಾಗುತ್ತಿತ್ತು. ಇವೆಲ್ಲಾ ಮಳೆಗಾಲದ ವಿಶೇಷ ಖಾದ್ಯಗಳು.
ಇಂದು ಬಣ್ಣ ಬಣ್ಣದ ಲಕೋಟೆಯೊಳಗಿನ ಚಿಪ್ಪುಗಳು, ಪಿಜ್ಜಾ, ಬರ್ಗರ್ ಗಳು, ಸಾಸ್, ಕೆಚಪ್ಪು, ಬ್ರೆಡ್ಡು ರೋಸ್ಟುಗಳಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನ ಕಳೆಯುವ ಮಕ್ಕಳಿಗೆ ಅದರ ರುಚಿ ಹೇಗಿತ್ತು ಎಂದು ವಿವರಿಸುವುದು ಸಾಧ್ಯವೇ?
ಮಳೆ ಹನಿಗಳಿಗೆ ಮೈಬಿಚ್ಚಿ ಅದ್ಭುತ ಅನುಭವ ಪಡೆಯುವ ಅವಕಾಶ ಇಂದು ಬೇಕೆಂದರೂ ಅವರಿಗೆ ದಕ್ಕುತ್ತಿಲ್ಲ. ಅವರ ಆಟಗಳೇನಿದ್ದರೂ ಕಂಪ್ಯೂಟರ್, ಮೊಬೈಲ್ ಗಳಿಗಷ್ಟೇ ಸೀಮಿತವಾಗಿದೆ.
ಹಾಗಾಗಿಯೇ ನಾವೆಲ್ಲ ಅನುಭವಿಸಿದ ಬಾಲ್ಯದ ಮಳೆಗಾಲದ ಕ್ಷಣಗಳು ಇಂದಿನ ಮಕ್ಕಳಿಗೆ ಸಿಗುವುದೇ ಇಲ್ಲ ಎನ್ನಬಹುದು. ಅಂದೆಲ್ಲ ನೇಚರೇ ನಮಗೆ ಟೀಚರ್ ಆಗಿತ್ತು. ಪ್ರಕೃತಿಯ ವಿವಿಧ ಪವಾಡಗಳು, ಅದರ ವಿಶಿಷ್ಟ ಸೃಷ್ಟಿಗಳೊಂದಿಗೆ ಆಡಿ ಬೆಳೆದು ದೊಡ್ಡವರಾದ ನಮಗೆ ಇಂದಿನ ಮಕ್ಕಳನ್ನು ನೋಡಿ ಹೀಗೆ ಕಾಣುವುದು ತಪ್ಪೇ ಇರಬಹುದು. ಆದರೆ ಅಂದಿನ ಮಳೆಗಾದಲ್ಲಿದ್ದ ಸೊಬಗು ಇಂದಿನವರಿಗಿಲ್ಲ ಎನ್ನುವುದಂತೂ ಸತ್ಯ.
ಮತ್ತೆ ಯಾರಿಗೆ ಗೊತ್ತು? ಅಂದು ನಾವು ಕಾಗದದ ಹಾಳೆಯನ್ನು ಒಂದೊಂದಾಗಿ ಮಡಚಿ ದೋಣಿ ಮಾಡಿ ನೀರಿಗದ್ದುವಾಗ ಸಿಗುತ್ತಿದ್ದ ಖುಷಿ ಇಂದು ಕಂಪ್ಯೂಟರ್ ಎದುರು ಕೂತು  ಬೈಕ್ ರೇಸ್, ಕಾರ್ ರೇಸ್, ಫಜಲ್ಸ್ ಆಡುವುದರ ಮುಂದೆ ಏನೂ ಅಲ್ಲ ಎಂದು ಇಂದಿನ ಮಕ್ಕಳು ಹೇಳಲೂಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ