ಪ್ರತಿಬಾರಿಯೂ ಅಷ್ಟೆ...
ಮಳೆಗಾಲ ಆರಂಭವಾಗುತ್ತಿದಂತೆಯೇ ಉಳ್ಳಾಲದ ಮೊಗವೀರ ಪಟ್ಣ, ಕೈಕೋ ರಸ್ತೆ, ಖಿಲರಿಯಾ ನಗರ, ಮುಕ್ಕಚ್ಚೇರಿ, ಕೋಟೆಪುರ ಮೊದಲಾದ ಪರಿಸರದಲ್ಲಿ ವಾಸಿಸುವ ಮಂದಿಗೆ ನಿದ್ದೆ ಹಾರಿಹೋಗುತ್ತದೆ.
ಹೊತ್ತು ಗೊತ್ತಿಲ್ಲದೆ ಅಬ್ಬರಿಸುವ ಕಡಲು, ಕ್ಷಣ ಕ್ಷಣಕ್ಕೂ ಅಪ್ಪಳಿಸಿ ಬರುವ ಕಡಲ ತೆರೆಗಳು, ನಿಧನಕ್ಕೆ ಕರಗಿ ಹೋಗುತ್ತಿರುವ ನೆಲದಡಿಯ ಭೂಮಿ, ಇಲ್ಲಿನ ಕಡಲ ತೀರದ ನಿವಾಸಿಗಳನ್ನು ದುಃಸ್ವಪ್ನವಾಗಿ ಕಾಡುತ್ತದೆ.
ಇದು ಇಂದು ನಿನ್ನೆಯ ಸಮಸ್ಯೆಯಲ್ಲ.
ವರ್ಷಾನು ವರ್ಷಗಳಿಂದ ಕೊನೆಗಾಣದ ಸಮಸ್ಯೆ ಇದು. ಪ್ರತೀ ಬಾರಿ ಮಳೆಗಾಲದಲ್ಲೂ ಮರುಕಳಿಸುತ್ತಲೇ ಇದೆ. ಇಲ್ಲಿನ ಕಡಲ್ಕೊರೆತ ತಡೆಗೆ ಸರಕಾರವಂತೂ ಕೋಟ್ಯಾಂತರ ರುಪಾಯಿಗಳ ಯೋಜನೆಗಳನ್ನು ಪ್ರಕಟಿಸುತ್ತದೆ. ಮುಖ್ಯಮಂತ್ರಿಗಳು, ಮಂತ್ರಿಗಳು, ಮಂತ್ರಿ ಮಾಗಧರು ಭೇಟಿ ಕೊಟ್ಟಿದ್ದಾರೆ. ಕೊಡುತ್ತಲೇ ಇದ್ದಾರೆ. ಪ್ರತಿ ಮಳೆಗಾಲದಲ್ಲೂ ಜನತೆ ಆಗ್ರಹಿಸುವುದು, ಜನಪ್ರತಿನಿಧಿಗಳು ಭರವಸೆ ನೀಡುವುದು ನಡೆಯುತ್ತಲೇ ಬಂದಿದೆ. ಆದರೆ ಪ್ರಯೋಜನ ಶೂನ್ಯ.
ಇಲ್ಲಿನ ಕಡಲ್ಕೊರೆತ ತಡೆಗೆ ಪರಿಹಾರ ಒದಗಿಸುವಲ್ಲಿ ಬಂದರು ಇಲಾಖೆ ನಿರ್ಲಕ್ಷ್ಯ ತೋರಿರುವುದು ಸ್ಪಷ್ಟವಾಗಿಯೇ ಕಾಣುತ್ತಿದೆ. ಪ್ರತಿಬಾರಿಯೂ ಕಡಲ ತೀರಕ್ಕೆ ಬಂಡೆಕಲ್ಲುಗಳು, ಹೊಯಿಗೆ ಗೋಣಿಗಳನ್ನು ಹಾಕುತ್ತಾರೆಯೇ ಹೊರತು ತಂತ್ರಜ್ಞಾನದಲ್ಲಿ ಜಗತ್ತು ಇಷ್ಟೆಲ್ಲಾ ಮುಂದುವರಿದರೂ ಈ ಕೊರೆತಕ್ಕೆ ಶಾಶ್ವತ ಪರಿಹಾರ ಮಾತ್ರ ಕಂಡುಕೊಳ್ಳುವಲ್ಲಿ ಇಲಾಖೆ ಸೋತಿದೆ ಎನ್ನುತ್ತಾರೆ ಸ್ಥಳೀಯರು.
ಇದಿಷ್ಟು ಉಳ್ಳಾಲ ಪರಿಸರದ ನಾಗರಿಕರ ಸಮಸ್ಯೆಯಾದರೆ ಉಡುಪಿ ಜಿಲ್ಲೆಯ ಕಾಪು, ಉಚ್ಚಿಲ, ಎರ್ಮಾಳ್, ಹೆಜಮಾಡಿ, ಬೆಂಗ್ರೆ, ಹೂಡೆ ಮೊದಲಾದೆಡೆಗಳಲ್ಲಿಯೂ ತೀರವಾಸಿಗಳೂ ಈ ಭೀತಿಯಿಂದ ಹೊರತಾಗಿಲ್ಲ. ಇಲ್ಲೂ ಪ್ರತೀ ಮಳೆಗಾಲದಲ್ಲಿ ದೈತ್ಯ ಬಂಡೆಕಲ್ಲುಗಳನ್ನು ತಂದು ತೀರಕ್ಕೆ ಸುರಿಯಲಾಗುತ್ತದೆ. ಬೃಹತ್ ತೆರೆಗಳು ಕಡಲ ಒಡಲಿಗೆ ಇದನ್ನು ಸಾಗಿಸುತ್ತವೆ. ಇದು ಬಿಟ್ಟು ಶಾಶ್ವತ ಪರಿಹಾರ ಇಲ್ಲೂ ಸಿಕ್ಕಿಲ್ಲ.
ಕಡಲ ತೀರ ಕೊಚ್ಚಿ ಹೋಗದಂತೆ ತಡೆಯಲು ದಡಕ್ಕೆ ಕಲ್ಲು ತಂದು ಸುರಿಯುವ ಕಾರ್ಯ ಕಳೆದ ಸುಮಾರು 20 ವರ್ಷಗಳಿಂದ ನಡೆಯು ನೂರಾರು ಕೋಟಿ ರೂ. ಇದಕ್ಕಾಗಿ ವ್ಯಯ ಮಾಡಲಾಗುತ್ತಿದೆ. ಯಮ ಹಸಿವಿನ ಕಡಲ ರಾಜ ಇವಿಷ್ಟನ್ನು ತನ್ನೊಡಲಿಗೆ ಎಳೆದುಕೊಂಡು ಮತ್ತೆ ಘರ್ಜಿಸುತ್ತಾನೆ.
'ಸರಕಾರ ಈ ರೀತಿ ಖರ್ಚು ಮಾಡುವ ಬದಲಿಗೆ ನಮಗೊಂದು ಸೂರು ಕಲ್ಪಿಸಿಕೊಟ್ಟಿದ್ದರೆ ಅದೆಷ್ಟೋ ಉಪಕಾರವಾಗುತ್ತಿತ್ತು' ಎನ್ನುತ್ತಾರೆ ಕಡಲ ತೀರದ ಸಂತ್ರಸ್ತರು.
ಆದರೆ ಇವರ ಆತಂಕ, ಗೋಳುಗಳು ಕೇಳಬೇಕಾದವರಿಗೆ ಮಾತ್ರ ಕೇಳುತ್ತಲೇ ಇಲ್ಲ.



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ