ಶನಿವಾರ, ಏಪ್ರಿಲ್ 16, 2011

ಸಮಸ್ಯೆಯೂ ಶಾಶ್ವತವಲ್ಲ ಎಂದವನ ಕುರಿತು...
ದೊಗಲೆ ಪ್ಯಾಂಟು, ಕಪ್ಪು ಮಾಸಲು ಬಣ್ಣದ ಕೋಟು, ಮುಖದ ಮೇಲೆ ಚೋಟುದ್ದ ಮೀಸೆ, ತಲೆಯಲ್ಲಿ ಹ್ಯಾಟು, ಕೈಯಲ್ಲೊಂದು ವಾಕಿಂಗ್ ಸ್ಟಿಕ್ಕು...
ಓಲಾಡುತ್ತಾ ಪಾದರಸದಂತೆ ಓಡಾಡುತ್ತಾ ಈ ಮನುಷ್ಯ ಮಾಡುವ ಅವಾಂತಾರಗಳನ್ನು ಕಂಡು ನಗದವರಿದ್ದಾರೆಯೇ?
ಜಗತ್ತಿನುದ್ದಕ್ಕೂ ಈತನನ್ನು ಪ್ರೀತಿಸುವವರಿದ್ದಾರೆ, ಆರಾಧಿಸುವವರಿದ್ದಾರೆ, ಮೆಚ್ಚಿಕೊಳ್ಳುವವರಿದ್ದಾರೆ, ಆತನನ್ನೇ ಆದರ್ಶ ಎಂದು ತಿಳಿದುಕೊಂಡವರಿದ್ದಾರೆ.  ಆತ ಎಲ್ಲರಿಗೂ ಇಷ್ಟ.!
ಆತನ ಹೆಸರು ಚಾರ್ಲಿ ಚಾಪ್ಲೀನ್!
ಮಾತಲ್ಲೇ ಮುಳುಗಿ ಹೋದ ಜಗತ್ತಿಲ್ಲಿ ಆತ ಮೌನದಿಂದಲೇ ಮಾತನಾಡಿದ ಮತ್ತು ಪರಿಣಾಮಕಾರಿಯಾಗಿಯೇ ಮಾತನಾಡಿದ. ಜನ ಆತನನ್ನು ನಟ ಎಂಬ ಒಂದೇ ಕಾರಣಕ್ಕೆ ಇಷ್ಟ ಪಡಲಿಲ್ಲ. ಬದಲಿಗೆ ಅದಕ್ಕೊಂದು ಕಾರಣವಿತ್ತು. ಚಾಪ್ಲೀನ್ ತನ್ನ ಚಿತ್ರದುದ್ದಕ್ಕೂ ಸಮಾಜದ ಅಂಕುಡೊಂಕುಗಳನ್ನು ತೋರಿಸುತ್ತಾ ಹೋದ. ಬದುಕಲ್ಲಿ ನೋವುಣ್ಣುತ್ತಲೇ ಎಲ್ಲರನ್ನೂ ನಗಿಸುತ್ತಾ ಹೋದ. ಸರ್ವಾಧಿಕಾರದ ಆತ ವಿರುದ್ಧ ಸಿಡಿದೇಳುತ್ತಿದ್ದ. ಮೂಲಭೂತವಾದಿ ಗುಣವನ್ನು ಖಂಡಿಸುತ್ತಿದ್ದ. ಬಡತನವನ್ನು ಅದೆಷ್ಟು ಶ್ರೀಮಂತಿಕೆಯಿಂದ ಅನುಭವಿಸಬಹುದು ಎಂಬುದನ್ನೂ ತೋರಿಸಿಕೊಡುತ್ತಿದ್ದ. ಅದಕ್ಕಾಗಿಯೇ ಎಲ್ಲರಿಗೂ ಇಷ್ಟವಾದ.
ಚಾಪ್ಲೀನ್ ಎಂಬ ಹಾಸ್ಯ ಚಕ್ರವರ್ತಿ ಹುಟ್ಟಿದ್ದು 1889 ಏಪ್ರಿಲ್ 16 ರಂದು. 
ಬಡತನದಲ್ಲೇ ಹುಟ್ಟಿ, ಬದುಕಿನುದ್ದಕ್ಕೂ ಏಳು ಬೀಳುಗಳನ್ನೇ ಕಂಡ ಈ ಮಾಂತ್ರಿಕ ನಟ ಕೇವಲ ನಟನೆಯಿಂದಷ್ಟೇ ಅಲ್ಲ ನಿರ್ಮಾಪಕ, ಸಂಗೀತ ನಿರ್ದೇಶಕ ನಾಗಿಯೂ ಹೆಸರು ಮಾಡಿದ್ದ. ಕಮ್ಯೂನಿಸ್ಟ್ ಸಿದ್ದಾಂತದಲ್ಲಿ ನಂಬಿಕೆಯಿರಿಸಿದ್ದ ಚಾಪ್ಲಿನ್ ಅದೇ ಕಾರಣಕ್ಕಾಗಿ ಅಮೇರಿಕಾ, ಇಂಗ್ಲೆಂಡ್ ನಿಂದಲೂ ಶಂಕೆಗೊಳಗಾಗಬೇಕಾಯಿತು.
ಆದರೂ ಅದೆನ್ನೆಲ್ಲ ಲೆಕ್ಕಿಸದ ಆತ 'ದಿಗ್ರೇಟ್ ಡಿಕ್ಟೇಟರ್' ಚಿತ್ರದಲ್ಲಿ ಹಿಟ್ಲರ್ ನನ್ನೇ ಅಣಕಿಸಿ ಸಡ್ಡುಹೊಡೆದಿದ್ದ.
ದಿ ಕಿಡ್(1920), ಗೋಲ್ಡ್ ರಷ್(1924), ದಿ ಸರ್ಕಸ್ (1928), ಸಿಟಿ ಲೈಟ್ಸ್(1931), ಮಾಡರ್ನ್ ಟೈಮ್ಸ್(1936) ದಿ ಗ್ರೇಟ್ ಡಿಕ್ಕೇಟರ್(1940) ಲಥಮ್ ಲೈಟ್ (952) ಚಾರ್ಲಿ ಬತ್ತಳಿಕೆಯಲ್ಲಿರುವ ಕೆಲವು ಪ್ರಮುಖ ಅತ್ಯುತ್ತಮ ಚಿತ್ರಗಳು.
ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ನಮ್ಮ ಸಮಸ್ಯೆಯೂ ಕೂಡಾ... ಎಂದು ನೊಂದವರ ಬದುಕಿಗೆ ಧೈರ್ಯ ತುಂಬುತ್ತಾ, ನಗುತ್ತಾ ನಗಿಸುತ್ತಲೇ ತನ್ನ ಅರ್ಥ ಪೂರ್ಣ ಬದುಕನ್ನು ಮುನ್ನಡೆಸಿದ ಚಾಪ್ಲೀನ್ 1977ರ ಡಿಸೆಂಬರ್ 25 ರಂದು ಸಿಡ್ಜರ್ಲೆಂಡ್ ನಲ್ಲಿ ಮರಳಿ ಬರಲಾರದ ಲೋಕಕ್ಕೆ ನಡೆದು ಬಿಟ್ಟ.
ಇಂದು ಆತನ ಜನ್ಮ ದಿನ.
aksharamaitri@gmail.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ