ಬಾಯನ್ನಷ್ಟೇ ಅಲ್ಲ ಈಗ ಜೇಬನ್ನೂ ಸುಡುತ್ತಿದೆ ಗುಟ್ಕಾ...
ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳು ಈಗ ಬಾಯನ್ನಷ್ಟೇ ಅಲ್ಲ ಜೇಬನ್ನೂ ಸುಡುತ್ತಿದೆ!ಸ್ಯಾಚೆಟ್ ಗಳಲ್ಲಿ ಲಭ್ಯವಾಗುವ ಈ ಉತ್ಪನ್ನಗಳನ್ನು ಗರಿಷ್ಟ ಮಾರಾಟ ಬೆಲೆಗಿಂತಲೂ ಅಧಿಕ ಬೆಲೆಯಲ್ಲಿ ಹಾಗೂ ಕೆಲವೊಂದು ಕಡೆಗಳಲ್ಲಿ ದುಪ್ಪಟ್ಟು ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಗುಟ್ಕಾ ತಂಬಾಕು ಪ್ರಿಯರು ದೂರಿದ್ದಾರೆ.
ಮಾ.1 ರಿಂದ ಅಡಿಕೆ ಹಾಗೂ ತಂಬಾಕು ಉತ್ಪನ್ನಗಳನ್ನು ಪ್ಲಾಸ್ಟಿಕ್ ಪ್ಯಾಕೆಟ್ ಗಳಲ್ಲಿ ಮಾರಾಟ ಮಾಡದಂತೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ಕೋರ್ಟ್ ಆದೇಶಕ್ಕೆ ತಲೆಬಾಗಿ ಈಗಾಗಲೇ ಕೆಲವೊಂದು ಕಂಪನಿಗಳು ತಂಬಾಕು ಹಾಗೂ ಗುಟ್ಕಾಗಳನ್ನು ಕಾಗದದ ಸ್ಯಾಚೆಟ್ ಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆದರೂ ಈ ಬೆಲೆ ಏರಿಕೆ ನಿಲ್ಲದಿರುವುದು ಮಾತ್ರ ಗ್ರಾಹಕರ ನಿದ್ದೆಗೆಡಿಸಿದೆ.
ಒಂದು ರೂ. ಮಾರಾಟ ದರವಿರುವ ಗುಟ್ಕಾ ಕಾಳಸಂತೆಯಲ್ಲಿ ಎರಡರಿಂದ ಮೂರು ರೂ. ವರೆಗೆ ಮಾರಾಟವಾಗುತ್ತಿದೆ. ಉಳಿದಂತೆ ಒಂದೂವರೆ ರೂ. ಎರಡು ರೂ ಮಾರಾಟ ದರದ ಗುಟ್ಕಾಗಳು ಮೂರರಿಂದ ಆರು ರೂ ಗಳ ವರೆಗೂ ಮಾರಾಟವಾಗುತ್ತಿದೆ. ಈ ಬೆಲೆ ಏರಿಕೆ ಹಿಂದೆ ಸಗಟು ಮಾರಾಟಗಾರರ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಸ್ಟಾಕ್ ಇದ್ದಾಗಿಯೂ ಮಾರುಕಟ್ಟೆಗೆ ಉತ್ಪನ್ನಗಳನ್ನು ಒದಗಿಸದೆ ಕೃತಕ ಅಭಾವ ಸೃಷ್ಟಿಸಿ ಈ ಮೂಲಕ ಲಾಭ ಪಡೆಯಲಾಗುತ್ತಿದೆ. ಇದರಿಂದ ನಮಗೂ ಗುಟ್ಕಾ ಪ್ರಿಯರಿಗೂ ನಷ್ಟ ಎನ್ನುತ್ತಾರೆ ಅಂಗಡಿ ಮಾಲಕರೋರ್ವರು.
ಆದರೆ ತಮ್ಮದೇ 'ಗುಟ್ಕ ಬ್ರ್ಯಾಂಡ್' ಗೆ ಒಗ್ಗಿಹೋಗಿರುವ ಗ್ರಾಹಕ 'ಬ್ರ್ಯಾಂಡ್ 'ಗಾಗಿ ಅದೆಷ್ಟೇ ಬೆಲೆ ತೆರಲೂ ಸಿದ್ದನಿರುತ್ತಾನೆ. ಈ ಮನಸ್ಥಿತಿಯನ್ನು ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಅವರು.
ಕಾಗದದಲ್ಲಿ ಗುಟ್ಕಾ!
ನ್ಯಾಯಾಲಯ ಆದೇಶದ ಹಿನ್ನಲೆಯಲ್ಲಿ ಕೆಲವೊಂದು ಕಂಪನಿಗಳು ಈಗಾಗಲೇ ಕಾಗದದ ಸ್ಯಾಚೆಟ್ ನಲ್ಲಿ ಗುಟ್ಕಾ ಉತ್ಪನ್ನಗಳನ್ನು ತಯಾರಿಸುತ್ತಿದೆಯಾದರೂ, ಪ್ಲಾಸ್ಟಿಕ್ ಸ್ಯಾಚೆಟ್ ಗಳಲ್ಲಿನ ಉತ್ಪನ್ನಗಳೂ ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಮಾರಾಟವಾಗುತ್ತಲೇ ಇದೆ. ಹೊಸತಾಗಿ ಬಂದ ಕಾಗದದ ಸ್ಯಾಚೆಟ್ ವ್ಯಾಪಾರಿಗಳಿಗೆ, ಗುಟ್ಕಾ ಪ್ರಿಯರಿಗೆ ಖುಷಿ ಕೊಟ್ಟಿಲ್ಲ. ಕಾಗದವಾದ್ದರಿಂದ ದಾಸ್ತಾನು ಕಷ್ಟ, ಜೇಬಿನಲ್ಲೂ ಇರಿಸಿಕೊಳ್ಳುವುದು ಇನ್ನೂ ಕಷ್ಟ, ಮಳೆಗಾಲದಲ್ಲಿ ಮಳೆ ನೀರು, ಬೇಸಗೆಯಲ್ಲಿ ಬೆವರು, ಒಟ್ಟು ಕಷ್ಟ...ಕಷ್ಟ...ಎನ್ನುವ ಚಿಂತೆ ಅವರದು.
ಆದರೆ ಆರೋಗ್ಯಕ್ಕೆ ಹಾನಿ ಎಸಗುವ ಗುಟ್ಕಾ ಜನಜಾಗೃತಿಯಿಂದಾಗಿ ಬೇಡಿಕೆ ಕಳೆದುಕೊಳ್ಳಬೇಕಾದ ಬದಲು ದುಪ್ಪಟ್ಟು ದರ ಹೇಳಿದರೂ ಮಾರಾಟವಾಗುತ್ತಿರುವುದು ಮಾತ್ರ ಚೋದ್ಯವೇ ಸರಿ!
aksharamaitri@gmail.com

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ