ಚೆಲುವೆಯ ಅಂದದ ಮೊಗಕೆ...
ಕಣ್ಣೇ ಭೂಷಣ...
ಹೀಗೊಂದು ಹಳೆಯ ಸಿನಿಮಾ ಹಾಡಿದೆ. ಮಳೆಗಾಲ ಶುರುವಾಯಿತೆಂದರೆ ಸಾಕು,
ಬಿಡಿಸಲು ಬಣ್ಣದ ಕೊಡೆಗೆ
ಮಳೆಯೇ ಕಾರಣ...'
ಎಂದು ನಾನು ಹಾಡಿಕೊಳ್ಳುತ್ತೇನೆ.
ಕೊಡೆಯೆಂಬುದು ಮಳೆಗಾಲದಲ್ಲಿ ಅಷ್ಟರಮಟ್ಟಿಗೆ ಆಪ್ತ ಅನ್ನಿಸಿಕೊಳ್ಳುತ್ತದೆ.
ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದೆ ಕೊಡೆಗಳಲ್ಲಿ ಇಂದಿನಂತೆ ವೆರೈಟಿಗಳಿರಲಿಲ್ಲ. ಆಗೇನಿದ್ದರೂ ಕಪ್ಪು ಬಣ್ಣದ, ಇಂದಿನ ಟೀವಿ ಡಿಶ್ ನಂತಹಾ ಕೊಡೆಗಳದ್ದೇ ದರ್ಬಾರು. ಆದರೆ ಇಂದು ಹಾಗಲ್ಲ. ಇಂಚು ಲೆಕ್ಕದಿಂದ ಹಿಡಿದು ಫೀಟ್ ಲೆಕ್ಕದವರೆಗಿನ ಬಣ್ಣ ಬಣ್ಣದ ಕೊಡೆಗಳು ಲಭ್ಯ.
ಸುಮ್ಮನೆ ಒಂದು ಬಾರಿ ಮಾರುಕಟ್ಟೆ ಸುತ್ತಿ ನೋಡಿ, ನಿಮಗೇ ಅಚ್ಚರಿಯಾಗುವಂತಹಾ ಮಾದರಿಗಳು ಅಲ್ಲಿ ಕಾಣಸಿಗುತ್ತದೆ. ಕೊಡೆ ಖರೀದಿಗೆಂದು ನೀವು ಅಂಗಡಿಯೊಳಕ್ಕೆ ನುಗ್ಗಿದರೆ ಸಾಕು. ಗೊಂದಲಕ್ಕೆ ಬಿದ್ದುಬಿಡುತ್ತೀರಿ. ಉದ್ದ ಕೊಡೆ, ಪುಟ್ಟ ಕೊಡೆ, ಡಿಸೈನ್ ಕೊಡೆ, ಮಾಮೂಲಿ ಕೊಡೆ, ಓಪನ್ ಕ್ಲೋಸ್ ಕೊಡೆ, ನ್ಯಾನೋ ಕೊಡೆ, ಅಜ್ಜನ ಹಿಡಿಯ ದೊಡ್ಡ ಕೊಡೆ... ಹೀಗೆ ಯಾವುದು ಖರೀದಿಸೋದು ಯಾವುದು ಬಿಡೋದು ಅಂತಾನೇ ಗೊತ್ತಾಗಲಿಕ್ಕಿಲ್ಲ. ಒಂದು ಇನ್ನೊಂದಕ್ಕಿಂತ ಸುಂದರ. ಗುಣಮಟ್ಟದಲ್ಲಿ ವ್ಯತ್ಯಾಸವಿದೆಯಾದರೂ, ಕೈಗೆಟುಕದ ದರದಲ್ಲಿ ಯಾವ ಕೊಡೆಗಳೂ ಇಲ್ಲ ಎಂಬುದು ವಿಶೇಷ.
ಈ ಬಾರಿಯ ಹೊಸ ವಿನ್ಯಾಸದ ಕೊಡೆಯಾದ ಓಪನ್ ಕ್ಲೋಸ್ ಕೊಡೆ ಎಲ್ಲರಿಗೂ ಅಚ್ಚುಮೆಚ್ಚು. ಸ್ವಿಚ್ ಅದುಮಿದೊಡನೇ ಹರಡಿಕೊಳ್ಳುವ, ಮತ್ತೆ ಸ್ವಿಚ್ ಅದುಮಿದರೆ ಮಡಚಿಕೊಳ್ಳುವ ಈ ಕೊಡೆ ಕ್ಷಣಾರ್ಧದಲ್ಲಿ ಬಂದು ಹೋಗುವ ಮಳೆಗೆ ಹೇಳಿ ಮಾಡಿಸಿದಂತಹದ್ದು. ರೇಟು ಕೂಡಾ ಭಾರೀ ಅನ್ನಿಸುವಂತಿಲ್ಲ. ನೂರು ನೂರೈವತ್ತು ರುಪಾಯಿಗಳಿಗೆ ದೊರಕುತ್ತದೆ.
ಹಲವು ಮಾದರಿಯ ಕೊಡೆಗಳ ನಡುವೆಯೂ ಎಷ್ಟೇ ಮಳೆಬಂದರೂ ಒಂಚೂರು ಒದ್ದೆಯಾಗದ ಅಜ್ಜನ ಹಿಡಿಯ ಕೊಡೆಗಳು ಇನ್ನೂ ತನ್ನ ಆಕರ್ಷಣೆ ಉಳಿಸಿಕೊಂಡಿದೆ. ಹಿಂದಿನ ಕಾಲದಲ್ಲಿದ್ದ ಈ ಕೊಡೆ ತನ್ನ ಬೃಹದಾಕಾರದಿಂದಲೋ ಏನೋ ಅಜ್ಜನ ಹಿಡಿಯ ಕೊಡೆ ಎಂದೇ ಜನಪ್ರಿಯ. ವ್ಯತ್ಯಾಸವೆಂದರೆ ಅಂದು ಮರದ ಹಿಡಿಯಿತ್ತು. ಇಂದು ಪ್ಲಾಸ್ಟಿಕ್ ಹಿಡಿ ಬಂದಿದೆ ಎಂಬುದು. ವಿಶೇಷವೆಂದರೆ ಇದರಲ್ಲೂ ಅತ್ಯಾಕರ್ಷಕ ವಿನ್ಯಾಸ, ಚಿತ್ರಗಳು ಕಾಣಿಸುತ್ತದೆ.
ಇನ್ನು ಕೆಲವರು ಜೋರು ಮಳೆಗೆ ಕೊಡೆ ಹಿಡಿದುಕೊಂಡು ಬಿರಬಿರನೆ ನಡೆಯುವಾಗ ಎದುರು ಯಾರು ಬರುತ್ತಿದ್ದಾರೆ ಎಂದು ಗೊತ್ತಾಗದೆ ಢೀ ಕೊಟ್ಟು ಫಜೀತಿ ಪಡುತ್ತಾರೆ. ಅಂತವರಿಗಾಗಿಯೇ ಇಂದು ಪಾರದರ್ಶಕ ಕೊಡೆಯೂ ಮಾರುಕಟ್ಟೆಯಲ್ಲಿ ಲಭ್ಯ.
ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಕೊಡೆಗಳಲ್ಲಿ ಇನ್ನೊಂದು ವಿಶೇಷತೆಯೆಂದರೆ ಮಳೆ ನಿಂತರೂ ಹನಿ ನಿಂತಿಲ್ಲ ಎಂಬಂತೆ ಕೊಡೆ ಒಣಗಲು ಕಾಯಬೇಕಿಲ್ಲ.
ಮಡಚಿದ ಕ್ಷಣದಲ್ಲಿಯೇ ನೀರಿಳಿದು ಹೋಗಿ ಕೊಡೆ ಮತ್ತೆ ಫ್ರೆಶ್!
ಹಿಂದಿನವರು ಬದುಕನ್ನು ಕೊಡೆಗೆ ಹೋಲಿಸುತ್ತಿದ್ದರು.
ಯಾವುದೋ ಜೋರು ಮಳೆಗೆ "ಛೇ.. ನನ್ನ ಕೊಡೆ ಸರಿಯಾಗಿಲ್ಲ" ಅಂತ ಅನಿಸಬಹುದು. ಎಸೆದುಬಿಡುವ ಎಂದೂ ಅನಿಸಬಹುದು. ಆದರದು ಸಾಧ್ಯವೇ?
ಮಳೆಗೆ ಕೊಡೆ ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸಿದಂತೆ ಸಮಯ ಸಂದರ್ಭಕ್ಕೆ ಜೋತುಬಿದ್ದು ಮನುಷ್ಯನೂ ವಿಚಿತ್ರವಾಗಿ ವರ್ತಿಸಬಹುದು. ಹಾಗಂದಮಾತ್ರಕ್ಕೆ ಆತ ಹಾಗೆಯೇ ಅಂತ ತೀರ್ಮಾನಿಸುವುದು ತಪ್ಪಾಗುತ್ತದೆ.
ಮಳೆಯನ್ನು ಕಂಡಾಗ ಕೊಡೆಯ ಯೋಗ್ಯತೆ ತಿಳಿಯುವಂತೆ, ಸಮಸ್ಯೆಗಳು ಇದಿರಾದಾಗ ಓರ್ವ ವ್ಯಕ್ತಿಯ ನಿಜವಾದ ಯೋಗ್ಯತೆ ಅಥವಾ ಸಾಮರ್ಥ್ಯ ತಿಳಿಯಲು ಸಾಧ್ಯ ಎನ್ನುವುದಕ್ಕೆ ಅವರು ಈ ಹೋಲಿಕೆ ಮಾಡುತ್ತಿದ್ದರು.
ಏನೇ ಇರಲೀ, ನಿಮ್ಮಲ್ಲಿ ಕೊಡೆ ಇರಲಿ ಇಲ್ಲಿದಿರಲಿ ಈ ಸಾರಿ ಪೇಟೆಗೊಂದು ಸುತ್ತು ಹಾಕಿ ಬನ್ನಿ.
ಹೊಸಾ ಕೊಡೆ ಖಂಡಿತಾ ಖುಷಿ ಕೊಟ್ಟೀತು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ