ಶನಿವಾರ, ಜುಲೈ 16, 2011

ಮಳೆಗಾಲವೇನೋ ಸಮೃದ್ಧ ಆದರೆ...


ಕರಾವಳಿ ಜಿಲ್ಲೆಯಲ್ಲಿ ಮೂರು ದಿನಗಳಿಂದ ಸುರಿಯತೊಡಗಿದ ಮಳೆ ಜಲಸಮೃದ್ಧಿಯನ್ನು ತಂದಿಟ್ಟಿದೆ.
ವಾರದ ಹಿಂದೆ ಮಳೆಯ ಅಭಾವದಿಂದ ಉಂಟಾದ ಆತಂಕ ಇಂದು ಮಾಯವಾಗಿದೆ. ಎರಡೂ ಜಿಲ್ಲೆಗಳಲ್ಲಿ ಸಮಾನವಾಗಿ ವರ್ಷಧಾರೆ ಸುರಿದಿದ್ದು, ದಿನವಿಡೀ ಮಳೆಯಾಗಿದೆ.
ಈ ಮಳೆ ಬೇಸಾಯ, ಕೃಷಿ ಕ್ಷೇತ್ರಕ್ಕೆ ಉತ್ತಮ ಚೈತನ್ಯ ಒದಗಿಸಿದ್ದು, ಜಿಲ್ಲೆಗಳಲ್ಲಿ ನಾಟಿ ಕಾರ್ಯ ವೇಗ ಪಡೆದುಕೊಂಡಿದೆ.
ಮಳೆ ನೀರನ್ನೇ ಆಶ್ರಯಿಸಿದ ಜಿಲ್ಲೆಯ ಬೆಟ್ಟು ಮತ್ತು ಮಜಲು ಭತ್ತದ ಗದ್ದೆಗಳಿಗೆ ಈ ವಾರದ ಮಳೆ ಸಾಕಷ್ಟು ನೀರುಣಿಸಿದೆ. ಒಸರು ಬಲಪಡಿಸುವ ನಿಟ್ಟಿನಲ್ಲಿ ಪ್ರಯೋಜನಕಾರಿಯಾಗಿದೆ. ಕಾರ್ಮಿಕರ ತೀವ್ರ ಅಭಾವದ ನಡುವೆಯೂ ಉತ್ತಮ ಮಳೆಯಾದ ಕಾರಣ ರೈತರು ಬೆಟ್ಟು ಸಾಗುವಳಿಗೆ ಮನಸು ಮಾಡಿದ್ದಾರೆ. ಉಳುಮೆ ಬಿತ್ತನೆ ಕಡೆಗೆ ಲಕ್ಷ್ಯ ವಹಿಸಿದ್ದಾರೆ.
ಈ ವಾರ ಸುರಿದ ಮಳೆ ಈ ವರ್ಷದ ಮಳೆಗಾಲಕ್ಕೆ ಅತ್ಯುತ್ತಮ ನೆಲಕಟ್ಟು ಒದಗಿಸಿದೆ. ನದಿ, ಕೆರೆ, ಬಾವಿ, ಸರೋವರಗಳು ತುಂಬಿ ತುಳುಕಲು ಅನುಕೂಲವಾಗಿದೆ. ಅಡಿಕೆ ತೋಟಗಳಿಗೆ ಬೋರ್ಡೋ ಸಿಂಪಡಣೆಗೆ ಸ್ವಲ್ಪಮಟ್ಟಿನ ಅಡ್ಡಿಯಾಗಿದ್ದರೂ ಫಸಲಿಗೆ ಕೊಳೆರೋಗ ಹಿಡಿದ ಮಾಹಿತಿಗಳು ಸದ್ಯಕ್ಕಿಲ್ಲ ಎಂಬುದು ನೆಮ್ಮದಿಯ ವಿಷಯ. ವರ್ಷಂಪ್ರತಿಯಂತೆ ಈ ಬಾರಿ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿಲ್ಲ. ಎಲ್ಲೂ ಅಹಿತಕರ ಘಟನೆ ಪ್ರಾಣಹಾನಿ, ಸೊತ್ತು ನಾಶದ ಪ್ರಸಂಗಗಳಿಲ್ಲದೆ ಮಳೆಗಾಲ ಹಿತಕರ ಮುನ್ನಡೆ ಸಾಧಿಸಿದೆ. ಇನ್ನೂ ಸುಮಾರು ಒಂದು ತಿಂಗಳ ಕಾಲ ಅತ್ಯುತ್ತಮ ಮಳೆಯಾಗುವ ಅವಕಾಶವಿದೆ. ಈ ಅವಧಿಯಲ್ಲಿ ಚೆನ್ನಾಗಿ ಮಳೆ ಸುರಿದರೆ ಬದಲಾಗುತ್ತಿರುವ ಜಾಗತಿಕ ವಾತಾವರಣದ ನಡುವೆಯೂ ನಮ್ಮೆರಡು ಜಿಲ್ಲೆಗಳಿಗೆ ಜಲ ಮತ್ತು ಆಹಾರದ ಭದ್ರತೆಯನ್ನು ವರುಣ ದೇವ ಪಾಲಿಸಿದ್ದಾನೆ ಎನ್ನುವುದಕ್ಕೆ ಅಡ್ಡಿಯಿಲ್ಲ.
ಜಿಲ್ಲೆಯ ನೇತ್ರಾವತಿ, ಕುಮಾರಧಾರಾ ಮತ್ತಿತರ ನದಿಗಳಲ್ಲಿ ಅಪಾಯಮಟ್ಟಕ್ಕಿಂತ ಕೆಳಗೆ ಪ್ರವಾಹವಿದ್ದು ಎಲ್ಲೂ ಆತಂಕದ ಘಟನೆಗಳಿಗೆ ಮಳೆ ಅವಕಾಶ ನೀಡಿಲ್ಲ. ಉಡುಪಿ ಜಿಲ್ಲೆಯಲ್ಲಿ ಪಶ್ಚಿಮಘಟ್ಟದಿಂದ ಇಳಿಯುವ ನದಿ, ತೊರೆ, ಝರಿಗಳು ಮೈದುಂಬಿಕೊಂಡಿದ್ದು, ಮಳೆಗಾಲದ ಪೂರ್ಣ ವೈಭವವನ್ನು ಜಿಲ್ಲೆಗೆ ತಂದುಕೊಟ್ಟಿದೆ.
ಈ ಎಲ್ಲಾ ಮಳೆಗಾಲದ ವೈಭವ ಸಮೃದ್ಧಿ ಇದ್ದರೂ ಕೂಡಾ ಜಿಲ್ಲೆಯಲ್ಲಿ ಈಗಾಗಲೇ ರೈತರು ಕೈಬಿಟ್ಟಿರುವ ಕಾರ್ತಿ ಬೆಳೆಯ ಗದ್ದೆಗಳಲ್ಲಿ ವಿಶೇಷವಾದ ಕೃಷಿ ಚಟುವಟಿಕೆ ಈ ಬಾರಿಯೂ ಕಂಡುಬರುತ್ತಿಲ್ಲ. ಬೇಸಾಯದ ಗದ್ದೆಯ ವಿಸ್ತೀರ್ಣ ವರ್ಷಂಪ್ರತಿ ಕುಗ್ಗುತ್ತಿದ್ದು, ರೈತರ ಮಕ್ಕಳಾಗಲೀ, ಊರಿನ ಮಂದಿಯಾಗಲೀ ಮೈಮುರಿದು ದುಡಿಯುವ ಕಾಯಕಕ್ಕೆ ವಿದಾಯ ಹೇಳಿರುವುದರಿಂದ ಎಷ್ಟೇ ಮಳೆ ಸುರಿದರೂ ಭತ್ತದ ಸಾಗುವಳಿ ಮಾತ್ರ ಕಳೆದ ವರ್ಷದ ಮಟ್ಟಕ್ಕೂ ತಲುಪುವ ಸಾಧ್ಯತೆಗಳಿಲ್ಲ. ಹಳ್ಳಿಗಳಿಂದ ಏಕಪ್ರಕಾರವಾಗಿ ಕಾರ್ಮಿಕರು ಪಟ್ಟಣದ ಕಡೆಗೆ ಆಕರ್ಷಿತರಾಗಿದ್ದಾರೆ. ಹೆಚ್ಚಿನ ಕೂಲಿ ದೊರಕುವ ಹಿನ್ನೆಲೆಯಲ್ಲಿ ಈ ಮಂದಿಯನ್ನು ಮತ್ತೆ ಕೃಷಿ ಕ್ಷೇತ್ರಗಳಿಗೆ ಆಕರ್ಷಿಸುವುದು ಸಾಧ್ಯವಾಗದ ವಿಷಯ. ಬಹುತೇಕ ರೈತರ ಮಕ್ಕಳೆಲ್ಲ ಕಾಲೇಜು ಮತ್ತು ಉನ್ನತ ಶಿಕ್ಷಣದಲ್ಲಿ ತೊಡಗಿಕೊಂಡಿದ್ದು, ದೂರದೂರುಗಳಲ್ಲಿ ವೃತ್ತಿಪರ ಉದ್ಯೋಗ ಅರಸಿ ಸುಖವಾಗಿ ಬಾಳುವ ಕನಸು ಕಾಣುತ್ತಿರುವುದರಿಂದ ತಲೆತಲಾಂತರದಿಂದ ಸಮೃದ್ಧ ಕೃಷಿಯಿಂದ ನಳನಳಿಸುತ್ತಿದ್ದ ಜಿಲ್ಲೆಯ ಕೃಷಿ ಕ್ಷೇತ್ರ ಇಂದು ತೀರಾ ಬಡವಾಗಿ ಅಪಾಯಕಾರಿ ಮತ್ತು ನಿರಾಶಾದಾಯಕ ಚಿತ್ರಣ ನೀಡುತ್ತಿದೆ. ಇಂತಹಾ ಸನ್ನಿವೇಶದಲ್ಲಿ ಎಷ್ಟೇ ಮಳೆ ಸುರಿದರೂ, ಎಂತಹಾ ಜಲ ಸಮೃದ್ಧಿ ಕಂಡರೂ ಅದು ಬರೀ ಗೋರ್ಕಲ್ಲ ಮೇಲೆ ಮಳೆ ಸುರಿದಷ್ಟೇ ಪರಿಣಾಮ. ಒಟ್ಟಿನಲ್ಲಿ ಸರಕಾರದ ಪ್ರೋತ್ಸಾಹವೂ ಇಲ್ಲದೆ ಕೃಷಿ ಕ್ಷೇತ್ರ ತೀವ್ರ ನಿರ್ಲಕ್ಷ್ಯಗೊಂಡಿದ್ದು ಮತ್ತೆ ಯುವ ಸಮುದಾಯ ಈ ಕಾಯಕದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಗಳು ಕಂಡುಬರುತ್ತಿಲ್ಲ. ಶಿಕ್ಷಣ ಪ್ರಸಾರ ಮತ್ತು ಉದ್ಯೋಗದ ಭರವಸೆಗಳು ಹಳ್ಳಿ ಪ್ರದೇಶದಲ್ಲಿ ಯುವ ಸಮುದಾಯಕ್ಕೆ ಕೃಷಿ ಕ್ಷೇತ್ರದತ್ತ ತೀವ್ರ ನಿರ್ಲಕ್ಷ್ಯದ ಬೀಜ ಬಿತ್ತಿದೆ. ಶಿಕ್ಷಣ ಉದ್ಯೋಗ ಕ್ಷೇತ್ರದಲ್ಲಿ ಆಗಿರುವ ಪ್ರಗತಿಗಳು ಕೃಷಿ ಕ್ಷೇತ್ರಕ್ಕೆ ಮಾರಕವಾಗಿ ಪರಿಣಮಿಸಿದೆ. ಹಾಗಾಗಿ ಕೃಷಿ ಇಂದು ಸಂತುಲನ ಕಳೆದುಕೊಂಡಿದೆ. ಹೀಗಾಗಿ ಮಳೆಗಾಲದ ಸಮೃದ್ಧಿಯನ್ನಾಗಲಿ, ಸಂತಸವನ್ನಾಗಲಿ ಅನುಭವಿಸುವ ವ್ಯವಧಾನ ಕಳೆದುಹೋಗಿರುವುದರಿಂದ ಮಳೆ ಜನರಿಗೆ ತೀವ್ರ ಕಿರಿಕಿರಿಯಾಗಷ್ಟೇ ಕಂಡರೆ ಅಚ್ಚರಿಯಿಲ್ಲ.
ಜಲ, ನೆಲ ಮತ್ತು ಮನುಷ್ಯ ಪ್ರಾಣಿಗಳ ಬದುಕು ಒಂದಕ್ಕೊಂದು ಸಂಬಂಧಿಸಿದ್ದು. ಈ ಪರಿಕ್ರಮ ಸರಿಯಾಗಿದ್ದಾಗಲಷ್ಟೇ ನೆಮ್ಮದಿಯ ಬದುಕು ಕಾಣಲು ಸಾಧ್ಯ. ನಮ್ಮ ಜಿಲ್ಲೆಯ ಮಟ್ಟಿಗೆ ಜಲ, ನೆಲ, ಮಳೆ, ಚಳಿ, ಬೇಸಿಗೆ ಕಾಲ ಪರಿಕ್ರಮ ಅತ್ಯಂತ ಶಿಸ್ತುಬದ್ಧವಾಗಿ ನಡೆಯುತ್ತಿದ್ದರೂ ಸುವಿಶಾಲವಾದ ಕೃಷಿ ಕ್ಷೇತ್ರ ದುಡಿಯುವವರಿಲ್ಲದೆ ಪಾಳು ಬೀಳುತ್ತಿದೆ. ಇದರಿಂದ ಕೋಟ್ಯಾಂತರ ರೂಪಾಯಿ ವರಮಾನ ನಷ್ಟವಾಗುತ್ತಿರುವುದನ್ನು ಹಿರಿಯ ಸಮುದಾಯ ನೋಡಿ ಕಣ್ಣೀರುಗರೆಯುತ್ತಿದೆ.
ವಾಸ್ತವವಾಗಿ ಕೃಷಿ ಕ್ಷೇತ್ರಗಳೇ ಅನ್ನದ ಬಟ್ಟಲುಗಳೆಂದು ದಶಕಗಳಿಂದ ಮೈ ಮನಸ್ಸುಗಳನ್ನು ಈ ಕ್ಷೇತ್ರದಲ್ಲಿ ಸವೆಸಿದ ರೈತರಿಗಂತೂ ಇಂದಿನ ಚಿತ್ರಣ ಕಣ್ಣೀರು ತರಿಸುವಂತಿದ್ದರೂ ಹೊಸ ತಲೆಮಾರಿನ ಜನರನ್ನು ಈ ಕಾಯಕದಲ್ಲಿ ದುಡಿಸಿಕೊಳ್ಳುವುದರಲ್ಲಿ ತಾವೇ ತಂದುಕೊಂಡ ವೈಫಲ್ಯ ಕಾರಣ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗಿದೆ.
ಅನಿವಾರ್ಯವಾಗಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ