ಯಾಕೋ ಹುಡುಗಾ, ನನ್ನ ಮೇಲೆ ಅಷ್ಟೊಂದು ಸಿಟ್ಟಾ?
ಇನ್ನರ್ಧಾ ಗಂಟೆಯಲ್ಲಿ ಆಕಾಶಾನೇ ತಲೆ ಮೇಲೆ ಜಾರಿ ಬೀಳುತ್ತಂತೋ ಅಂದರೂ ತಲೆಕೆಡಿಸಿಕೊಳ್ಳದ ಭೂಪ ನೀನು.
ಬಾಯಿ ತಪ್ಪಿ ಬಂದ ಒಂದೇ ಒಂದು ಮಾತಿಗೆ ಇಷ್ಟೆಲ್ಲಾ ಸಿಟ್ಟಾ?
ವೆರೀ ಬ್ಯಾಡ್.
ನಿನ್ನ ಹತ್ರ ದಿನಕ್ಕೆ ಅರ್ಧಾ ಗಂಟೆನಾದ್ರೂ ಹರಟದಿದ್ರೆ ನಿದ್ರೇನೇ ಬೀಳಲ್ಲ ಕಣೆ ಅಂತಿದ್ದವನಿಗೆ ಏನಾಗಿದೆಯೋ ಈಗ?
ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ...
ನಿನ್ನನು ಕಂಡಾ ದಿನವೇ ಹೊಮ್ಮಿತು ಪ್ರೀತಿ!
ಹೌದು ಹುಡುಗ,
ಮೊನ್ನೆ ಸುಮ್ಮನೆ ಕೂತಿದ್ದಾಗ ಯೋಚಿಸುತ್ತಿದ್ದೆ. ಈ ಕಾಡುಪಾಪ ನನ್ನ ಬೆನ್ನುಬಿದ್ದಿದ್ದಾದರೂ ಯಾವಾಗ ಅಂತ!
ಪಕ್ಕನೆ ನೆನಪಾಗಲಿಲ್ಲ. ಅದು ಹೈಸ್ಕೂಲು ಮುಗಿಸಿ ಕಾಲೇಜು ಮೆಟ್ಟಿಲಿಗೆ ಕಾಲಿಟ್ಟ ಸಮಯ. ದಿನಾ ಊರ ಹೊರಗಿನ ಬಸ್ ಸ್ಟಾಪ್ ನಲ್ಲಿ ನೀನು ಬೇಡಬೇಡವೆಂದರೂ ಕಣ್ಣಿಗೆ ಬೀಳುತ್ತಿದ್ದೆ.
ಮೊದ ಮೊದಲು ಕಣ್ಣೆತ್ತಿ ನಿನ್ನ ಮುಖ ನೋಡಲು ಭಯವಾಗುತ್ತಿತ್ತಾದರೂ ಹುಡುಗ ನೋಡೋ ಅದೆಷ್ಟು ಚೆನ್ನಾಗಿದ್ದಾನೆ ಅಲ್ವಾ ಅಂತ ಅದೊಂದು ದಿನ ಪಕ್ಕದಲ್ಲಿದ್ದ ಗೆಳತಿಯಲ್ಲಿ ಕೇಳಿದ್ದೆ. ಗುಣಾನೂ ತುಂಬಾ ಚೆನ್ನಾಗಿದೆ ಕಣೆ ಅಂದಿದ್ದಳು ಆಕೆ.
ಮೊದಲೇ ಹುಚ್ಚುಖೋಡಿ ವಯಸು, ಮನಸು ಮರ್ಕಟನಂತಾಗಲು ಹೊತ್ತು ಬೇಕಿರಲಿಲ್ಲ.
ಮೊದಮೊದಲಿಗೆ ನೀನ್ಯಾರು ಎನ್ನುವುದು ನನಗೆ ಗೊತ್ತಿರಲಿಲ್ಲ. ಅಸಲಿಗೆ ನೀನು ನನಗೆ ಒಲಿದು ಬಿಡುವೆ ಎಂಬ ಭರವಸೆಯೂ ಇದ್ದಿರಲಿಲ್ಲ. ತಮಾಷೆಯೆಂದರೆ ಹುಚ್ಚುಹುಚ್ಚಾಗಿ ಪ್ರೀತಿಸಲು ಶುರುವಿಟ್ಟವಳಿಗೆ ನಿನ್ನ ಹೆಸರೂ ಗೊತ್ತಿರಲಿಲ್ಲ.
ಎಂಥ ಹುಚ್ಚು ಪ್ರೀತಿ ಅಲ್ವಾ?
ತಂಗಾಳಿಯಾಗೋ,
ಬಿರುಗಾಳಿಯಾಗೋ,
ನೀನೊಮ್ಮೆ ಬಂದು
ನನ್ನ ಸೋಕಿ ಹೋಗೋ...
ಅದೆಷ್ಟು ಮೊಂಡ ಕಣೋ ನೀನು!
ಪಳಗಿಸಿ ಒಲಿಸಿಕೊಳ್ಳುವಷ್ಟರಲ್ಲಿ ಮುದುಕಿಯಾಗುತ್ತೇನೋ ಎಂಬ ಭಯವಾಗುತ್ತಿತ್ತು. ಆದರೆ ಅದಕ್ಕೆಲ್ಲ ನೀನು ಅವಕಾಶ ಮಾಡಿಕೊಡಲಾರೆ ಎಂದು ಮನಸ್ಸು ಸಮಾಧಾನ ಮಾಡಿತು.
ಒಂದಂತೂ ನಿಜ,
ಈ ಪ್ರಪಂಚದ ಯಾವುದೇ ಮೂಲೆಗೆ ಬೇಕಿದ್ದರೂ ಹೋಗಿ ನೋಡು, ನಿನ್ನನ್ನು ನನ್ನಷ್ಟು ಪ್ರೀತಿಸುವ ಇನ್ನೊಂದು ಜೀವ ಖಂಡಿತಾ ಸಿಗಲಾರದು. ಇದೆಲ್ಲಾ ನಿನಗೆ ಗೊತ್ತಿದೆ ಅಂತಾನೂ ನನಗೆ ಗೊತ್ತು. ಬಾಯ್ಬಿಟ್ಟು ಹೇಳಲು ಮಾತ್ರ ಬಿಗುಮಾನ ಬಿಡದ ಮಹಾನುಭಾವ ನೀನು.
ಇರಲಿ,
ಇಂದು ಬೆಳಿಗ್ಗೆ ನಾನಂದ ಒಂದು ಪುಟ್ಟ ಮಾತಿಗೆ ಇಷ್ಟೊಂದು ಸಿಟ್ಟು ಮಾಡ್ಕೊಂಡಿದ್ದೀಯ. ಅಸಲಿಗೆ ತುಂಬಾನೆ ದುಃಖವಾಗಬೇಕಿತ್ತು. ಆದರೆ ಖುಷಿಯಲ್ಲಿ ಕುಣಿದು ಕುಪ್ಪಳಿಸಬೇಕೆನಿಸುತ್ತಿದೆ.
ಯಾಕೆ ಗೊತ್ತಾ?
ಯಾರ ಮೇಲೆ ನಮಗೆ ಅತೀ ಹೆಚ್ಚು ಪ್ರೀತಿಯಿರುತ್ತೋ, ಅವರೊಂದಿಗೆ ಮಾತ್ರ ಸಿಟ್ಟು ಮಾಡಿಕೊಂಡು ಕೂರಲು ಸಾಧ್ಯವಂತೆ!
ಅಂದರೆ ಹುಡುಗಾ...
ನನ್ನ ಮೇಲೆ ನಿನಗೆ ತುಂಬಾನೇ ಪ್ರೀತಿ ಇದೆ ಅಂತಾಯಿತು!!!

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ