ಶನಿವಾರ, ಮೇ 21, 2011

ಮೃತ್ಯು ಕೂಪ ಇಂದು ಮೌನ...



ಅದು ಕೆಂಜಾರಿನ ಮೃತ್ಯುಕೂಪ.
ಅಲ್ಲಿ ಈಗಲೂ ನೀರವ ಮೌನ. ಮುನ್ನೂರ ಅರವತ್ತೈದು ದಿನಗಳು ಅದಾಗಲೇ ಕಳೆದು ಹೋದರೂ, ಅಲ್ಲೊಂದು ಇಲ್ಲೊಂದು ಚಪ್ಪಲಿಗಳು, ನೀರಿನ ಬಾಟಲ್ ಗಳು, ಮಣ್ಣಿನಡಿ ಹೂತು ಹೋದ ಅರೆಬೆಂದ ಬಟ್ಟೆ ಚೂರುಗಳು, ಅನಾಮಿಕರ ಆಕ್ರೋಶಕ್ಕೆ ತುತ್ತಾದ ಸ್ಮಾರಕದ ಪಳೆಯುಳಿಕೆಯಗಳು.... ಬರೀ ಇವುಗಳಷ್ಟೇ ಆ ಭೀಬತ್ಸ ದುರಂತಕ್ಕೆ ಮೂಕ ಸಾಕ್ಷಿಯಾಗಿ ಇಂದೂ ಉಳಿದುಕೊಂಡಿದೆವೆ...
ಸರಿಯಾಗಿ ಒಂದು ವರ್ಷದ ಹಿಂದೆ ಏರ್ ಇಂಡಿಯಾಗೆ ಸೇರಿದ ದೈತ್ಯ ವಿಮಾನ ಬೋಯಿಂಗ್ ಐಎಕ್ಸ್ 812ನ್ನು 158 ಜೀವಗಳೊಂದಿಗೆ ಈ ಮೃತ್ಯು ಕೂಪ ಆಹುತಿ ಪಡೆದಿತ್ತು.

ಅಂದು ಮೇ 22ರ ಶನಿವಾರ. ಇಸವಿ 2010.
ಏರ್ ಇಂಡಿಯಾದ ಈ ನೃತದೃಷ್ಟ ವಿಮಾನ ದೂರದ ಖರ್ಜೂರದ ನಾಡು ದುಬೈನಿಂದ 166 ಮಂದಿಯನ್ನು ಹೊತ್ತು ಮಂಗಳೂರಿನೆಡೆಗೆ ಬೆಳಗಿನ ಜಾವ ಮೂರರ ಸುಮಾರಿಗೆ ಆಗಸಕ್ಕೆ ನೆಗೆದಿತ್ತು. ಇತ್ತ ಹೊಸತೊಂದು ದಿನಕ್ಕೆ ಮೆಲ್ಲನೆ ತೆರೆದುಕೊಳ್ಳುತ್ತಿದ್ದ ಕರಾವಳಿಯ ಮಂದಿಗೆ ಮಾತ್ರ ಮುಂದಿನ ಕೆಲವೇ ತಾಸುಗಳಲ್ಲಿ ತಾವೊಂದು ಭೀಬತ್ಸ ಸುದ್ದಿಗೆ ಕಣ್ಣು, ಕಿವಿಯೊಡ್ಡಲಿದ್ದೇವೆ ಎಂಬ ಕಿಂಚಿತ್ತೂ ಸುಳಿವೂ ಇರಲಿಲ್ಲ. ಬೆಳಗ್ಗೆ ಆರು ಗಂಟೆ ಸುಮಾರಿಗೆ ಕೆಂಜಾರಿನ ಆಗಸಕ್ಕೆ ತಲುಪಿಕೊಂಡ‌ ವಿಮಾನ ಮುಂದಿನ ಕ್ಷಣ ಭೂ ಸ್ಪರ್ಷಗೊಳ್ಳುವ ತರಾತುರಿಯಲ್ಲೇ ಕೆಂಜಾರಿನ ಕಣಿವೆಯಲ್ಲಿ ಪತನಗೊಂಡಿತು. ಸುದ್ದಿ ತಿಳಿದು ಧಾವಿಸಿ ಬಂದವರಿಗೆ ಅಲ್ಲಿ ಕಂಡದ್ದಾದರೂ ಏನು? ಸುಟ್ಟು ಕರಕಲಾದ ದೇಹಗಳು, ಕುಟುಕು ಜೀವ ಉಳಿಸಿಕೊಂ‌ಡು ಕಣ್ಣೆದುರಿಗೇ ಉಸಿರು ಕಳೆದುಕೊಂಡ ನತದೃಷ್ಟರು, ಎದುರಿಗೆ ಎಂದೂ ಕಂಡು ಕೇಳರಿಯದ ಭೀಕರ ದೃಶ್ಯ.
ಬಳಿಕ ಇವಿಷ್ಟು ದಿನಗಳು ಉರುಳಿ ಹೋಗಿವೆ. ಕೆಂಜಾರಿನ ಆಗಸದಲ್ಲಿ ಅದೆಷ್ಟೋ ವಿಮಾನ ಹಾರಿ ಹೋಗಿದೆ. ಘಟನೆ ನೆನಪಿಸಿಕೊಂಡರೆ ಕಾಡುವ ಕಹಿ ನೆನಪು ಒಂದೆಡೆಯಾದರೆ, ದುರಂತಕ್ಕೆ ಪೈಲೆಟ್ ನ ನಿರ್ಲಕ್ಷ್ಯ ಕಾರಣ ಎಂದು ಸಾಬೀತಾಗಿದ್ದರೂ, ಮೃತರ ಕುಟುಂಬದವರು ಮಾತ್ರ ತಮಗೆ ನ್ಯಾಯ ಸಮ್ಮತವಾಗಿ ದೊರಕಬೇಕಾದ ಪರಿಹಾರಕ್ಕೆ ಅಲೆದಾಡುವ ಸ್ಥಿತಿ ಇಂದಿಗೂ ತಪ್ಪಿಲ್ಲ.
ದುರಂತದಲ್ಲಿ ಮೃತಪಟ್ಟವರ ಕೆಲವು ಕುಟುಂಬಗಳಷ್ಟೇ ಏರ್ ಇಂಡಿಯಾ ನೀಡಿದ ಒಂದಿಷ್ಟು ಪರಿಹಾರವನ್ನು ಪ‌ಡೆದುಕೊಂಡಿವೆ. ಉಳಿದಂತೆ ವಿಮಾನಯಾನ ಸಚಿವರು ನೀಡಿದ ಭರವಸೆಯ ಪರಿಹಾರ ಮೊತ್ತ ಇನ್ನಷ್ಟೇ ಸಿಗಬೇಕಿದೆ.


ಸ್ಮಾರಕಕ್ಕೂ ದುರಂತ ಅಂತ್ಯ...
ಏರ್ ಇಂಡಿಯಾ ದುರಂತದಲ್ಲಿ ದುರಂತದಲ್ಲಿ ಅಸುನೀಗಿದ ಜೀವಗಳ ನೆನಪಿಗಾಗಿ 2010ರ ಜುಲೈ 27ರಂದು ಈ ಪರಿಸರದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿತ್ತು. ಸುಮಾರು ಒಂದೂವರೆ ಇಂಚು ದಪ್ಪದ ಆರು ಗ್ರಾನೈಟ್ ಶಿಲೆಯಲ್ಲಿ ಮೃತಪಟ್ಟ ದುರ್ದೈವಿಗಳ ಹೆಸರನ್ನು ಕೆತ್ತಲಾಗಿತ್ತು. ಆದರೆ ಅಕ್ಟೋಬರ್ 4ರಂದು ಕಿಡಿಗೇಡಿಗಳ ಆಕ್ರೋಶಕ್ಕೆ ತುತ್ತಾದ ಈ ಸ್ಮಾರಕ ಧ್ವಂಸಗೊಂಡಿತ್ತು. ಈ ಬಗ್ಗೆ ಏರಿಂಡಿಯಾ ಬಜಪೆ ಪೊಲೀಸರಿಗೆ ದೂರನ್ನೂ ನೀಡಿತ್ತು. ಈ ಸ್ಮಾರಕ ಧ್ವಂಸಗೊಳಿಸಿದವರು ಯಾರು ಮತ್ತು ಯಾಕೆ ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ನಡುವೆ ಮತ್ತೆ ಈ ಪರಿಸರದಲ್ಲಿ ಸ್ಮಾರಕ ನಿರ್ಮಿಸುವ ನಿರ್ಧಾರದಿಂದ ಏರ್ ಇಂಡಿಯಾ ಹಿಂದೆ ಸರಿದಿರುವುದಾಗಿ ಮೂಲಗಳು ಹೇಳಿವೆ. ಮತ್ತೆ ಸ್ಮಾರಕ ನಿರ್ಮಿಸುವುದು, ಮತ್ತೆ ಧ್ವಂಸಗೊಳ್ಳುವುದು... ಮುಂದುವರಿದರೆ ಹೇಗೆ ಎಂಬುದು ಈ ನಿರ್ಧಾರದ ಹಿಂದಿರುವ ಸತ್ಯ.
ಇನ್ನೂ ಭಯಾತಂಕ...


ದುರಂತ ಘಟಿಸಿ ವರ್ಷ ತುಂಬಿದರೂ ಕೆಂಜಾರು, ಕರಂಜಾರು, ಅದ್ಯಪಾಡಿ ಜನತೆಯ ಮನಸಿನಿಂದ ಮಾತ್ರ ಈ ಚಿತ್ರಣಗಳು ಮಾಸಿ ಹೋಗಿಲ್ಲ. ನೀರವ ಮೌನ ಹೊದ್ದುಕೊಂಡಿರುವ ಈ ಕಣಿವೆ ಮಾತ್ರ ಇಂದಿಗೂ ಅವರಲ್ಲಿ ಭಯ ಹುಟ್ಟಿಸುತ್ತದೆ.
'ಮೊದಲೆಲ್ಲ ಹೊತ್ತು ಗೊತ್ತಿಲ್ಲದೆ ಇಲ್ಲೆಲ್ಲಾ ಓಡಾಡುತ್ತಿದ್ದೆವು... ಆದರೀಗ ಬೇಡ‌ ಬೇ‌ಡವೆಂದರೂ ಈ ಜಾಗ ಕಣ್ಣಿಗೆ ಬೀಳುತ್ತದೆ. ದುರಂತದ ದೃಶ್ಯಗಳು ಮತ್ತೆ ಕಣ್ಣೆದುರಿಗೆ ಬಂದು ನಿಲ್ಲುತ್ತವೆ ಮನಸ್ಸಿಗೆ ಭಯವಾಗುತ್ತದೆ....' ಎನ್ನುತ್ತಾರೆ ಸ್ಥಳೀಯರೋರ್ವರು.
 ಆದರೆ ಕೆಂಜಾರಿನ ಈ ಮೃತ್ಯು ಕೂಪಕ್ಕೆ ಈಗಲೂ ಕುತೂಹಲಿಗಳು ಬರುತ್ತಲೇ ಇದ್ದಾರೆ. ಇಲ್ಲಿ ಸುತ್ತಾಡುತ್ತಲೇ ಹಳೆಯ ದುರಂತವನ್ನು ಮೆಲುಕು ಹಾಕುತ್ತಾರೆ. ಕಣ್ಣೀರಾಗುತ್ತಾರೆ.
ದಿನಗಳು ಉರುಳುತ್ತಲೇ ಇದೆ. ಕರಾವಳಿಯ ಪಾಲಿಗೆ ಈ ಕಹಿ ಘಟನೆ ಮರೆಯಲು ಮಾತ್ರ ಇನ್ನೂ ಸಾಧ್ಯವಾಗಿಲ್ಲ. ಬಹುಶಃ ಮುಂದಕ್ಕೂ ಸಾಧ್ಯವಾಗದೇನೋ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ