ಭಾನುವಾರ, ಜೂನ್ 19, 2011

ಮಂಗಳೂರಿನಲ್ಲಿ ಪುಟ್ಟಕ್ಕನ ಹೈವೇ...!


ಮಂಗಳೂರಿನ ಪತ್ರಕರ್ತರ ಅಧ್ಯಯನ ಕೇಂದ್ರವು ಶನಿವಾರ 'ಪುಟ್ಟಕ್ಕನ ಹೈವೇ' ಯನ್ನು ನಗರಕ್ಕೆ ಕರೆ ತಂದಿತ್ತು.
ಅಷ್ಟೇ ಅಲ್ಲ 'ಹೈವೇ' ಕುರಿತು ಮಾತನಾಡಲು ಅಲ್ಲಿ ಚಿತ್ರದ ನಿರ್ದೇಶಕ ಬಿ.ಸುರೇಶ ಖುದ್ದಾಗಿ ಉಪಸ್ಥಿತರಿರುವ ಏರ್ಪಾಟು ಮಾಡಿತ್ತು.
ನಗರದ ಮಂಗಳೂರು ಬಿಸಿನೆಸ್ ಸ್ಕೂಲ್ ಸಭಾಂಗಣದಲ್ಲಿ ಅಧ್ಯಯನ ಕೇಂದ್ರ ಏರ್ಪಡಿಸಿದ್ದ ಈ ಚಿತ್ರದ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಚಿತ್ರದ ಕುರಿತು ವಿಸ್ತೃತ ಚರ್ಚೆ ನಡೆಯಿತು. ಉಪಸ್ಥಿತರಿದ್ದ ಪತ್ರಕರ್ತರ, ಸಾಹಿತಿಗಳ, ಚಿಂತಕರ, ಪ್ರಗತಿಪರ ಹೋರಾಟಗಾರರ ಹಲವು ಪ್ರಶ್ನೆಗಳಿಗೆ ಬಿ.ಸುರೇಶ ನಗುನಗುತ್ತಲೇ ಉತ್ತರಿಸಿದರು.
 ಬಳಿಕ ಸುರೇಶ ಹೇಳಿದ್ದಿಷ್ಟು..
ಈ ಚಿತ್ರದ ಕಥೆಯನ್ನು 13 ಬಾರಿ ತಿದ್ದಿ ಬರೆದಿದ್ದೇನೆ. 'ತಾರೆ ಜಮೀನ್ ಪರ್', 'ಥ್ರೀ- ಈಡಿಯಟ್ಸ್ ' ಚಿತ್ರಗಳಂತೆ ವೈಭವೀಕರಣ ಮಾಡಿದ್ದರೆ ಹೆಚ್ಚು ಲಾಭ ಗಳಿಸಬಹುದಿತ್ತು. ಆದರೆ ಲಾಭದ ಉದ್ದೇಶ ಇಲ್ಲದ ಕಾರಣ ಹಾಗೂ ಹೊಸ ಮಾದರಿಯ ಚಿತ್ರವೊಂದರ ಸೃಷ್ಟಿ ಮಾಡುವ ಉಮೇದಿನಿಂದ ಈ ಚಿತ್ರ ರೂಪುಗೊಂಡಿದೆ. ಚಿತ್ರದ ಕುರಿತಾಗಲೀ ಅದರಲ್ಲಿನ ನಟ-ನಟಿಯರ ಕುರಿತಾಗಲೀ ಹೆಚ್ಚಿನ ಪ್ರಚಾರ ನೀಡದೆಯೂ ಚಿತ್ರಕ್ಕೆ ಖರ್ಚು ಮಾಡಿದ ಒಟ್ಟು 1.10ಕೋಟಿ ರೂ. ಜೊತೆಯಲ್ಲಿ ಒಂದಿಷ್ಟು ಲಾಭ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ. ಅಲ್ಲದೆ, ಉತ್ತಮ ಚಿತ್ರವೊಂದನ್ನು ನೀಡಿದ್ದೇನೆ ಎಂಬ ತೃಪ್ತಿಯೂ ನನಗಿದೆ.
ಆರೋಪ-ಪ್ರತಿಕ್ರಿಯೆ!


'ಪುಟ್ಟಕ್ಕನ ಹೈವೇ' ವೀಕ್ಷಿಸಿದ ಜನರಲ್ಲಿ ಹಲವು ಪ್ರಶ್ನೆಗಳಿದ್ದವು. ಅವೆಲ್ಲದಕ್ಕೂ ಸುರೇಶ ಸಮರ್ಪಕ ಉತ್ತರ ನೀಡಿ ಗೊಂದಲ ನಿವಾರಿಸಿದರು.
ಈ ವೇಳೆ ಚಿತ್ರದಲ್ಲಿ ಹೋರಾಟದ ಕೆಚ್ಚು ಅದುಮಿ ಬರೀ ಹತಾಶೆಯನ್ನಷ್ಟೇ ವೈಭವೀಕರಿಸಲಾಗಿದೆ... ಎಂಬ ಆರೋಪವೂ ಕೇಳಿ ಬಂತು. ಇದಕ್ಕೆ ಉತ್ತರಿಸಿದ ಸುರೇಶ, ಹೋರಾಟಕ್ಕೆ ಈ ಚಿತ್ರದಲ್ಲಿ ಅಂತ್ಯ ಹಾಡಲಿಲ್ಲ. ಹೋರಾಟಕ್ಕೆ ಇನ್ನೂ ಅನೇಕ ದಾರಿಗಳಿವೆ ಎಂಬುದನ್ನು ಪ್ರೇಕ್ಷಕನಿಗೆ ಮನದಟ್ಟು ಮಾಡಲು ಯತ್ನಿಸಿದ್ದೇವೆ ಎಂದರು.
ಪುಟ್ಟಕ್ಕನ ಹೈವೇ...

ಹೆದ್ದಾರಿ ನಿರ್ಮಾಣದಿಂದ ಸಾವಿರಾರು ಮಂದಿ ಸಣ್ಣ, ದೊಡ್ಡ ರೈತರು ಜಮೀನು ಕಳೆದುಕೊಳ್ಳುವುದು, ಯೋಜನೆ ಜಾರಿಗೊಳಿಸಲು ಶತಾಯಗತಾಯ ಯತ್ನಿಸುವ ಸರಕಾರ ಜನರ ಹಾದಿ ತಪ್ಪಿಸುವುದು. ಈ ನಡುವೆ ಕೆಲವು ಬಂಡವಾಳ ಶಾಹಿಗಳ ನಿಲುವು, ಶ್ರೀಮಂತ ಭೂಮಾಲಿಕರ ಪ್ರಭಾವ, ಭೂಮಿ ಉಳಿಸಿಕೊಳ್ಳಲು ಬಡಪಾಯಿಗಳಿಗೆ ಎದುರಾಗುವ ಕಷ್ಟಗಳ ಸರಣಿ, ಹೋರಾಟದ ಮುಂಚೂಣಿಯಲ್ಲಿರುವವರೇ ಆಸೆ, ಆಮಿಷಗಳಿಗೆ ಬಲಿಯಾಗುವ ಸಂಗತಿಗಳನ್ನು 'ಪುಟ್ಟಕ್ಕನ ಹೈವೇ' ಮೂಲಕ ಮನೋಜ್ಞವಾಗಿ ಬಿಂಬಿಸುವಲ್ಲಿ ಬಿ.ಸುರೇಶ ಯಶಸ್ವಿಯಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ