ಶನಿವಾರ, ಮೇ 14, 2011

ಕೈ ಬೀಸಿ ಕರೆಯುವುದಂತೂ ಸತ್ಯ...

 
ಒಂದೆಡೆ ಅಬ್ಬರಿಸುವ ಅರಬ್ಬೀ ಕಡಲು, ಇನ್ನೊಂದೆಡೆ ಸಹ್ಯಾದ್ರಿ ಪರ್ವತ ಶ್ರೇಣಿ,
ನಡುವಲ್ಲಿ ನಿತ್ಯ ಹರಿಧ್ವರ್ಣದ ಕಾಡುಗಳು...
ಕಱ್ರಗಿನ ರಸ್ತೆಯಲ್ಲಿ ಮೋಟಾರು ಬೈಕು ಚಲಾಯಿಸುತ್ತಿದ್ದ ಗೆಳೆಯ ಹಿಂದಕ್ಕೆ ತಿರುಗಿ ಹೇಳಿದ್ದ 'ಹೆಚ್ಚೆಂದರೆ ಇನ್ನೊಂದು ಹತ್ತು ವರ್ಷ. ಪ್ರಕೃತಿಯ ರುದ್ರ ರಮಣೀಯ ದೃಶ್ಯಗಳು, ಮಡಿಲಲ್ಲೇ ಇಟ್ಟುಕೊಂಡಿರುವ ಅದೆಷ್ಟೋ ರಹಸ್ಯಗಳು, ಸೂಕ್ಷ್ಮ ಜೀವ ವೈವಿಧ್ಯಗಳು ಅದೆಲ್ಲೋ ದೂರದೂರಲ್ಲಿ ಕೂತು ಸ್ಯಾಟಲೈಟ್ ಮ್ಯಾಪ್ ಮೂಲಕವೇ ನೋಡಿ ಭೂಮಿ ಖರೀದಿಸುವ ಆಧುನಿಕ ಕುಬೇರರ ಪಾಲಾಗಲಿದೆ.... ನೋಡ ನೋಡುತ್ತಲೇ ನಾಶವಾಗಿ ಹೋಗಲಿದೆ....

ಅಂದು ನಾವಿದ್ದದ್ದು ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ ಕುಮಟಾ ಎಂಬಲ್ಲಿ.
ಹೆಚ್ಚೇನು ದೊ‌ಡ್ಡದಲ್ಲವಾದರೂ ಈ ಪಟ್ಟಣ ಹೆಚ್ಚೂಕಮ್ಮಿ ಸುಮಾರು 19 ಸಾವಿರ ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿದೆ. ಜನಸಂಖ್ಯೆ ಹೆಚ್ಚೆಂದರೆ 29 ಸಾವಿರಗಳಷ್ಟು. ಸಮುದ್ರ ಮಟ್ಟದಿಂದ ಕೇವಲ ಎರಡು ಮೀಟರ್ ಎತ್ತರದಲ್ಲಿರುವ ಈ ಪಟ್ಟಣ ಪ್ರಕೃತಿ ಸೊಬಗಿಗೆ ಹೆಸರು ವಾಸಿ. ಹೊನ್ನಾವರದಿಂದ ಸುಮಾರು 20 ಕಿ.ಮೀ.ನಷ್ಟು ದೂರದಲ್ಲಿರುವ ಕುಮಟಾ, ವನ್ನಲ್ಲಿ, ಕಾಗಲ, ಧಾರೇಶ್ವರ ಬೀಚ್  ಮೂಲಕ ಪ್ರಕೃತಿ ಪ್ರಿಯರನ್ನು ಆಕರ್ಷಿಸಿದರೆ, ಶಾಂತೇರಿ ಕಾಮಾಕ್ಷಿ ದೇವಾಲಯ, ಮಹಾಲಸ, ಹೆಗಡೆ, ಬಾಡಾದ ಅಮ್ಮನವರ ದೇವಾಲಯದ ಮೂಲಕ ಆಸ್ತಿಕರನ್ನು ತನ್ನತ್ತ ಸೆಳೆಯುತ್ತದೆ.

ಅಂದ ಹಾಗೆ ಕುಮಟಾಕ್ಕೆ ನನ್ನ ಪ್ರಯಾಣ ಅನಿರೀಕ್ಷಿತವೇನಲ್ಲ, ಹಾಗಂತ ನೀರಿಕ್ಷಿತ ಎಂಬಂತೆಯೂ ಇರಲಿಲ್ಲ. ಯಾಕೆಂದರೆ ಜೊತೆಗಿರುವ ಗೆಳೆಯನೇ ಹಾಗೆ! ಅಂದುಕೊಂಡೇ ಇರದ ಕ್ಷಣದಲ್ಲಿ ಅಚ್ಚರಿಗೊಳ್ಳುವಂತೆ ಪ್ರತ್ಯಕ್ಷವಾಗುವವನು, ಕೊಡುವ ಸಕಲ ಕಾಟ, ಹಿಂಸೆಗಳನ್ನೂ ಸಹಿಸಿಕೊಂ‌ಡು ನನ್ನ ಸರಿದಾರಿಗೆ ತರಲು ಹೆಣಗುವವನು. ಅದೆಲ್ಲೋ ತೋಟದೊಳಕ್ಕಿಳಿದು ಕೂಲಿಯವರೊಂದಿಗೆ ತಾನೂ ಹಾರೆ, ಪಿಕ್ಕಾಸು ಹಿ‌ಡಿದು ಅಡಿಕೆ, ಬಾಳೆ, ಕಾಳುಮೆಣಸು ಎಂದು ಮಾತಾ‌ಡಿಕೊಳ್ಳುತ್ತಲೇ ಅರೆಕ್ಷಣದಲ್ಲಿ ಜೀನ್ಸು, ಮೇಲೊಂದು ಟೀ ಶರ್ಟು ಎಳೆದುಕೊಂಡು ಮುಖವನ್ನೇ ದಿಟ್ಟಿಸಿ ನೋಡುತ್ತಾ ನಿಂಗೊ ಎತ್ಲಾಗೆ? ಅಂತ ಕೇಳುವ ಹೊಂ ಮಿನಿಸ್ಟರ್ ಗೆ ಬೆಂಗ್ಳೂರ್! ಅಂತಷ್ಟೇ ಹೇಳಿ ಹೊರಟು ಬಿಡುವವನು!
ಈ ಬಾರಿ ವಾರದ ಹಿಂದೆಯೇ ಹೇಳಿದ್ದ. ಎರಡು ದಿನ ಬಿಡುವು ಮಾಡ್ಕೋ ಕುಮಟಾಕ್ಕೆ ಹೋಗಿ ಬರೋಣ ಅಂತ. ಆದರೆ ನಾನೋ ಬದಲಾಗುವ ಕ್ಷಣಗಳಿಗೆ ಸಧ್ಯಕ್ಕೆ ಇತಿಹಾಸಕಾರನಾಗಿ ಬಿಟ್ಟಿರುವುದರಿಂದ ಹೂಂ, ನೋಡೋಣ ಅಂದಿದ್ದೆ. ಕೊನೆ ಘಳಿಗೆಯಲ್ಲಿ ಎಲ್ಲಾ ಕೆಲಸ ಎತ್ತಿ ಅಟ್ಟಕ್ಕಿಟ್ಟು ಹೊರಟೇ ಬಿಟ್ಟಿದ್ದೆ. ಕುಮಟಾಕ್ಕಿದು ನನ್ನ ಮೊದಲ ಭೇಟಿಯೇನೂ ಆಗಿರಲಿಲ್ಲ. ಈ ಹಿಂದೆಯೂ ಒಂದೆರಡು ಬಾರಿ ಹೋಗಿ ಬಂದಿದ್ದೆ. ಆದರೆ ಈ ಬಾರಿ ಮಾತ್ರ ಕುಮಟಾನನ್ನು ಅಕ್ಷರಶಃ ಸಮ್ಮೋಹನಕ್ಕೊಳಗಾಗಿಸಿತು.

ಉತ್ತರ ಕನ್ನಡ ನಿಜಕ್ಕೂ ಪ್ರಕೃತಿ ಸೌಂದರ್ಯಕ್ಕೆ ಹೆಸರು ವಾಸಿ.
ಸುಮಾರು ಮೂರುಸಾವಿರ ವರ್ಷಗಳ ಇತಿಹಾಸವಿರುವ ಈ ಜಿಲ್ಲೆಯ ಭೂಭಾಗವನ್ನು ಕದಂಬ, ಬಾದಾಮಿಚಾಲುಕ್ಯ, ರಾಷ್ಟ್ರಕೂಟರು, ವಿಜಯನಗರದ ಅರಸರು, ಬಿಜಾಪುರ ಸುಲ್ತಾನರು, ಮರಾಠರು, ಮೊಘಲರು, ಪೋರ್ಚುಗೀಸರು ಆಳಿ ಹೋಗಿದ್ದಾರೆ. ಜಲಪಾತಗಳೇ ಹೆಚ್ಚಾಗಿರುವುದರಿಂದಲೋ ಏನೋ ಜಲಪಾತಗಳ ಜಿಲ್ಲೆ ಎಂದೂ ಇದು ಹೆಸರುಮಾಡಿದೆ. ಪಶ್ಚಿಮ ಘಟ್ಟ, ಅಣಶಿ ರಾಷ್ಚ್ರೀಯ ಉದ್ಯಾನವನ, ವನ್ಯಜೀವಿ ಪಾರ್ಕ್ ಗಳು. ಕಡಲ ತೀರಗಳು, ದಾಂಡೇಲಿ ಅಭಯಾರಣ್ಯ ಪ್ರಾಚೀನ ದೇವಾಲಗಳು, ಕದಂಬರ ಬನವಾಸಿ, ಸೋಂದಾ, ಬೀಳಗಿ, ಮಿರ್ಜಾನ ಕೊಟೆ, ಗೋಕರ್ಣದ ಓಂ ಬೀಚ್, ಕು‌ಡ್ಲೆ ಬೀಚ್, ಯಾಣ, ವಿಶ್ವದಲ್ಲೇ ಅತೀ ಎತ್ತರದ ಧ್ಯಾನಾಸಕ್ತ ಶಿವನ ಮೂರ್ತಿ... ಹೀಗೇ ಪಟ್ಟಿ ಮಾಡುತ್ತಾ ಹೋದರೆ ಹಾಳೆಗಳೇ ಸಾಲವು. ಬಳುಕುವ ಉಂಚಳ್ಳಿ ಜಲಪಾತ, ಸೊಬಗಿನ ಸಾತೊಡ್ಡಿ ಜಲಪಾತ, ಬೆಣ್ಣೆ ಹೊಳೆ ಜಲಪಾತ, ಅಣಶಿ ಜಲಪಾತ, ಲಾಲಗುಳಿ ಜಲಪಾತ, ಮಾಗೋಡು ಜಲಪಾತ, ಭಯ ಹುಟ್ಟಿಸುವ ಬುರುಡೆ ಜಲಪಾತ... ಹೀಗೆ ಇವುಗಳೂ ಬಹುಶಃ ಪಟ್ಟಿಗೆ ನಿಲುಕವು.
ಮಳೆಗಾಲ ಬಂತೆಂದರೆ ಸಾಕು ಮೈದುಂಬಿಕೊಳ್ಳುವ ಇವುಗಳು ಒಳ್ಳೆಯ ಟ್ರೆಕ್ಕಿಂಗ್ ತಾಣಗಳೂ ಹೌದು. ಇಲ್ಲಿನ ಕಡಲ ಕಿನಾರೆಗಳೂ ಒಂದಕ್ಕಿಂತ ಒಂದು ಸುಂದರ.
ಇದರ ಪೈಕಿ ಒಂದಾದ ಕಾಗಲ ಬೀಚ್ ಗೆ ನಮ್ಮ ಭೇಟಿ ಅನಿರೀಕ್ಷಿತವಾಗಿಯೇ ಆಯಿತು. ಇಲ್ಲಿನ ಜೀವನದಿ ಅಘನಾಶಿನಿ ಅರಬ್ಬಿ ಕಡಲ ತೆಕ್ಕೆ ಸೇರುವ ಸ್ಥಳವಿದು. ಜಗತ್ತಿನ ಯಾವ ಮೂಲೆಯಲ್ಲಿಯೂ ಸಿಗದಂತಹಾ ಜೀವ ವೈವಿಧ್ಯ ಅಘನಾಶಿನಿ ನದಿ ತಟಗಳಲ್ಲಿ ಕಾಣಸಿಗುತ್ತವೆ. ಸಹಸ್ರಾರು ಕುಟುಂಬಗಳಿಗೆ ಜೀವನಾಧಾರವಾಗಿ, ಅಮ್ಮನಾಗಿರುವ ಈಕೆ ಜನರೊಂದಿಗೆ ಭವನಾತ್ಮಕ ಸಂಬಂಧವನ್ನು ಹೊಂದಿದ್ದಾಳೆ.

ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಆತಂಕವೆಂಬುದು ಸದ್ದಿಲ್ಲದೆ ಬಂದು ಇಲ್ಲಿನ ಅಮಾಯಕ, ಮುಗ್ದ ಜನರ ಎದೆತಟ್ಟುತ್ತಿದೆ. ಅಘನಾಶಿನಿ ದಂಡೆಯಲ್ಲಿರುವ ಜನರ ಮೇಲೆ ಆಗಾಗ ತೂಗು ಕತ್ತಿ ತೂಗುತ್ತಲೇ ಇದೆ. ಆಗಾಗ ಈ ನದಿಗೆ ಅಪಾಯವಾಗುವ ಸುದ್ದಿ ಕೇಳಿ ಬರುತ್ತದೆ. ಈಗ ಎಲ್ಲೆಡೆಯಂತೆ ಇಲ್ಲಿಗೂ ನಿಧಾನಕ್ಕೆ ಆಧುನಿಕತೆಯ ಗಾಳಿ ಬೀಸತೊಡಗಿದ್ದು, ದುಡ್ಡುಗಳಿಕೆಗೆ ಸೂಕ್ತ ವಾತಾವರಣ ಎಂದು ತಿಳಿದ ಅದೆಷ್ಟೋ ಉದ್ಯಮಿಗಳು, ಆಗರ್ಭ ಶ್ರೀಮಂತರು ದು‌ಡ್ಡು ಗಳಿಕೆಗೆ ಈ ಪರಿಸರದತ್ತ ಕಣ್ಣಿಕ್ಕಿದ್ದಾರೆ. ಇಲ್ಲೇ ಪಕ್ಕದ ತದಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರವೊಂದು ನೆಲೆಗೊಳ್ಳಲು ಶತಾಯಗತಾಯ ಅಣಿಯಾಗುತ್ತಿದೆ. ಕಡಲ ತಟಗಳಲ್ಲಿ ರಿಸೋರ್ಟು, ರಿಯಲೆಸ್ಟೇಟ್ ಗಳ ನೆರಳು ಮೆಲ್ಲ ಮೆಲ್ಲನೆ ಬಿಳತೊಡಗಿದೆ. ಇಲ್ಲಿ ಬೃಹತ್ ಯೋಜನೆಗಳು ಕಾಲೂರಲು ನಿರಂತರವಾಗಿ ಯತ್ನಿಸುತ್ತಿದೆಯಾದರೂ, ಸ್ಥಳೀಯ ಪರಿಸರ ಪ್ರೇಮಿಗಳ ದಣಿವರಿಯದ ಹೋರಾಟಗಳು ಸದ್ಯದ ಮಟ್ಟಿಗೆ ಅವೆಲ್ಲವನ್ನು ಹಿಮ್ಮೆಟ್ಟಿಸಿವೆ. ಈ ನಡುವೆ ಅಘನಾಶಿನಿ ನದಿ ಹಾಗೂ ಸುತ್ತಲ ಪ್ರದೇಶಗಳನ್ನು ಜೀವ ವೈವಿಧ್ಯ ಸೂಕ್ಷ್ಮ ತಾಣವೆಂದು ಗುರುತಿಸಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಸರಕಾರ ನಂದಿಕೂರಿನಂತೆಯೇ ಇಲ್ಲೂ ವರ್ತಿಸುತ್ತದೆಯೇ ಎಂಬ ಆತಂಕವೂ ಇದ್ದೇ ಇದೆ.
ಪ್ರಾಕೃತಿಕವಾಗಿಯೇ ಸೊಬಗು ಹೊಂದಿರುವ ಉತ್ತರ ಕನ್ನಡವನ್ನು ಪ್ರವಾಸೋದ್ಯಮದ ಮೂಲಕ ಲಾಭದಾಯವಾಗಿಸುವುದು ಬಿಟ್ಟು ಹೊಗೆಯುಗುಳುವ ದೈತ್ಯ ಯೋಜನೆಗಳು ನಿಜಕ್ಕೂ ಸರಕಾರಕ್ಕೆ ಬೇಕಿದೆಯಾ? ಎಂಬ ಪ್ರಶ್ನೆ ಇಲ್ಲಿನವರಲ್ಲಿದೆ ಆದರೆ ಗಮನಿಸಬೇಕಾದ ಅಂಶವೆಂದರೆ ಮುಖ್ಯವಾಗಿ ಪ್ರವಾಸೋದ್ಯಮ ಇಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಯಾವುದೇ ಸ್ಥಳಗಳಿಗೆ ಹೋಗಲು ಕನಿಷ್ಟ ಸೂಕ್ತ ರಸ್ತೆಯಾಗಲಿ, ಪ್ರವಾಸಿಗರಿಗೆ ತಂಗಲು ವ್ಯವಸ್ಥೆಯಾಗಲಿ ಇನ್ನೂ ಆಗಿಲ್ಲದ್ದು ನಿಜಕ್ಕೂ ವಿಪರ್ಯಾಸ.

ಏನೇ ಇದ್ದರೂ ಇಲ್ಲಿನ ಸಾಗರಗಳು, ಜಲಪಾತ, ನದಿತೊರೆಗಳು, ಮಾತು ಮಾತಿಗೂ ಅಡ್ಡಿಲ್ಲೆ,... ಅ‌ಡ್ಡಿಲ್ಲೆ... ಅನ್ನೋ ಮುದ್ದಾದ ಭಾಷೆ, ಮುಗ್ದ ಮಂದಿ, ವಿಶೇಷ ತಿನಿಸುಗಳಾದ ಕಾಯಿರಣಿ, ತಂಬುಳಿ, ನೀರ್ ದೋಸೆ, ಹಸಿ, ಸಾಸಿಮೆ, ಮಲೆನಾಡು ಗಿ‌ಡ್ಡ ತಳಿಯ ಕ್ಷೀರ ಮತ್ತೆ ಮತ್ತೆ ಉತ್ತರ ಕನ್ನಡದತ್ತ ಕೈ ಬೀಸಿ ಕರೆಯುವುದಂತೂ ಸತ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ