ನೂರಾರು ವರ್ಷಗಳ ಇತಿಹಾಸವಿರುವ, ಹಲವು ಅಧ್ವಾನ, ಅವಾಂತರ, ಸಂದರ್ಭಗಳಿಗೆ ಸಾಕ್ಷಿಯಾಗಿದ್ದ, ಬ್ರಿಟಿಷರ ಕಾಲದ ಐತಿಹಾಸಿಕ ಮಹತ್ವವಿರುವ ಪಾಣೆಮಂಗಳೂರು ಹಳೆ ಸೇತುವೆಗೆ ಇಂದು ಅನಾಥ ಭಾವ ಕಾಡುತ್ತಿದೆ.
ನೂತನ ಸೇತುವೆ ಲೋಕಾರ್ಪಣೆಗೊಂಡ ಬಳಿಕ ಉಪೇಕ್ಷೆಗೆ ಒಳಗಾಗಿದ್ದ ಈ ಸೇತುವೆಯ ರಕ್ಷಣೆಯ ಹೊಣೆ ಯಾರದ್ದು?
ಇದು ಸದ್ಯಕ್ಕೆ ಸಾರ್ವಜನಿಕರನ್ನು ಕಾಡುತ್ತಿರುವ ಪ್ರಶ್ನೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹೊಸ ಸೇತುವೆಯಿಂದ ಟೋಲ್ ರೆವೆನ್ಯೂಗಳಿಕೆಯಿದೆ. ಹಾಗಾಗಿ ಈ ಹಳೆಯ ಸೇತುವೆಯ ಉಸಾಬರಿಯೇ ಬೇಡ ಎಂಬ ತೀರ್ಮಾನಕ್ಕೆ ಬಂದು ಉಪೇಕ್ಷಿಸಲಾಗುತ್ತಿದೆಯೇ ಎಂಬ ಆತಂಕ ಸ್ಥಳೀಯರಿಗಿದೆ.
ಈ ಸೇತುವೆಯ ನಿರ್ವಹಣೆ, ರಕ್ಷಣೆ ಹೊಣೆಗಾರಿಕೆಯನ್ನು ಬಂಟ್ವಾಳ ಪುರಸಭೆಗೆ ಹಸ್ತಾಂತರಿಸಿದ್ದೇವೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಹೇಳಿಕೊಳ್ಳುತ್ತಿದೆ. ಇದನ್ನು ಪುರಸಭೆಯ ಮೂಲವೊಂದು ಧೃಢ ಪಡಿಸುತ್ತದೆ. ಆದರೆ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಖಚಿತವಾಗಿ ಏನನ್ನೂ ಹೇಳಲು ಬಯಸುವುದಿಲ್ಲ, ಇಲ್ಲಿ ಹಸ್ತಾಂತರವೆಂಬುದು ಅಧಿಕೃತ ಪ್ರಕ್ರಿಯೆಯಾಗಿ ಮೂಡಿಬಂದಿಲ್ಲ. ನಡೆದಿದ್ದರೂ ಅದೊಂದು ಡೀಮ್ಡ್ ಅಥವಾ ಕಾಗದ ಪತ್ರದ ಹಸ್ತಾಂತರ ಎನ್ನುತ್ತಾರೆ ಮುಖ್ಯಾಧಿಕಾರಿ ಅವರು. ಕೌನ್ಸಿಲ್ ನಲ್ಲಿ ಇದು ಪ್ರಸ್ತಾಪಕ್ಕೆ ಬಂದಿಲ್ಲ. ಕೌನ್ಸಿಲ್ ಇದಕ್ಕೆ ಒಪ್ಪಿಗೆ ನೀಡಿಲ್ಲ ಎನ್ನುವ ಅವರು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಚರ್ಚೆಗೆ ಇನ್ನಷ್ಟು ಕುತೂಹಲಕಾರಿ ತಿರುವು ನೀಡಿದ್ದಾರೆ.
ಪುರಸಭೆ ಅಧ್ಯಕ್ಷರು ಹೇಳುವುದೆಂದರೆ, ಹಳೇ ಸೇತುವೆ ನಿರ್ವಹಣೆ ಜವಾಬ್ದಾರಿ ಹೊರಲು ನಮಗೆ ಸಾಧ್ಯವಿಲ್ಲ, ಅದರ ಖರ್ಚುವೆಚ್ಚದ ಮಾತು ಇನ್ನೆಲ್ಲಿಂದ?
ಇಲ್ಲಿ ತಿಳಿದು ಬರುವುದೆಂದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಸ್ತಾಂತರ ಪ್ರಕ್ರಿಯೆ ನಡೆಸಿ ಕೈತೊಳೆದುಕೊಂಡಿದೆ. ಅದರ ಪ್ರಕಾರ ಸರಕಾರದ ಆದೇಶ ದನ್ವಯ 2009 ಡಿಸೆಂಬರ್ 7ರಂದು ಬಂಟ್ವಾಳ ಪುರಸಭೆಗೆ ಹಸ್ತಾಂತರ ಪತ್ರ ರವಾನೆಯಾಗಿದೆ. ಅಲ್ಲಿಗೆ ಸೇತುವೆ ಉಸ್ತುವಾರಿ ಸ್ಥಳೀಯ ಆಡಳಿತದ ಕೈ ಸೇರಿದಂತಾಗಿದೆ. ಆದರೆ, ನಿರ್ವಹಣೆ ಮಾಡಲೂ ಸಾಧ್ಯವಾಗದ, ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಸ್ಥಳೀಯಾಡಳಿತ ಇದ್ದಂತಿದೆ.
ಇದೀಗ ಬ್ರಿಟಿಷರ ಕಾಲದ, ಐತಿಹಾಸಿಕ ಮಹತ್ವ ಹೊಂದಿರುವ ಈ ಸೊತ್ತಿನ ರಕ್ಷಣಾ ಕಾರ್ಯದಲ್ಲಿ ಆಸಕ್ತಿ ಹೊಂದಿರುವ ಮಂದಿ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಕೆಯಾಗಿದ್ದರೂ, ಪರಿಣಾಮ ಮಾತ್ರ ಶೂನ್ಯ ಎಂಬ ನೋವು ಅವರಿಗಿದೆ.
ಈ ಸೇತುವೆಯ ಅಮೂಲ್ಯ ಸೊತ್ತುಗಳು ಲೂಟಿಕೋರರ ಪಾಲಾಗುತ್ತಿರುವುದನ್ನು ನಾವು ಈಗಾಗಲೇ ಕೇಳಿದ್ದೇವೆ. ಸಂಬಂಧ ಪಟ್ಟವರು ಇದನ್ನು ನೋಡಿಯಾದರೂ ಎಚ್ಚೆತ್ತುಕೊಳ್ಳದಿರುವುದು ನಿಜಕ್ಕೂ ದುರಂತ.
ಬಂದರು ನಗರ ಮಂಗಳೂರು ಮತ್ತು ಬಂಟ್ವಾಳದ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಈ ಸೇತುವೆ ಪ್ರಾಚ್ಯವಸ್ತು ಇಲಾಖೆಗಾದರೂ ಹಸ್ತಾಂತರ ಮಾಡಬಹುದಲ್ಲ ಎಂದು ಪ್ರಶ್ನಿಸುತ್ತಿದ್ದಾರೆ ಸಾರ್ವಜನಿಕರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ