ವಿಶಿಷ್ಟತೆಗೆಗಾಗಿ ಜನ ನಿತ್ಯ ಹಾತೊರೆಯುತ್ತಿರುತ್ತಾರೆ. ಎಲ್ಲಿ ವಿಶಿಷ್ಟತೆ ಇದೆಯೋ ಅಲ್ಲಿಗೆ ಜನ ಮುಗಿ ಬೀಳುತ್ತಾರೆ.
ಅದಕ್ಕಾಗಿಯೋ ಏನೋ ದಿನಾ ಹೊಸ ಹೊಸ ವಸ್ತುಗಳನ್ನು ಕಂಪೆನಿಗಳು ಸೃಷ್ಟಿಸುತ್ತಲೇ ಇರುತ್ತದೆ.
ಮಳೆಗಾಲ ಶುರುವಾಗಿದೆ. ಮಳೆ ಜೋರಾಗಿ ಬರುತ್ತಿದೆ.
ಹಾಗೆಂದು ಅಂಗಡಿಗೆ ಛತ್ರಿ ಖರೀದಿಸಲು ಹೋದರೆ ಸಕತ್ ಕನ್ ಪ್ಯೂಷನ್.
ಖರೀದಿಸುವುದು ಮಾಮೂಲಿ ಕೊಡೆಯನ್ನಾ? ಅಥವಾ ಡಿಸೈನ್ ಇರುವುದನ್ನಾ? ಉದ್ದ ಕೊಡೆಯಾ? ಪುಟ್ಟ ಕೊಡೆಯಾ?
ವರ್ಷದಿಂದ ವರ್ಷಕ್ಕೆ ವಿವಿಧ ರೀತಿಯ, ವಿವಿಧ ಡಿಸೈನ್ ಗಳ ಕೊಡೆಗಳು ಮಾರುಕಟ್ಟೆಗೆ ಬರುತ್ತಲೇ ಇದೆ.
ಈ ಬಾರಿಯ ವಿಶೇಷವೆಂದರೆ ಪೇಪರ್ ಕೊಡೆ!
ಏನಿದು!?
ಸ್ವಲ್ಪ ಆಶ್ಚರ್ಯಪಡುವಂತಹದು...
ಇದು ಕಂಡದ್ದು ಬಿ.ಸಿ.ರೋಡಿನಲ್ಲಿ. 'ಕನಸು ಸಾಕಾರಗೊಳ್ಳಲು ಇನ್ನೊಂದೇ ಮೆಟ್ಟಲು' ಅಂತ ಹೆಡ್ಡಿಂಗ್ ಕೊಟ್ಟು ಒಂದು ದೊಡ್ಡದಾದ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಹಂತದ ವರದಿಯನ್ನು ಕನ್ನಡ, ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಬರೆದ ಪತ್ರಿಕೆಯ ಸುದ್ದಿ ಮಾದರಿಯ ವೈಟ್ ಕಲರ್ ನ ಕೊಡೆಯೊಂದು ಕಣ್ಣಿಗೆ ಬಿದ್ದಾಗ ಸ್ವಲ್ಪ ತಬ್ಬಿಬ್ಬು.
ಹೌದು, ಇದು ವಿಶ್ವಕಪ್ ಮುಗಿದ ಮೇಲೆ ಜನರನ್ನು, ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಸೆಳೆಯಲು ಮಾಡುವ ಕಂಪೆನಿಯ ಗಿಮಿಕ್ಸ್ . ಕಂಪೆನಿಯ ವಸ್ತುಗಳ ಮಾರಾಟವಾಗಬೇಕು ಎಂದರೆ ಅಲ್ಲೊಂದು ವಿಶೇಷತೆಯನ್ನು ತೋರ್ಪಡಿಸುವುದು ಮುಖ್ಯವಾಗಿದೆ. ಇಂದಿನ ಕಾಲದಲ್ಲಿ ಜನ ಕ್ರಿಕೆಟ್ ಅಂದರೆ ಮುಗಿಬೀಳುತ್ತಾರೆ. ಆ ದೃಷ್ಟಿಯಿಂದಲೇ ಇರಬೇಕು 'ಕಪ್'ನ ಚಿತ್ರದೊಂದಿಗೆ ಪೇಪರ್ ನ ವರದಿ ರೂಪದಲ್ಲಿ ಚಿತ್ರಿಸಿದ ಬಿಳಿ ಕೊಡೆಯನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ. ಮಾತಾಡಿಸೋಣವೆಂದರೆ ಬಿ.ಸಿ.ರೋಡಿನಲ್ಲಿ ಈ ಕೊಡೆ ಹಿಡಿದು ಕಾಣಸಿಕ್ಕಿದ ಈ ಯುವಕ ಮಾತ್ರ ' ನನ್ನದು ಪೇಪರ್ ಕೊಡೆ... ಇದನ್ನು ಮಾತ್ರ ಕೈಯಿಂದ ಬಿಡೆ...' ಎನ್ನುತ್ತಾ ಮುಂದಕ್ಕೆ ನಡೆದೇಬಿಟ್ಟರು.!

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ