ಶುಕ್ರವಾರ, ಜೂನ್ 10, 2011

ಕಾಡುಪ್ರಾಣಿಗಳಿಗೆ ನಾಡಿನಲ್ಲೇನು ಕೆಲಸ...?

ಜಾತ್ರೆಗೆ ಅಮ್ಮನ ಜೊತೆ ಬಂದ ಪುಟ್ಟ ಬಾಲಕನೋರ್ವ, ಆ ಜನಜಂಗುಳಿಯಲ್ಲಿ ಅಮ್ಮನಿಂದ ಬೇರ್ಪಟ್ಟರೆ ಆತನ ಮನಸ್ಥಿತಿ ಹೇಗಿರಬಹುದು?
 ರಂಪಾಟ ಮಾಡುತ್ತಾ, ಸಿಕ್ಕ ಸಿಕ್ಕವರ ಮೇಲೆ ರೋಷ ತೀರಿಸಲು ಪ್ರಯತ್ನಿಸುತ್ತಾನೆ. ಮಗನಿಂದ ದೂರವಾದ ತಾಯಿ ಕೂಡಾ ಹತಾಶೆಯಿಂದ ದಿಕ್ಕು ಕಾಣದವಳಂತೆ ವರ್ತಿಸುತ್ತಾಳೆ...
ಮೊನ್ನೆ ಮೈಸೂರಲ್ಲಿ ಆದದ್ದೂ ಇದೇ.


ಕಾಡಿನಲ್ಲಿ ಸಲಗಗಳ ಗುಂಪಿನಿಂದ ಬೇರ್ಪಟ್ಟ ಹೆಣ್ಣಾನೆಯೊಂದು ತನ್ನ ಗಂಡು ಮರಿಯೊಂದಿಗೆ ಮೈಸೂರು ನಗರ ಪ್ರವೇಶಿಸಿತ್ತು. ನಗರದ ಜನಸಂದಣಿ, ವಾಹನಗಳ ಓಡಾಟದ ಮದ್ಯೆ ಮರಿಯಾನೆ ತಾಯಿಯಿಂದ ಬೇರ್ಪಟ್ಟಿತು. ಒಂದು ಕಡೆ ತಾಯಿಯಿಂದ ಬೇರ್ಪಟ್ಟ ಮರಿಯಾನೆಯ ರಂಪಾಟ... ಇನ್ನೊಂದೆಡೆ ಮಗನನ್ನು ಹುಡುಕಾ‌ಡುತ್ತಾ ತಾಯಿ ಮಾಡಿದ ದಾಂಧಲೆ - ಮೈಸೂರು ನಗರವನ್ನಷ್ಟೇ ಅಲ್ಲ, ರಾಜ್ಯವನ್ನೇ ಬೆಚ್ಚಿ ಬೀಳಿಸಿತು. ಓರ್ವ ವ್ಯಕ್ತಿ, ಒಂದು ಅಸಹಾಯಕ ಹಸು ಬಲಿಯಾದರು. ಅಪಾರ ಪ್ರಮಾಣದ ಆಸ್ತಿ, ಪಾಸ್ತಿಗೆ ಹಾನಿಯುಂಟಾಯಿತು.
ಇಂಥದ್ದೇ ಇನ್ನೆರಡು ಘಟನೆಗಳು ನಮ್ಮ ಅವಳಿ ಜಿಲ್ಲೆಯಲ್ಲೇ ನಡೆದಿದೆ.


ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ಮನೆಯೊಂದರ ಜಗಲಿ ಮೂಲೆಯಲ್ಲಿ ಚಿರತೆಯೊಂದು ಮಲಗಿಕೊಂಡಿತ್ತು. ಬೆಳ್ಳಂ ಬೆಳಿಗ್ಗೆ ಮನೆಯಿಂದ ಹೊರಬಂದವರು, ಕಾಲಬಳಿಯೇ ಚಿರತೆಯನ್ನು ಕಂಡು ದಿಗ್ಭ್ರಾಂತರಾದರು. ಬಳಿಕ ಅರಣ್ಯ ಇಲಾಖೆಯವರ ನೆರವಿನಿಂದ ಚಿರತೆಯನ್ನು ಸೆರೆ ಹಿಡಿಯಲಾಯಿತು. ಹಸಿವಿನಿಂದ ಕಂಗಾಲಾಗಿದ್ದ ಚಿರತೆ ರಕ್ಷಿತಾರಣ್ಯಕ್ಕೆ ಸಾಗಿಸುವ ದಾರಿಯಲ್ಲಿಯೇ ಸಾವನ್ನಪ್ಪಿತು.
ಗುರುವಾರ ವಿಟ್ಲ ಪಡ್ನೂರು ಗ್ರಾಮದ ಮನೆಯೊಂದರ ಬಳಿ, ಹಂದಿಗಿಟ್ಟ ಉರುಳಿಗೆ ಚಿರತೆಯೊಂದು ಸಿಕ್ಕಿ ಬಿದ್ದಿತ್ತು. ಬುಧವಾರ ರಾತ್ರಿ ಉರುಳಿಗೆ ಸಿಲುಕಿ ಒದ್ದಾಟ ನಡೆಸುತ್ತಿದ್ದ ಚಿರತೆಯನ್ನು ಬಂಧಮುಕ್ತಗೊಳಿಸಿದ್ದು ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ. ಈ ಅವಧಿಯಲ್ಲಿ ಚಿರತೆ ಒದ್ದಾಡಿ ಹೈರಾಣಾಗಿತ್ತು. ಅರಿವಳಿಕೆ ಚುಚ್ಚು ಮದ್ದು ನೀಡಿದ ಬಳಿಕ ಚಿರತೆಯನ್ನು ಉರುಳಿನಿಂದ ಬಿಡಿಸಿ ಪಿಲಿಕುಳಕ್ಕೆ ಕೊಂಡೊಯ್ಯಲಾಯಿತು. ಚಿರತೆಗಳು ಆಹಾರವನ್ನರಸುತ್ತಾ ನಾಡಿಗಿಳಿಯುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ, ನಿಟ್ಟೆ ಪರಿಸರದಲ್ಲಿ ಸರ್ವೇಸಾಮಾನ್ಯವಾಗಿದೆ.


ನಾಡಿನಲ್ಲೇನು ಕೆಲಸ?
ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ನಾಡಿನಲ್ಲಿ ಕಾಣಿಸಿಕೊಳ್ಳುವ ಸಂದರ್ಭ ಹೆಚ್ಚುತ್ತಿದೆ. ಇದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಅರಣ್ಯವನ್ನು ಬರಿದುಗೊಳಿಸಿ ಕಾಂಕ್ರೀಟ್ ಕಾಡನ್ನು ಬೆಳೆಸುತ್ತಿರುವುದು, ಅರಣ್ಯದೊಳಗೆ ಪ್ರವಾಸೀ ಬಂಗಲೆ ನಿರ್ಮಿಸುವುದು, ಅರಣ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮ ಚಟುವಟಿಕೆಗಳು, ಪಿಕ್ ನಿಕ್, ಟ್ರೆಕಿಂಗ್ ನೆಪದಲ್ಲಿ ಅರಣ್ಯಕ್ಕೆ ಲಗ್ಗೆ ಇಡುತ್ತಿರುವ ಪ್ರವಾಸಿಗಳು- ಈ ಎಲ್ಲಾ ಕಾರಣಗಳಿಂದ ಕಾಡು ಪ್ರಾಣಿಗಳು ನೆಲೆಕಳೆದುಕೊಳ್ಳುತ್ತಿವೆ. ಕೆಲವೊಮ್ಮೆ ಕಿಡಿಗೇ‌ಡಿಗಳು ಹಚ್ಚುವ ಬೆಂಕಿ ಕಾಡು ಪ್ರಾಣಿಗಳನ್ನು ಬೆಚ್ಚಿ ಬೀಳಿಸುವುದುಂಟು. ಕಾಡ್ಗಿಚ್ಚಿನಿಂದ ಹುಲ್ಲುಗಾವಲು ನಾಶವಾದಾಗ ಆನೆಗಳು ಆಹಾರ ಹುಡುಕಿಕೊಂಡು ನಾಡಿಗಿಳಿಯುತ್ತವೆ.
ಸಾಮಾನ್ಯವಾಗಿ ಆನೆಗಳು 400 ಕಿ.ಮೀ. ವರೆಗೂ ಅಲೆದಾಡುತ್ತವೆ. ಬನ್ನೇರುಘಟ್ಟ ರಕ್ಷಿತಾರಣ್ಯದ ಆನೆ ತಮಿಳುನಾಡಿನವರೆಗೂ ಹೋಗಿ ಬರುವುದುಂಟು. ಆಗ ಒಮ್ಮೊಮ್ಮೆ ದಾರಿ ತಪ್ಪಿ ನಾಡಿಗಿಳಿದರೆ, ಜನರನ್ನು ಕಂಡು ಗಾಬರಿಯಾಗುತ್ತದೆ.
ಸದ್ಯ ಕೊಡಗು, ಚಿಕ್ಕಮಗಳೂರು, ಬನ್ನೇರುಘಟ್ಟ ಮುಂತಾದೆ‌‌ಡೆ ಅರಣ್ಯದಂಚಿನಲ್ಲಿ ವಿದ್ಯುತ್ ಬೇಲಿ ಮತ್ತು ಕಂದಕಗಳನ್ನು ನಿರ್ಮಿಸಿ ಆನೆಗಳು ನಾಡಿಗಿಳಿಯದಂತೆ ವ್ಯವಸ್ಥೆ ಮಾಡಲಾಗಿದೆ ಆದರೆ ಇನ್ನೂ ಅನೇಕ ಕಡೆ ಈ ಕೆಲಸ ಬಾಕಿ ಉಳಿದಿದೆ. ಕಾಡಿನ ಪ್ರಾಣಿಗಳಿಗೆ ಕಾಡಿನಲ್ಲಿಯೇ ಆಹಾರ, ನೀರು ದೊರಕಿಸುವ ಪ್ರಯತ್ನ ಮಾಡುವುದಾಗಿ ಅರಣ್ಯ ಇಲಾಖೆ ತಿಳಿಸಿದೆ. ಅದೇನೇ  ಇರಲಿ, ತಮ್ಮ ಸ್ವಾರ್ಥಕ್ಕಾಗಿ ಕಾಡು ಪ್ರಾಣಿಗಳ ವಾಸಸ್ಥಾನದ ಮೇಲೆ ಆಕ್ರಮಣ ಮಾಡುವುದನ್ನು ಎಂದಿನವರೆಗೆ 'ಮನುಷ್ಯ ಪ್ರಾಣಿ' ನಿಲ್ಲಿಸುವುದಿಲ್ಲವೋ, ಅಂದಿನವರೆಗೂ ಈ ಸಮಸ್ಯೆ ಮರಕಳಿಸುತ್ತಲೇ ಇರುತ್ತವೆ ಎಂಬುದರಲ್ಲಿ ಎರ‌ಡು ಮಾತಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ