ಬುಧವಾರ, ಜೂನ್ 8, 2011

ಮಿದುಳು...ಸಿಗ್ನಲ್ಲು ಮತ್ತು ನಾವು!

ಛೇ! ಎಂಥ ಕೆಲಸವಾಯ್ತು ಮಾರಾಯ್ರೇ... ನನಗೆ ಆ ವ್ಯಕ್ತಿ ಹಾಗೇಂತ ಗೊತ್ತೇ ಇರಲಿಲ್ಲ...
ಕೈ ತುಂಬ ಸಾಲ ಕೊಟ್ಟು ಮೋಸ ಹೋದ ಗೆಳೆಯನೋರ್ವ ಕೈಕೈ ಹಿಸುಕಿಕೊಳ್ಳುತ್ತಿದ್ದ.
ಆತನಿಂದ ಮಾತ್ರವಲ್ಲ, ನಿತ್ಯ ಬಹುತೇಕ ಕಡೆಗಳಲ್ಲಿ, ಬಹುತೇಕ ಸಂದರ್ಭದಲ್ಲಿ ಇಂತಹಾ ಮಾತುಗಳನ್ನು ನಾವು ಕೇಳಿರುತ್ತೇವೆ. ನೋಡುವಾಗ ಹಾಗೆ ಕಾಣಿಸೋದೇ ಇಲ್ಲ. ನಯವಾದ ಮಾತು, ಒಳ್ಳೆಯ ಸಂಸ್ಕಾರ... ಆದರೆ ಮನುಷ್ಯ ಮಾತ್ರ ಹೀಗೆ ನೋಡಿ... ನಾವು ಕೂಡಾ ಕೆಲವೊಂದು ಸಂದರ್ಭದಲ್ಲಿ ಹೇಳುತ್ತಿರುತ್ತೇವೆ!
ಹಾಗಾದರೆ ಮನುಷ್ಯನ ಅಸಲೀ ಗುಣ ತಿಳಿದುಕೊಳ್ಳುವುದು ಹೇಗೆ?


ಇದು ವಂಚನೆಗೊಳಗಾದ ಬಳಿಕ ಸಾಮಾನ್ಯವಾಗಿ ನಮ್ಮಲ್ಲಿ ಮೂಡುವ ಪ್ರಶ್ನೆ. ನಿಜ, ಇದಕ್ಕೆ ಉತ್ತರ ಅಷ್ಟೊಂದು ಸಲೀಸಾಗಿ ಸಿಗಲಾರದು. ಆದರೆ, ಒಬ್ಬ ವ್ಯಕ್ತಿಯ ಗುಣ ತಿಳಿಯಲು ನಮಗೆ ಬರೀ ಏಳು ಸೆಕೆಂಡುಗಳಷ್ಟೇ ಸಾಕು ಎನ್ನುತ್ತಾರೆ ಇಲ್ಲೊಬ್ಬರು ಮನಶಾಸ್ತ್ರಜ್ಞೆ.
ಇವರ ಹೆಸರು ಅಂಡಾಬ್ಲೇರ್. ನಾವು ವ್ಯಕ್ತಿಯೊಬ್ಬರ ಬಳಿ ಮಾತನಾಡಲು ಶುರುವಿಟ್ಟುಕೊಂಡಾಗಲೇ ನಮ್ಮ ಮೆದುಳು ಎದುರಿಗಿರುವ ವ್ಯಕ್ತಿಯ ಗುಣಗಳೇನು ಎನ್ನುವುದನ್ನು ಗ್ರಹಿಸಿ ಬಿಟ್ಟಿರುತ್ತದೆ ಅನ್ನುವುದು ಇವರ ವಾದ.
ಇರಬಹುದು. ಯಾಕೆಂದರೆ ಬಹಳಷ್ಟು ಜನ 'ನಾನು ಮೊದಲೇ ಅಂದ್ಕೊಂಡಿದ್ದೆ ಅವ ಹಾಗೆ...' ಅಂತಾನೇ ಹೇಳುತ್ತಾರೆ. ಬಹುಶಃ ಅವರಿಗೆ ಅಂತದ್ದೊಂದು ವಿದ್ಯೆ ಮೈಗೂಡಿರಬಹುದೇ? ಗೊತ್ತಿಲ್ಲ.
ಅಷ್ಟೇ ಅಲ್ಲ, ನಮ್ಮ ಮಿದುಳಿನ ಈ ಗ್ರಹಿಸುವಿಕೆ ನಮಗೆ ತಿಳಿಯದಿದ್ದರೂ ಒಟ್ಟಿನಲ್ಲಿ ನಮ್ಮ ಮುಂದಿರುವ ವ್ಯಕ್ತಿ ಎಂಥವರು ಎಂಬುದು ಸ್ವಲ್ಪ ಮಿದುಳಿಗೆ ಕೆಲಸ ಕೊಟ್ಟರೆ ತಿಳಿದುಕೊಳ್ಳಬಹುದಂತೆ. ಇದರಿಂದ ನಾವು ಉತ್ತಮರೊಂದಿಗೆ ವ್ಯವಹರಿಸುತ್ತೇವೋ, ಇಲ್ಲ, ಕೆಟ್ಟವರೊಂದಿಗೆ ವ್ಯವಹರಿಸುತ್ತೇವೋ ಎನ್ನುವುದು ಗೊತ್ತಾಗಿ ಬದುಕು ಹಳಿ ತಪ್ಪದಂತೆ ತಡೆಯಬಹುದು ಎನ್ನುತ್ತಾರೆ.
ಇದೂ ಇರಬಹುದು. ಕೆಲವೊಂದು ವ್ಯಕ್ತಿಗಳು ನಿಂತ ನಿಲುವಿನಲ್ಲಿ, ಆಡುವ ಭಾಷೆಯಲ್ಲಿ, ವರ್ತನೆಗಳಲ್ಲಿ ತುಂಬಾ ಇಷ್ಟವಾಗುತ್ತಾರೆ. ಅವರೊಂದಿಗೆ ಸ್ನೇಹ ಬೆಳೆಸಿ ಬದುಕನ್ನೇ ಬದಲಿಸಿಕೊಂಡವೂ ನಮ್ಮ ನಡುವೆ ಇದ್ದಾರೆ.
ಅಚ್ಚರಿ ಎಂದರೆ 'ದೈಹಿಕ ಭಾಷೆ' ಕುರಿತು ಪುಸ್ತಕವನ್ನೇ ಬರೆದಿರುವ ಜುಡಿ ಜೇಮ್ಸ್ ಕೂಡಾ ಈ ವಾದವನ್ನು ಒಪ್ಪುತ್ತಾರೆ. ದಿನನಿತ್ಯ ನಾವು ಹೊಸಬರೊಂದಿಗೆ ಬೆರೆಯಬೇಕಾಗಿ ಬರುತ್ತದೆ. ಇದು ನಮ್ಮ ಜೀವನದ ಸರ್ವೇ ಸಾಮಾನ್ಯ ಕ್ರಿಯೆ. ನಾವು ವ್ಯವಹಾರಕ್ಕಾಗಿ ಅಥವಾ ವೈಯಕ್ತಿಕವಾಗಿ ಒಬ್ಬ ವ್ಯಕ್ತಿಯನ್ನು ಭೇಟಿಯಾಗಿ ಮಾತನಾಡಿಸುವಾಗಲೇ ಈತ ಕೋಪಿಷ್ಟನೇ? ಸ್ನೇಹಪ್ರಿಯನೇ? ನೀರುಪದ್ರವಿಯೇ? ಎಂದು ತಿಳಿದುಕೊಳ್ಳಬಹುದಾಗಿದೆ ಎನ್ನುತ್ತಾರೆ ಜೇಮ್ಸ್.
ನಾವಂದುಕೊಂಡಷ್ಟೇ ಅಲ್ಲಾರೀ, ನಮ್ಮ ಮಿದುಳು ಸಖತ್ ಶಾರ್ಪ್ ಇದೇ. ಬದುಕಿನ ಪ್ರತೀ ಕ್ಷಣದಲ್ಲೂ ಅದು ಒಂದಲ್ಲ ಒಂದು ರೀತಿಯಲ್ಲಿ ಸಿಗ್ನಲ್ ಗಳನ್ನು ಕೊಡುತ್ತಲೇ ಇರುತ್ತದೆ. ಆದರೇನು ಮಾಡೋಣ ಹೇಳಿ, ಈ ಬ್ಯುಸೀ ಶೆಡ್ಯೂಲ್ ನ ನಡುವಲ್ಲಿ ಆ ಸಿಗ್ನಲ್ ಗಳನ್ನು ರಿಸೀವ್ ಮಾಡೋ ಪುರುಸೋತ್ತಾದರೂ ಎಲ್ಲಿದೆ?!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ