ಮಂಗಳವಾರ, ಏಪ್ರಿಲ್ 19, 2011


ಹೋರಾಟವಿಲ್ಲದೆ ಬದುಕಿಲ್ಲವೇ?

ಹೋರಾಟ
ಈ ಶಬ್ದ ಗೊತ್ತಿಲ್ಲದವ ಬಹುಷಃ ಇಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟರಮಟ್ಟಿಗೆ ಬಂದು ನಿಂತಿದೆ ದೇಶ.
ಇಲ್ಲಿ ನಿತ್ಯ ಹೋರಾಟಗಳಾಗುತ್ತಿದೆ, ಪ್ರತಿಭಟನೆಗಳಾಗುತ್ತಿದೆ, ಒತ್ತಾಯ, ಒತ್ತಡ, ಆಗ್ರಹಗಳು ಕೇಳಿಬರುತ್ತಿವೆ. ಯಾಕಾಗಿ? ಕೇವಲ ಮರ್ಯಾದೆ ನೆಮ್ಮದಿಯಿಂದ ಬದುಕಲಿಕ್ಕಾಗಿ!
ತಮ್ಮ ಹಕ್ಕುಗಳ ಕುರಿತಾದ ಹೋರಾಟದಲ್ಲಿ ಕರಾವಳಿ ಭಾಗದ ಜನ ಯಾವತ್ತೂ ಹಿಂದೆ ಬಿದ್ದಿಲ್ಲ. ಇದಕ್ಕೆ ಸವಾಲು ಎಂಬಂತಿರುವ 'ನೇತ್ರಾವತಿ ನದಿ ತಿರುವು ಯೋಜನೆ' ವಿರುದ್ಧ ಇನ್ನಷ್ಟು ಹೋರಾಟಕ್ಕೆ ಅಣಿಯಾಗಬೇಕಾದ ಅನಿವಾರ್ಯತೆ ಇದೀಗ ಎದುರಾಗಿದೆ.
ಪಶ್ಚಿಮಘಟ್ಟದ ಸಂಸೆಯಲ್ಲಿ ಹುಟ್ಟಿ ತನ್ನ ಪಾಡಿಗೆ ತಾನು ಹರಿದುಹೋಗುವ ನೇತ್ರಾವತಿ ಸಾವಿರಾರು ಮಂದಿ ಕೃಷಿಕರು, ಮೀನುಗಾರರು ಸೇರಿದಂತೆ ಜೀವವೈವಿಧ್ಯಗಳನ್ನು ಸಾಕಿ ಸಲಹುವ ಅಮ್ಮನೇ ಆಗಿದ್ದಾಳೆ. ಸುಮಾರು ಹತ್ತು ಲಕ್ಷ ಕೃಷಿಕರ ಸುಮಾರು 3.50 ಲಕ್ಷ ಎಕರೆ ಕೃಷಿ ಪ್ರದೇಶ ಅವಲಂಬಿಸಿರುವ ಈಕೆಯನ್ನು ಪೂರ್ವಾಭಿಮುಖವಾಗಿ ತಿರುಗಿಸಿ ಕಾಲುವೆಗಳ ಮೂಲಕ ಪೂರ್ವ ಹಾಗೂ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ನೀರೊದಗಿಸುವ ಯೋಜನೆಗೆ ಸರಕಾರ ಮುಂದಾಗಿರುವುದು ನಿಜಕ್ಕೂ ಕರಾವಳಿ ಭಾಗಕ್ಕೆ ಎಸಗುತ್ತಿರುವ ಘೋರ ಅನ್ಯಾಯ.
ನೇತ್ರಾವತಿ ಉಗಮ ಸ್ಥಳದಲ್ಲಿ ಮಳೆಗಾಲದಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಿಸಿ ಕಾಲುವೆಗಳ ಮೂಲಕ ಎರಡು ಹಂತಗಳಲ್ಲಿ ನೀರು ಸಾಗಿಸುವ ಈ ಯೋಜನೆಯಲ್ಲಿ ಮೊದಲ ಹಂತದಲ್ಲಿ 90.73 ಟಿ.ಎಂ.ಸಿ. ನೀರನ್ನು ಬಯಲು ಸೀಮೆಯ ಏಳು ಜಿಲ್ಲೆಗಳ ನಲುವತ್ತು ಬರಪೀಡಿತ ತಾಲೂಕುಗಳಿಗೆ ಸಾಗಿಸಲುದ್ದೇಶಿಸಲಾಗಿದೆ.
ಹಾಸನ, ಚಿಕ್ಕಮಗಳೂರು, ಮಂಡ್ಯ, ತುಮಕೂರು, ಬೆಂಗಳೂರು ನಗರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ, ಕನಕಪುರ, ರಾಮನಗರ, ಚೆನ್ನಪಟ್ಟಣಗಳಿಗೆ ನೇರವಾಗಿಯೂ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲೂಕುಗಳಿಗೆ ಪೈಪ್ ಮೂಲಕವೂ ಸಾಗಿಸಲ್ಪಡುವ ಈ ಯೋಜನೆಯಲ್ಲಿ 108 ಲಕ್ಷ ಜನರಿಗೆ 102 ಲಕ್ಷ ಜಾನುವಾರುಗಳಿಗೆ ಪ್ರಯೋಜನವಾಗಲಿದೆಯಾದರೂ, ಕರಾವಳಿ ಭಾಗದಲ್ಲಿ ಯಾವೆಲ್ಲಾ ದುರಂತಗಳು ನಡೆದಾವು ಅನ್ನುವುದು ಮಾತ್ರ ಯೋಜನೆ ಹಮ್ಮಿಕೊಂಡಿರುವವರ ಮುಂದಿದ್ದಂತಿಲ್ಲ ಎಂಬುದು ಸಾರ್ವತ್ರಿಕ ಅಭಿಪ್ರಾಯ.
ಈ ಯೋಜನೆಗಾಗಿ ಗಡಿಕಲ್ಲು ಗುಡ್ಡ, ಬಲ್ಲಾಳರಾಯನ ದುರ್ಗ, ಕುದುರೆಮುಖ, ಎಳನೀರು ಘಾಟಿ, ಬಂಡಾಜೆ, ಚಾರ್ಮಾಡಿ, ಎರಂಕಲ್ಲು, ಎಡಕುಮೇರಿ, ಬಿಸಿಲೆಘಾಟಿ, ಕುಮಾರ ಪರ್ವತ ಮೊದಲಾದೆಡೆಗಳಲ್ಲಿ ಕಾಮಗಾರಿ ನಡೆಸಬೇಕಿದೆ. ಇಲ್ಲಿ ಗಮನಿಸಬೇಕಾಗಿರುವ ಸಂಗತಿಯೆಂದರೆ ಇವೆಲ್ಲಾ ಸ್ಥಳಗಳು ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿದೆ. ವಿಶ್ವದ ಹದಿನೆಂಟು ಜೀವ ವೈವಿಧ್ಯ ಸಂರಕ್ಷಣಾ ಪ್ರದೇಶಗಳಲ್ಲಿ ಒಂದಾಗಿರುವ ಈ ಪಶ್ಚಿಮಘಟ್ಟ ಅತ್ಯಂತ ಸೂಕ್ಷ್ಮವಾಗಿದೆಯಲ್ಲದೆ ಮಳೆ ಮೋಡಗಳ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸುಮಾರು 4 ಸಾವಿರ ಅಡಿಗೂ ಎತ್ತರವಿರುವ ಈ ಘಟ್ಟ ಪ್ರದೇಶ ನೈರುತ್ಯ ಮಾರುತ ಹೊತ್ತು ತರುವ ಮಳೆ ಮೋಡ ಒಂದೇ ಬಾರಿಗೆ ಬಯಲು ಸೀಮೆಗೆ ನುಗ್ಗದಂತೆಯೂ ತಡೆಯುತ್ತದೆ. ಅಲ್ಲದೆ ಇಲ್ಲಿನ ಮಣ್ಣು, ಕಲ್ಲುಗಳ ಅಧ್ಯಯನ ಮಾಡದೆ ಕಾಮಗಾರಿ ನಡೆಸುವುದರಿಂದ ಮಹಾ ಅಧ್ವಾನ ಸಂಭವಿಸುವ ಸಾಧ್ಯತೆ ಖಂಡಿತವಾಗಿಯೂ ಇದೆ ಎನ್ನುತ್ತಾರೆ ಪರಿಸರ ತಜ್ಞರು.
ಅಷ್ಟೇ ಅಲ್ಲ, ಇಲ್ಲಿ ಕಾಮಗಾರಿ ನಡೆಸುವಾಗ ಅಗಾಧ ಪ್ರಮಾಣದಲ್ಲಿ ಕಾಡುಗಳು ನಾಶವಾಗಲಿದೆಯಲ್ಲದೆ ಯೋಜನಾ ಪ್ರದೇಶದಲ್ಲಿ ಬರುವ 5550 ಹೆಕ್ಟೇರ್ ದಟ್ಟ ಕಾಡು ನೀರಿನಲ್ಲಿ ಸಮಾಧಿಯಾಗಲಿದೆ. ಜೊತೆಗೆ ಸಾಕಷ್ಟು ವೀಸ್ತೀರ್ಣದ ಪರ್ವತ ಶ್ರೇಣಿಯ ಜಮೀನು ತೀವ್ರವಾಗಿ ಭೂಸವಕಳಿಗೆ ತುತ್ತಾಗಲಿದೆ ಎಂಬ ಅಭಿಪ್ರಾಯವಿದೆ. ಇದೆಲ್ಲ ಒಂದೆಡೆಯಾದರೆ ಕರಾವಳಿಯಲ್ಲಿ ನೀರಿನ ಹರಿವು ಕಡಿಮೆಯಾಗಲಿದೆಯಲ್ಲದೆ ಹಳ್ಳಗಳು ಬತ್ತಿ ಬಂಡಾಜೆ ಅರ್ಬಿ, ಎಳ್ನೀರ್ ಫಾಲ್ಸ್ ನಂತವುಗಳು ಸ್ತಬ್ಧವಾಗಲಿದೆ ಎಂಬ ಆತಂಕ ಎಲ್ಲೆಡೆ ಮೂಡಿದೆ. ನೇತ್ರಾವತಿಯನ್ನೇ ನಂಬಿರುವ ಮಂಗಳೂರಿನಂತಹ ನಗರಗಳು ನೀರಿಗಾಗಿ ಹಾಹಾಕಾರ ಪಡಬೇಕಾಗಿ ಬರಬಹುದು.
ಇದರಿಂದಾಗಿ ಸಹಜವಾಗಿಯೇ ಹವಾಮಾನ ವೈಪ್ಯರೀತ್ಯವಾಗುವುದಲ್ಲದೆ ಪ್ರಾಕೃತಿಕ ವಿಕೋಪಗಳು ಕಾಣಿಸಿಕೊಳ್ಳಲಿದೆ.
ಸಮುದ್ರದಲ್ಲೂ ಏರುಪೇರು
ನದಿ ನೀರು ಸಮುದ್ರ ಸೇರದೇ ಇದ್ದರೆ ಸಹಜವಾಗಿಯೇ ಸಮುದ್ರ ತಳದಲ್ಲಿ ಉಷ್ಣ ಮತ್ತು ಶೀತ ಪ್ರವಾಹ ಏರುಪೇರಾಗುವುದು. ಮಳೆ ತರಿಸುವ ಉಷ್ಣ, ಶೀತ ಪ್ರವಾಹಗಳೇ ಇಲ್ಲವಾದ ಮೇಲೆ, ಅವುಗಳಲ್ಲಿ ಏರುಪೇರಾದ ಮೇಲೆ ಇನ್ನೇನಿದೆ ಹೇಳಲು?
ಈ ಮಹತ್ವದ ಯೋಜನೆ ಕಾರ್ಯಗತಗೊಳಿಸಲು ಈಗಾಗಲೇ 15 ಸಾವಿರ ಕೋ.ರೂ. ಪ್ರಸ್ತಾವಿಸಲಾಗಿದೆ. ಮೇಲ್ನೋಟಕ್ಕೆ ಒಳಿತೆಂಬಂತೆ ತೋರಿದರೂ ಇದರಿಂದ ತೀಕ್ಷ್ಣ ಪರಿಣಾಮ ಎದುರಿಸಬೇಕಾದೀತು ಎಂಬ ಎಚ್ಚರಿಕೆ ಈಗಾಗಲೇ ಪರಿಸರ ತಜ್ಞರು ನೀಡಿದ್ದಾರೆ.
ಯೋಜನೆ ಅನುಷ್ಠಾನಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಇತ್ತ ಇದರ ವಿರುದ್ಧ ಹೋರಾಟಗಳೂ ನಡೆಯುತ್ತಿದೆ.
'ಪರರ ಚಿಂತೆ ನಮಗೇಕಯ್ಯಾ...' ಎಂಬ ಎಂದಿನ ಸ್ಟೈಲಲ್ಲಿ ನಾವಿದ್ದರೆ ಮಾತ್ರ ಕರಾವಳಿಯಲ್ಲಿ ಮುಂದೆ ನಡೆಯಲಿರುವ ಮಹಾ ದುರಂತವೊಂದಕ್ಕೆ ನಾವುಪ ಸಾಕ್ಷಿಯಾಗಬೇಕಾದೀತು ಎನ್ನುವುದು ಪರಿಸರ ಕಾಳಜಿಯಿರುವವರ ಎಚ್ಚರಿಕೆಯ ನುಡಿ.
aksharamaitri@gmail.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ