ಬುಧವಾರ, ಜುಲೈ 13, 2011
ಹೆಚ್ಚಲಿದೆಯೇ ಪೋಯಿ ರೈಟ್... ರೈಟ್... ರೇಟ್?
ಡೀಸೆಲ್ ಬೆಲೆ ಏರಿಕೆ ಬೆನ್ನಿಗೇ, ಕೆಎಸ್ಆರ್ ಟಿಸಿ ತನ್ನ ಪ್ರಯಾಣದರ ಏರಿಕೆ ಮಾಡಿದೆ.
ಇದು ನಿರೀಕ್ಷಿತವೇ! ಆರಂಭದಲ್ಲಿ ಪ್ರಯಾಣಿಕರು ಒಂದಿಷ್ಟು ತಮ್ಮೊಳಗೇ ಗೊಣಗಿಕೊಂಡು ಹೆಚ್ಚುವರಿ ದರ ತೆತ್ತು ಪ್ರಯಾಣಸಲು ಆರಂಭಿಸಿದ್ದರು. ಆಗ ಹಿಡಿಶಾಪಗಳು ಸರಕಾರಕ್ಕೂ, ಬಸ್ಸಿನವರಿಗೂ ಬಿದ್ದಿದ್ದವು. ಆದರೆ ಅದು ಈಗೆಲ್ಲ ಸರಿಯಾಗಿದೆ. ಜನ ಹೊಸದರಕ್ಕೆ ಒಗ್ಗಿಕೊಂಡಿದ್ದಾರೆ. ಎಷ್ಟಾದರೂ ಕ್ಷಮಯಾಧರಿತ್ರಿಯ ಸುಪುತ್ರರಲ್ಲವೆ!
ಇದೀಗ ಗಾಯದ ಮೇಲೆ ಬರೆ ಎನ್ನುವಂತೆ ದರ ಏರಿಕೆ ಮಾಡುವ ಸರದಿ ಖಾಸಗಿ ಬಸ್ ಗಳದ್ದು!
ಮೊದಲಿನಿಂದಲೂ ಕರಾವಳಿ ಜಿಲ್ಲೆಗಳಲ್ಲಿ ಏನಿದ್ದರೂ ಖಾಸಗಿ ಬಸ್ ಗಳದ್ದೇ ದರ್ಬಾರು. ಶಾರದಾ ಬಂತಾ? ಕೃಷ್ಣ ಎಷ್ಟೊತ್ತಿಗೆ? ಶಂಕರವಿಠಲ ನಿನ್ನೆ ಲೇಟಂತೆ! ಸುಬ್ರಹ್ಮಣ್ಯ ಇಲ್ಲಂತೆ ಮಾರಾಯರೆ.... ಹೀಗೆ ತನ್ನ ಬಂಧುಗಳ ಹೆಸರೋ ಎಂಬಂತೆ ಇಲ್ಲಿ ಬಸ್ ಗಳ ಹೆಸರು ಮಾತಿನ ನಡುವೆ ಹರಿದಾಡುತ್ತದೆ.
ಮುದ್ದು ಮುದ್ದಾದ ಹೆಸರಿನೊಂದಿಗೆ ಅಷ್ಟೇ ಮುದ್ದಾದ ಬಸ್ಸುಗಳು ಇಲ್ಲಿನ ಸ್ಪೆಷಾಲಿಟಿ.
ಇದೇ ಬಸ್ಸಿನವರೊಂದಿಗೆ ಪದೇ ಪದೇ ಜಗಳ ಕಿತ್ತಾಟಗಳು ನಡೆಯುತ್ತವಾದರೂ, ಮತ್ತೆ ಕೆಲವೇ ಹೊತ್ತಿಲ್ಲಿ ಎಲ್ಲರೂ ರಾಜಿಯಾಗಿ ಡೋರ್ ಮೇಲೆ ನಿಂತು ರೈಟ್..ರೈಟ್..ಪೋಯಿ!
ಸರಕಾರಿ ಬಸ್ ಗಳಿಗೆ ಹಾಕುವ ಡೀಸೇಲನ್ನೇ ಇವರೂ ಹಾಕುತ್ತಿರಾದ್ದರಿಂದ ದರ ಹೆಚ್ಚಳಕ್ಕೆ ಮನವಿ ಮಾಡಿಕೊಂಡಿರುವ ಖಾಸಗಿಯವರ ಕ್ರವೂ ಒಪ್ಪುವಂತದ್ದೇ.
'ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿರುವ ನಮ್ಮ ಖಾಸಗಿ ಬಸ್ ಗಳು ನೀಡುವ ಸೌಲಭ್ಯ ರಾಜ್ಯದ ಬೇರೆಲ್ಲೂ ಕಾಣಲು ಸಾಧ್ಯವೇ ಇಲ್ಲ.
ನಾವು ಕಾರ್ಮಿಕ ಇಲಾಖೆ ನಿಗದಿಪಡಿಸಿದಂತೆ ಬಸ್ ಸಿಬ್ಬಂದಿಗಳಿಗೆ ವೇತನ ನೀಡುತ್ತೇವೆ. ಭವಿಷ್ಯನಿಧಿ ಸೌಲಭ್ಯವೂ ಇದೆ. ಅಲ್ಲದೆ ಜನ ಸಂಚಾರ ಇರುವೆಡೆ ರಾತ್ರಿ ಹನ್ನೊಂದು ಗಂಟೆಯವರೆಗೂ ಬಸ್ ಸೇವೆ ನೀಡುತ್ತೇವೆ. ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಈಗ 2,750 ಬಸ್ ಗಳಿವೆ, ಒಂದು ಬಸ್ ಗೆ ಚಾಲಕ, ನಿರ್ವಾಹಕ,ಕ್ಲೀನರ್ ಬದಲಿ ಸಿಬ್ಬಂದಿ ಎಂದು ಸುಮಾರು 15ಸಾವಿರ ಮಂದಿಗೆ ಉದ್ಯೋಗ ಇದರಿಂದ ದೊರಕಿದೆ' ಎನ್ನುತ್ತಾರೆ ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದವರು.
ಈಗ ಇರುವ ಕನಿಷ್ಟ ಪ್ರಯಾಣ ದರವನ್ನು 6 ರೂ.ಗಳಿಗೆ ಏರಿಸಬೇಕು ಎನ್ನುವುದು ಅವರ ಈಗಿನ ಒತ್ತಾಯ. ಡೀಸೇಲ್ ಬೆಲೆ ಏರಿಕೆಯಾದ ತಕ್ಷಣ ಕೆಎಸ್ ಆರ್ ಟಿಸಿ ದರ ಏರಿಕೆ ಮಾಡುತ್ತದೆ. ಆದರೆ ಖಾಸಗಿ ಬಸ್ ದರ ಏರಿಕೆ ಮಾಡಬೇಕಾದರೆ ಪ್ರಾಧಿಕಾರದ ಸಭೆ ನಡೆಯಬೇಕು. ಇದು ತಾರತಮ್ಯವಲ್ಲವೇ? ಎಂಬ ಪ್ರಶ್ನೆ ಅವರದು.
ಈ ಬಗ್ಗೆ ನಾಡಿದ್ದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾರಸ್ತೆ ಸಾರಿಗೆ ಪ್ರಾಧಿಕಾರದ ಸಭೆ ನಡೆಯಲಿದೆ. ಒಕ್ಕೂಟ ಮುಂದಿಟ್ಟಿರುವ ಬೇಡಿಕೆ ಇಲ್ಲಿ ಪರಿಶೀಲಿಸುವ ಸಾಧ್ಯತೆ ಇದೆ. ಅದೇನೇ ಇದ್ದರೂ ದರ ಏರಿಕೆಯಾಗುವುದಂತೂ ಖಚಿತ ಅನ್ನುವುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ ಎಷ್ಟು ಪ್ರಮಾಣದಲ್ಲಿ? ಗೊತ್ತಿಲ್ಲ.
ಇದೆಲ್ಲದರ ಒಟ್ಟು ಪರಿಣಾಮ ಮಾತ್ರ ಜನಸಾಮಾನ್ಯನ ಮೇಲೆ ಅನ್ನುವುದು ದುರಂತ ಸತ್ಯ. ಯಾಕೆಂದರೆ ತೈಲ ಬೆಲೆಯೊಂದು ಏರಿಕೆಯಾದರೆ ಸಾಕು, ಮತ್ತೆಲ್ಲವೂ ತನ್ನಿಂತಾನೇ ಏರಿಕೆ ಕಾಣುತ್ತದೆ. ತೈಲದ ಮೇಲೆ ಏರಿಕೆಯಾದ ಪೈಸೆಗಳಿಗೂ ಕಡಿಮೆ ಬೆಲೆ ತಳಮಟ್ಟದಲ್ಲಿರುವ ಜನಸಾಮಾನ್ಯನ ಜೇಬಿಗೆ ನೂರು ರೂಪಾಯಿಯಷ್ಟಾಗಿ ಹೊರೆಯಾಗಿ ಬಿಡುತ್ತಿದೆ.
ಇದರಿಂದಾಗಿ ಕನಿಷ್ಟ ಸಂಬಳದಲ್ಲಿ, ದಿನಗೂಲಿಯಲ್ಲಿ ಬದುಕುವ ಮಂದಿಯ ಪಾಡು ನಾಯಿಪಾಡಾಗುತ್ತದೆ.
ಅದನ್ನು ಗಮನದಲ್ಲಿಟ್ಟುಕೊಂಡಾದರೂ ಸರಕಾರ ತೈಲಬೆಲೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬಾರದೆ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ