ಭಾನುವಾರ, ಜೂನ್ 12, 2011

ಭತ್ತ ನಾಟಿಗೆ ಕ್ರಾಂತಿಕಾರಿ ಯೋಜನೆ!


ಅತ್ತ ಶಿಕ್ಷಿತ ಹಳ್ಳಿಗಾಡಿನ ಮಕ್ಕಳೆಲ್ಲ ಒಂದಲ್ಲಾ ಒಂದು ಕೆಲಸ ಹಿಡಿದು ಪಟ್ಟಣ ಸೇರುತ್ತಿದ್ದರೆ, ಇತ್ತ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯುವವರೇ ಇಲ್ಲದೆ ಬರಡಾಗಿ ಹೋಗುತ್ತಿದೆ.
ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಹತ್ತು ಹಲವು ಕಾರಣಗಳು ಇಂದು ಹಳ್ಳಿಗಾಡಿನಲ್ಲಿ ಭತ್ತ ಕೃಷಿ ಕೆಲಸಗಾರರ ತೀವ್ರ ಕೊರತೆ ಎದುರಿಸುವಂತೆ ಮಾಡಿದೆ. ಇದರ ಪರಿಣಾಮ ಏನಾಗಿದೆ ಎಂದರೆ ಆಹಾರ ಧಾನ್ಯ ಬೆಳೆಯಬೇಕಾದ ಜಮೀನಿನಲ್ಲಿ ಇಂದು ನೀಲಗಿರಿ, ಅಕೇಶಿಯಾದಂತಹಾ ತೋಪು ನೆಡುವಂತಾಗಿದೆ. ಮತ್ತು ಇದು ಇಂದು ನಮ್ಮ ಆಹಾರ ಭದ್ರತೆಗೆ ನೇರವಾಗಿಯೇ ಕುತ್ತು ತಂದಿದೆ.
ಕಾರ್ಮಿಕರೇ ಇಲ್ಲದೆ ಪರದಾಡುವ ಕೃಷಿಕರಿಗೆ ಒಂದು ವೇಳೆ ಕಾರ್ಮಿಕರು ಸಿಕ್ಕಿದರೂ ಅವರ ದುಬಾರಿ ದಿನಗೂಲಿ ಹಾಗೂ ಇತರೆ ಬೇಡಿಕೆ ಈಡೇರಿಸುವ ಹೊತ್ತಿಗೆ ಹೈರಾಣಾಗುವ ಸ್ಥಿತಿ. ರಾಜ್ಯದ ಶೇ 85ರಷ್ಟಿರುವ ರೈತರು ಸಣ್ಣ ಹಾಗೂ ಅತೀ ಸಣ್ಣ ಎಂದರೆ ಎರಡು ಎಕರೆಗೂ ಕಡಿಮೆ ಭೂಮಿ ಹೊಂದಿದ್ದಾರೆ. ಸಂತೋಷದ ಸಂಗತಿ ಎಂದರೆ ರಾಜ್ಯ ಕೃಷಿ ಇಲಾಖೆ ಈ ಸಂಕಷ್ಟವನ್ನು ಮನಗಂಡಿದೆಯಲ್ಲದೆ, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೃಷಿ ರಂಗದಲ್ಲಿ ದ್ವಿತೀಯ ಹಸಿರು ಕ್ರಾಂತಿ ಯೋಜನೆಗೆ ಚಾಲನೆ ನೀಡಿದೆ.
ಕೃಷಿ ಕಾರ್ಮಿಕರ ಅಗತ್ಯ ಎಲ್ಲಿ ಅಧಿಕವಿದೆಯೋ ಅಲ್ಲಿನ ಭತ್ತ ಬೆಳೆಗಾರರನ್ನು ಗಮನದಲ್ಲಿಟ್ಟುಕೊಂಡು ರೈತ ಸಂಪರ್ಕ ಕೇಂದ್ರದಿಂದಲೇ ರೈತರ ಮನೆ ಬಾಗಿಲಿಗೆ ನಾಟಿಯಂತ್ರವನ್ನು ನೀಡಿ ಅತ್ಯಲ್ಪ ವೆಚ್ಚದಲ್ಲಿ ನಾಟಿ ಮುಗಿಸುವ ಮೂಲಕ ಕೃಷಿಯನ್ನು ಲಾಭದಾಯಕವಾಗಿಸುವ ಉದ್ದೇಶ ಇಲಾಖೆಯದ್ದು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಾಜ್ಯ ಸರಕಾರ ಪ್ರಾರಂಭಕವಾಗಿ ಈ ಯೋಜನೆಗೆ 25 ಕೋಟಿ ಒದಗಿಸಿದೆ. ಅಲ್ಲದೆ ಇಲಾಖೆ ರಾಜ್ಯದ ಆಯ್ದ 15 ಜಿಲ್ಲೆಗಳ ಒಟ್ಟು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಯಾಂತ್ರೀಕೃತ ನಾಟಿ ಪದ್ಧತಿ ಅಳವಡಿಸುವ ಗುರಿ ಹೊಂದಿದೆ.
 ಕಡಿಮೆ ವೆಚ್ಚ

ಸಾಮಾನ್ಯವಾಗಿ ಒಂದು ಎಕರೆ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ನಾಟಿ ಮಾಡಬೇಕಿದ್ದರೆ ಸುಮಾರು 2 ಸಾವಿರ ರೂ. ಬೇಕು. ಆದರೆ ಯಾಂತ್ರೀಕೃತ ನಾಟಿಯಲ್ಲಿ ಅದಕ್ಕೆ ತಗಲುವ ವೆಚ್ಚ ಎಕರೆಗೆ ಕೇವಲ 600 ರಿಂದ 700 ರೂ. ರೈತರಿಗೆ ಖರ್ಚು ಕಡಿಮೆ, ಶ್ರಮವೂ ಕಡಿಮೆ. ಇಳುವರಿ ಮಾತ್ರ ಹೆಚ್ಚು! ಅಷ್ಟೇ ಅಲ್ಲ ಸರಕಾರ ಯಾಂತ್ರೀಕೃತ ನಾಟಿ ಮಾಡುವ ರೈತರಿಗೆ ಎಕರೆಗೆ ಸಾವಿರ ರೂ. ಸಹಾಯ ಧನವನ್ನು ನೀಡುತ್ತದೆ.
ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ಒಂದು ಎಕರೆಗೆ ರೂ. 500 ರೂ. ನಂತೆ ಮುಂಗಡ ಪಾವತಿಸಿ ನೋಂದಾಯಿಸಿಕೊಂಡರೆ ಸಾಕು. ಅತ್ಯಾಧುನಿಕ ಭತ್ತ ನಾಟಿಯಂತ್ರ ಅವರ ಜಮೀನಿಗೆ ಬಂದು ನಾಟಿ ಕಾರ್ಯ ಮಾಡುತ್ತದೆ.
ಇಷ್ಟೇ ಅಲ್ಲ ವೈಯಕ್ತಿಕ ರೈತರ ಮಟ್ಟದಲ್ಲಿ ಅಲ್ಲದೆ ಸಮುದಾಯ ಮಟ್ಟದಲ್ಲಿಯೂ ಈ ಯೋಜನೆ ಜಾರಿಗೊಳಿಸಲು ರೈತ ಸಹಕಾರಿ ಸಂಸ್ಥೆಗಳು ಮತ್ತು ನಿರುದ್ಯೋಗಿ ಯುವಕರ ಸಮುದಾಯಗಳಿಗೂ ಈ ಯಂತ್ರ ಖರೀದಿಸಲು ಬೆಲೆ ಮತ್ತು ಯಂತ್ರದ ಸಾಮರ್ಥ್ಯಕ್ಕೆ ಅನುಗುಣವಾಗಿ 77,500 ರಿಂದ 4.80 ಲಕ್ಷದ ವರೆಗೂ ಸಹಾಯಧನ ನೀಡಲಾಗುತ್ತದೆ. ಮೂರು ಮಾದರಿಯಲ್ಲಿ ಈ ನಾಟಿ ಯಂತ್ರ ಲಭ್ಯ.
ನಿರುದ್ಯೋಗಿಗಳಿಗೆ ಕೈತುಂಬಾ ಲಾಭ
ಕೆಲಸವಿಲ್ಲದೆ ಹತಾಶರಾಗಿ ಹೇರಳವಾಗಿ ಸಂಪಾದನೆ ಮಾಡಲು ಹಾತೊರೆಯುತ್ತಿರುವ ನಿರುದ್ಯೋಗಿಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಅವಕಾಶವನ್ನು ಈ ಯೋಜನೆ ಒದಗಿಸುತ್ತದೆ. ಕೇವಲ 33 ಸಾವಿರ ಬಂಡವಾಳದಲ್ಲಿ ಯಂತ್ರ ಪಡೆದು ಒಂದೇ ಕೃಷಿ ಋತುವಿನಲ್ಲಿ ಬಂಡವಾಳ ಹಿಂದೆ ಪಡೆದು ಯಥೇಚ್ಛವಾಗಿ ಸಂಪಾದಿಸಲು ವಿಶೇಷ ಯೋಜನೆಯನ್ನು ವಿ.ಎಸ್.ಟಿ. ಟಿಲ್ಲರ್ಸ್ ಟ್ರಾಕ್ಟರ್ಸ್ ಸಂಸ್ಥೆಯು ಕರ್ನಾಟಕ ಕೃಷಿ ಇಲಾಖೆಯ ಸಹಕಾರದಿಂದ ಸಾದರಪಡಿಸಿದೆ. ಯೋಜನೆಯಿಂದ ರಾಜ್ಯ ಸರಕಾರದ ಗುರಿಯನ್ನು ಶರವೇಗದಲ್ಲಿ ಮುಟ್ಟುವ ಛಲ ಮತ್ತು ನಂಬಿಕೆ ಹಾಗೂ ಇದರ ಯಶಸ್ಸಿನಿಂದ ಈ ಯೋಜನೆ ಇಡೀ ರಾಷ್ಟ್ರಕ್ಕೆ ಮಾದರಿಯಾಗುವ ವಿಶ್ವಾಸವಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಬಿ.ಸಿ.ಎಸ್. ಐಯ್ಯಂಗಾರ್ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ತರಬೇತಿ ಪಡೆದ ಕೃಷಿ ಶಕ್ತಿ ಸೇನೆ ಪಡೆಯನ್ನು ಸಿದ್ಧಗೊಳಿಸುತ್ತಿದೆ. ಇವರಿಗೆ ಶಿಕ್ಷಣ, ತರಬೇತಿ, ನಾಟಿಯಂತ್ರ ಮತ್ತು ದುಡಿಮೆಯ ಅವಕಾಶ ಒದಗಿಸುವ ಭರವಸೆ ನೀಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ