ಮಂಗಳವಾರ, ಜೂನ್ 7, 2011

ಬನ್ನಿ, ನಾವೂ ಜೊತೆಗೂಡೋಣ!

ತುಂಬ ಹೆಚ್ಚೇನೂ ಬೇಡ.
ಒಂದೆರಡು ತಿಂಗಳ ಹಿಂದಿನ ದಿನಗಳನ್ನು ಯೋಚಿಸಿ ನೋಡಿ...
ಬೆಂಗಳೂರು, ಮಂಗಳೂರಿನಂತಹಾ ಮಹಾನಗರ ಯಾಕೆ? ಹೆಚ್ಚು ಹಸಿರಿರುವ ಹಳ್ಳಿಗಾಡಿನಲ್ಲೂ ನೀರಿಗೆ ಬರವಿತ್ತು. ಕೆಲವೊಂದು ಕಡೆಗಳಲ್ಲಂತೂ ಕಿಲೋಮೀಟರ್ ಗಟ್ಟಲೆ ದೂರದಿಂದ ನೀರು ಸಾಗಾಟ ನಡೆಸಬೇಕಾದ ಸ್ಥಿತಿ. ಎಷ್ಟೇ ಅಲ್ಲಾಡಿಸಿದರೂ ಹನಿ ನೀರು ಬಾರದ ಬೋರ್ ವೆಲ್ ಗಳು, ಎಷ್ಟೇ ಆಳಕ್ಕೆ ತಗ್ಗಿಸಿದರೂ ಕೊಡ ತುಂಬಿಸದ ಬಾವಿಗಳು...
ಯಾಕೆ ಹೀಗೆ?
internet image

ಯಾಕೆಂದರೆ ಭೂಮಿಯಲ್ಲಿನ ಸಿಹಿನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಗಮನಿಸಿ ನೋಡಿದರೆ ಇದು ಸ್ಪಷ್ಟವಾಗಿಯೇ ನಮ್ಮ ಅರಿವಿಗೆ ಬರುತ್ತದೆ. ಈಗ ಹಿಂದಿನಂತೆ ಕೆರೆ-ಕೊಳಗಳು ತುಂಬಿ ತುಳುಕುವುದಿಲ್ಲ. ನದಿ-ತೊರೆಗಳು ಮೈದುಂಬಿ ಹರಿಯುವುದಿಲ್ಲ. ಮೊದಲಿನಂತೆ ತಿಂಗಳಾನುಗಟ್ಟಲೆ ಮಳೆ ಸುರಿಯುತ್ತಿಲ್ಲ. ಇದ್ದ ಬದ್ದ ನೀರಿನ ಸೆಲೆಗಳೂ ಯಮ ಖಾರದ ಬಿಸಿಲಿಗೆ ಬತ್ತಿ ಬರಡಾಗಿ ಹೋಗುತ್ತಿವೆ.
ಇದರ ಪರಿಣಾಮಮೆಂದರೆ ಇಂದು ಬೆಂಗಳೂರಿನಂತಹಾ ನಗರಗಳಲ್ಲಿ ಇಂದು ಕುಡಿವ ನೀರು ಮಾರಾಟದ ಸರಕಾಗಿ ಹೋಗಿದೆ. ಅಲ್ಲಿನ ನೀರಿನ ಮೂಲಗಳು ಅಲ್ಲಲ್ಲಿಗೇ ಸಾಕಾಗುವುದಿಲ್ಲ. ಹಾಗಾಗಿ ಗಡ್ಡಕ್ಕೆ ಬೆಂಕಿ ಹತ್ತಿಕೊಂಡ ಮೇಲೆ ಬಾವಿ ತೋಡುವ ಬದಲು ನೀರಿನ ಉಳಿತಾಯ, ಮರುಪೂರೈಕೆಗಾಗಿ ಇಂದೇ ಯೋಜನೆ ಹಾಕಿಕೊಳ್ಳುವ ಅಗತ್ಯ ನಮಗಿದೆ.
ಪ್ರಾಕೃತಿಕವಾಗಿ ಮಳೆಯ ಮೂಲಕ ಪ್ರತೀ ವರ್ಷ ಬೀಳುವ ನೀರನ್ನು ಬಳಸಿಕೊಂಡು ನೀರಿನ ಕೊರತೆ ನೀಗಿಸುವ ಮಳೆ ಕೊಯ್ಲು ಅಥವಾ ವಾಟರ್ ಹಾರ್ವೆಸ್ಟಿಂಗ್ ನ್ನು ಸರಳಾತಿಸರಳ ವಿಧಾನದಲ್ಲಿ ಅದೂ ಹೆಚ್ಚು ಖರ್ಚಿಲ್ಲದೆ ಎಲ್ಲರೂ ಮಾಡಬಹುದು. ಆಗಸದಿಂದ ಉದುರುವ ಶುದ್ಧ ನೀರಿನ ಹನಿಗಳನ್ನು ವ್ಯರ್ಥವಾಗಲು ಬಿಡದೆ ಜಾಗರೂಕತೆಯಿಂದ ಅಗತ್ಯಕ್ಕೆ ಬಳಸಿಕೊಳ್ಳುವ ಈ ಪ್ರಕ್ರಿಯೆ ಅದೆಷ್ಟು ಪರಿಣಾಮಕಾರಿ ಎಂದರೆ ಇದರಿಂದ ಖಂಡಿತವಾಗಿಯೂ ನೀರಿನ ಹಾಹಾಕಾರವನ್ನು ದೂರಮಾಡಬಹುದು. ಅಂದಹಾಗೆ, ಈ ಮಳೆ ಕೊಯ್ಲಿಗೆ ತುಂಬಾ ಜಾಗ ಬೇಕೆಂದೇನೂ ಇಲ್ಲ. ಇದ್ದಷ್ಟೇ ಜಾಗದಲ್ಲೂ ಮಳೆಕೊಯ್ಲು ಮಾಡಲು ಯಾವುದೇ ಅಡ್ಡಿಯಿಲ್ಲ.

internet image
ನಿಮ್ಮ ಮನೆ ತಾರಸಿಯದ್ದಾಗಿದ್ದರೆ, ಅದರ ತಾರಸಿಯಿಂದ ನೀರು ಹೊರಹಾಕುವ ಪೈಪನ್ನು ಜಲಸಂಗ್ರಹ ಜಾಗಕ್ಕೆ ಜೋಡಿಸಬೇಕು. ಹಂಚಿನ ಮನೆಯಾಗಿದ್ದರೂ ಅಷ್ಟೇ. ಮಾಡಿನಿಂದ ಹರಿಯುವ ನೀರಿಗೆ ಅಡ್ಡ ಕತ್ತರಿಸಿದ ಪಿವಿಸಿ ಪೈಪ್ ಜೋಡಿಸಿ ಅದರ ನೀರನ್ನು ಜಲ ಸಂಗ್ರಹ ಜಾಗಕ್ಕೆ ಹರಿಯಬಿಡಬಹುದು. ನೀವು ನೆಲಮಟ್ಟಕ್ಕಿಂತ ಕೆಳಗಿರುವ ನೀರು ಸಂಗ್ರಹ ಮಾಡುವುದಿದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಕೊಯ್ಲು ಸಾಧ್ಯವಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಸಂಗ್ರಹಿಸಿದ ನೀರಿಗೆ ಗಾಳಿ, ಬೆಳಕು ನೇರವಾಗಿ ಬೀಳದೇ ಇದ್ದಲ್ಲಿ ಅದೆಷ್ಟು ದಿನಗಳವರೆಗೂ ಬಳಸಲು ಸಾಧ್ಯ ಎಂಬುದು. ಆದರೆ ಮನೆ ತಾರಸಿ ಹೆಂಚುಗಳು, ಸದಾ ಶುಭ್ರವಾಗಿರುವಂತೆ ನೀವು ನೋಡಿಕೊಳ್ಳಬೇಕು ಅಷ್ಟೆ.
ದೊಡ್ಡ ಪ್ರಮಾಣದಲ್ಲಿ ಮಳೆ ಕೊಯ್ಲು ಮಾಡುವವರು ನೆಲಮಟ್ಟದಿಂದ ನಾಲ್ಕರಿಂದ ಐದು ಅಡಿ ಎತ್ತರ, ಮೂರು ಅಡಿ ಅಗಲದ ಫಿಲ್ಟರ್ ನಿರ್ಮಿಸುವುದು ಕಡ್ಡಾಯ. ಈ ಫಿಲ್ಟರ್ ನಲ್ಲಿ ನಾಲ್ಕು ಇಂಚು ಇದ್ದಿಲು ಮತ್ತು ನಾಲ್ಕು ಇಂಚು ಮರಳನ್ನು ಅಳವಡಿಸಲೇಬೇಕು. ಇದರ ಮೂಲಕ ಹಾದು ಹೋದರಷ್ಟೇ ನೀರು ಶುದ್ಧ ಮತ್ತು ಸುರಕ್ಷಿತ.
ಮೊದಲ ಮಳೆಯ ನೀರು ಮಳೆಕೊಯ್ಲಿಗೆ ಪೂರಕವಲ್ಲ ಎಂಬ ಅಭಿಪ್ರಾಯವಿದೆ. ಅಲ್ಲದೆ ಪ್ರತೀ ಮಳೆಗಾಲಕ್ಕೂ ಮುನ್ನ ತಾರಸಿ, ಹಂಚುಗಳನ್ನು ಚೊಕ್ಕಟ ಮಾಡಿಸುವುದು ಅಗತ್ಯ. ಇದರಿಂದಾಗಿ ನಮ್ಮ ಉಪಯೋಗಕ್ಕೆ ಬೇಕಾದ ನೀರಿಗೆ ನಾವು ಸ್ವಾವಲಂಬಿಗಳಾಗುವುದು ಸಾಧ್ಯ. ಇದಲ್ಲದೆ ಇದೇ ರೀತಿಯಲ್ಲಿ ಇಂಗು ಗುಂಡಿ ನಿರ್ಮಿಸಿ ಭೂಮಿಯ ಅಂತರ್ಜಲವನ್ನೂ ಪುನಃ ಭರ್ತಿ ಮಾಡಲು ಸಾಧ್ಯ.

internet mage
ವಿದೇಶಗಳಲ್ಲಿ ಈಗಾಗಲೇ ಈ ಬಗ್ಗೆ ವಿಸ್ತೃತ ಅಧ್ಯಯನಗಳು ನಡೆದಿದೆ. ಮಾತ್ರವಲ್ಲ ಯಶಸ್ವಿಯಾಗಿ ಈ ಕ್ರಮವನ್ನು ಅನುಷ್ಠಾನಕ್ಕೂ ತರಲಾಗಿದೆ. ಚೀನಾ ಬ್ರಿಝಿಲ್ ಗಳಲ್ಲಿ ಪ್ರತೀ ಮನೆಗಳಲ್ಲೂ ನಾವಿದನ್ನು ಕಾಣಬಹುದು. ಬರ್ಮುಡಾದಲ್ಲಿ ಹೊಸ ನಿರ್ಮಾಣ ಕಾಮಗಾರಿ ನಡೆಸುವಾಗ ಅದರ ನಿವಾಸಿಗಳಿಗೆ ಸಾಕಾಗುವಷ್ಟು ಮಳೆಕೊಯ್ಲು ಮಾಡಲೇಬೇಕು ಕಾನೂನು ಜಾರಿಗೆ ಬಂದಿದೆ. ಯುನೈಟೆಡ್ ಕಿಂಗ್ ಡಂನ ತೋಟಗಳಲ್ಲಿ ನೀರು ಪೀಪಾಯಿ ಸಾಮಾನ್ಯ. ಭಾರತದ ರಾಜಾಸ್ತಾನ, ಥಾರ್ ಮರುಭೂಮಿ ಪ್ರದೇಶದ ಜನರು ಕೂಡಾ ಮಳೆಕೊಯ್ಲನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ.
ಹಾಗಾಗಿ ಮಳೆಕೊಯ್ಲು ಎಂಬ ಸರಳ ವಿಧಾನವನ್ನು ಅಳವಡಿಸಿಕೊಂಡು ಮಳೆನೀರನ್ನು ಸುಮ್ಮನೇ ಹರಿದು ಚರಂಡಿ ಪಾಲಾಗಿ ಮುಂದಕ್ಕೆ ಸಮುದ್ರ ಸೇರುವುದನ್ನು ತಡೆದು ಉಪಯುಕ್ತವಾಗಿ ಬಳಸಿಕೊಂಡರೆ ಇಂದು ನಾವು ಎದುರಿಸುತ್ತಿರುವ ನೀರಿನ ಕೊರತೆ ಅರ್ಧಕ್ಕರ್ಧ ನೀಗುವುದರಲ್ಲಿ ಸಂಶಯವಿಲ್ಲ.
ಈಗಾಗಲೇ ಗ್ರಾಮಮಟ್ಟದಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಕೆಲವೊಂದು ಗ್ರಾಮ ಪಂಚಾಯತ್ ಗಳು ಮಳೆ ಕೊಯ್ಲು ಮಾಡುವ ಗ್ರಾಮಸ್ಥರಿಗೆ ಮನೆ ತೆರಿಗೆ ಹಾಗೂ ನೀರಿನ ಬಿಲ್ ನಲ್ಲಿ ರಿಯಾಯಿತಿ ಕೊಡುಗೆ ನೀಡಲೂ ನಿರ್ಧರಿಸಿದೆ. ನಿಜಕ್ಕೂ ಇದು ಒಳ್ಳೆಯ ಬೆಳವಣಿಗೆ.
ಬನ್ನಿ, ನಾವೂ ಮಳೆಕೊಯ್ಲಿಗೆ ಜೊತೆಗೂಡೋಣ. ಆ ಮೂಲಕ ನೀರಿನ ಹಾಹಾಕಾರಕ್ಕೆ ಪೂರ್ಣವಿರಾಮ ಹಾಕೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ