ಬುಧವಾರ, ಮೇ 4, 2011

ಪೊಟ್ಟಣಗಳು ಆಕರ್ಷಕ: ಪರಿಣಾಮ ಮಾತ್ರ ಭೀಕರ!


 ಯಾವುದೇ ಮನೆಯ ಫ್ರಿಡ್ಜ್ ನ್ನು ನೀವು ಒಂದು ಸಾರಿ ಓಪನ್ ಮಾಡಿ ನೋಡಿ...
ವೇಫಱ್ಸು, ನೂಡಲ್ಸು, ಕೋಲಾಗಳಂತಹಾ ಒಂದಾದರೂ ವಸ್ತು ಕಂಡೇ ಕಾಣುತ್ತದೆ.
ಇದು ಜಾಗತೀಕರಣ ಪ್ರಭಾವವಾ? ಪಾಶ್ಚಿಮಾತ್ಯ ಸಂಸ್ಕೃತಿಗೆ ನಾವು ಶರಣಾಗುತ್ತಿದ್ದೇವಾ? ನಿರ್ಧರಿಸಲಾಗುತ್ತಿಲ್ಲ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತಕ್ಕೆ ಲಗ್ಗೆಯಿಟ್ಟಿರುವ 'ಜಂಕ್ ಫುಡ್ ಸಂಸ್ಕೃತಿ' ನಮಗರಿವಿಲ್ಲದೇ ನಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಇಂದು ಶಾಲೆಯಿಂದ ಮನೆಗೆ ಮರಳುವ ಮಗು ಮೊದಲಿಗೆ ಟೀವಿ ಮುಂದೆ ಪ್ರತಿಷ್ಠಾಪಿಸಿಕೊಂಡು 'ಜಂಕ್ ಫುಡ್' ಮೆಲ್ಲುವ ದೃಶ್ಯ ಸಾಮಾನ್ಯವಾಗಿದೆ.


ಈ ಆಹಾರ ಪದ್ಧತಿ ಕೆಟ್ಟದ್ದು, ನಾವು ತಿನ್ನುವ ಆಹಾರ ದೇಹದ ಬೆಳವಣಿಗೆಯಲ್ಲಿ ಮಹತ್ತರ ಪರಿಣಾಮ ಬೀರುತ್ತದೆ, ಯಾವತ್ತೂ ಒಳ್ಳೆಯ ಪೌಷ್ಠಿಕಾಂಶಭರಿತ ಆಹಾರ ಸೇವಿಸಬೇಕು ಎಂಬ ಅರಿವನ್ನು ಮೂಡಿಸುವ ಕರ್ತವ್ಯ ಹೆತ್ತವರಿಗಿದೆ. ದುರಂತವೆಂದರೆ ಎಷ್ಟೋ ಸಂದರ್ಭಗಳಲ್ಲಿ ಹೆತ್ತವರೇ ಜಂಕ್ ಫುಡ್ ಗಳನ್ನು ಮಕ್ಕಳೊಂದಿಗೆ ತಾವೂ ತಿನ್ನುತ್ತಾ ತಾವೂ ಮಕ್ಕಳಾಗಿಬಿಡುತ್ತಾರೆ!
ಆಕರ್ಷಕ ಪೊಟ್ಟಣಗಳಲ್ಲಿ ಸಿಗುವ ವೇಫಱ್ಸು, ಪಿಜ್ಜಾಗಳು, ಬರ್ಗರ್, ಹುರಿದ ಬೇಳೆಗಳು ಇಂದು ಒಂದಿಷ್ಟು ಹೆಚ್ಚೇ ಮಹತ್ವ ಪಡೆದುಕೊಂಡಿವೆ. ಇದರಿಂದಾಗಿ ಸಹಜವಾಗಿಯೇ ನಮ್ಮ ಸಾಂಪ್ರದಾಯಿಕ ತಿಂಡಿ ತಿನಸುಗಳು ತೆರೆಮರೆಗೆ ಸರಿಯುತ್ತಿದೆ. ಮಕ್ಕಳಷ್ಟೇ ಅಲ್ಲ ಗೃಹಿಣಿಯರೂ ಇದರತ್ತ ವಾಲುತ್ತಿದ್ದಾರೆ. ದಿಢೀರನೇ ತಯಾರು ಮಾಡಬಲ್ಲ ಆಹಾರಗಳು, ವೆಂಡಿಂಗ್ ಯಂತ್ರಗಳ ನಡುವೆ ಕಳೆದುಹೋಗುತ್ತಿದ್ದಾರೆ. ಇದರೊಂದಿಗೆ ತಮ್ಮ ಆರೋಗ್ಯಕ್ಕೆ ತಾವೇ ಅಪಾಯ ತಂದುಕೊಳ್ಳುತ್ತಿದ್ದಾರೆ.
ಜಂಕ್ ಫುಡ್ ಗಳು ನಿಜಕ್ಕೂ ಅಪಾಯಕಾರಿ ಎನ್ನುವುದು ಸಂಶೋಧನೆಗಳಿಂದ ಈಗಾಗಲೇ ಸಾಬೀತಾಗಿದೆ. ಹೃದ್ರೋಗ, ಕ್ಯಾನ್ಸರ್, ಅಧಿಕ ರಕ್ತದೊತ್ತಡ ಅಥವಾ ಮಧುಮೇಹ ಕಾಯಿಲೆಗಳಿಗೆ ಇದುವೇ ಮೂಲ. ಮೂವತ್ತರ ಚಿಕ್ಕ ವಯಸ್ಸಿನಲ್ಲಿಯೇ ಹೃದಯದ ಧಮನಿ ಕಟ್ಟಿಕೊಂಡು ಭವಿಷ್ಯದ ಹೃದಯಾಘಾತಗಳಿಗೆ ಇವು ಭೂಮಿಕೆ ಸಿದ್ಧಪಡಿಸುತ್ತದೆ ಎನ್ನುವುದು ಜಂಕ್ ಫುಡ್ ಕುರಿತಾದ ಅಧ್ಯಯನ ಬೆಳಕಿಗೆ ತಂದ ಆಘಾತಕಾರಿ ಸಂಗತಿಗಳಲ್ಲೊಂದು.

ಹೆಚ್ಚಿನ ಜಂಕ್ ಫುಡ್ ಗಳಲ್ಲಿ ರುಚಿಗೆ ಹಾಗೂ ಹೆಚ್ಚು ದಿನ ಉಳಿಯುವಂತೆ ಮಾಡಲು ಮಾನವ ಶರೀರಕ್ಕೆ ಅಪಾಯಕಾರಿಯಾಗಿರುವ ಬಣ್ಣ, ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇವುಗಳು ದೇಹದ ಪಚನ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರುತ್ತವಲ್ಲದೆ ಬಹಳಷ್ಟು ವರ್ಷದ ಬಳಿಕವಷ್ಟೇ ಆರೋಗ್ಯ ಸಂಪೂರ್ಣ ಕೆಟ್ಟುಹೋಗಿರುವುದು ತಿಳಿಯುವಂತೆ ಮಾಡುತ್ತದೆ.
ಮಕ್ಕಳ ಮೇಲಂತೂ ಇವುಗಳ ಪ್ರಭಾವ ಅಪಾಯಕಾರಿ ಮಟ್ಟದಲ್ಲಿರುತ್ತದೆ. ಮರೆವು, ನಿಶ್ಯಕ್ತಿ, ಮೊದಲಾದ ತೊಂದರೆಗಳು ಇದರಿಂದ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮಕ್ಕಳ ಹೆತ್ತವರು ಈ ಬಗ್ಗೆ ಎಚ್ಚರಿಕೆ ವಹಿಸಲೇಬೇಕು. ತಕ್ಷಣವೇ ಮಕ್ಕಳನ್ನು ಇವುಗಳಿಂದ ದೂರವಿರಿಸುವ ಕೆಲಸ ಮಾಡಬೇಕು.
ಯಾಕೆಂದರೆ ಇದೂ ಅವರ ಕರ್ತವ್ಯಗಳಲ್ಲೊಂದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ