ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ವಾಪಸ್ ತರಬೇಕೆಂಬ ಆಗ್ರಹಕ್ಕೆ ತನ್ನ ದನಿಗೂಡಿಸಿದ್ದ ಶ್ರೀಸಾಮಾನ್ಯ ಮೊನ್ನೆಯಷ್ಟೇ ತೆರೆದುಕೊಂಡ ಸತ್ಯಸಾಯಿಬಾಬಾರ ತಿಜೋರಿ ಕಂಡು ಬೆಚ್ಚಿಬಿದ್ದಿದ್ದಾನೆ!
ಇಲ್ಲಿ ಸಿಕ್ಕ ಸುಮಾರು 98 ಕೆ.ಜಿ. ಚಿನ್ನ, 307 ಕೆ.ಜಿ. ಬೆಳ್ಳಿ, 11 ಕೋಟಿ 56 ಲಕ್ಷದ 47 ಸಾವಿರ ರೂ. ನಗದು ಇಷ್ಟಕ್ಕೇ ಮಾತ್ರ ಸದ್ಯ ಅಧಿಕೃತವಾದ ಲೆಕ್ಕ ದೊರೆತಿದೆ. ಇನ್ನೂ ಇಷ್ಟೇ ಇರಬಹುದೆಂಬ ಶಂಕೆ ಸರಕಾರಕ್ಕಿದೆ.
ಸಾಯಿ ತಿಜೋರಿಯಲ್ಲಿದ್ದ ಸಂಪತ್ತನ್ನು ಹಾಕಲು ಸುಮಾರು 36 ತಾಸುಗಳೇ ಬೇಕಾದವು ಎಂದರೆ ಬೆಚ್ಚಿ ಬೀಳದೆ ಇರುವುದಾದರೂ ಹೇಗೆ?
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಪಾರ ಪ್ರಮಾಣದ ಸಂಪತ್ತು ಕೇವಲ ಸ್ವಿಸ್ ಬ್ಯಾಂಕ್ ಗಳಷ್ಟೇ ಇಲ್ಲ, ನಮ್ಮ ಸುತ್ತಮುತ್ತಲೂ ಇದೆ ಎಂಬುದನ್ನು.
ಇಂದು ನಮ್ಮ ನಡುವಲ್ಲಿಯೇ ಇರುವ ಸಾಧು, ಸಂತರಂತೆ ಮುಖವಾಡ ಹಚ್ಚಿಕೊಂಡ ಅನೇಕರು ಖುದ್ದು ತಾವೇ ಒಂದೊಂದು ಸ್ವಿಸ್ ಬ್ಯಾಂಕ್ ನ ಅಕೌಂಟ್ ನಂತಾಗಿದ್ದಾರೆ.!
ದೇಶದ ನಮ್ಮ ಪಾಡು ನೋಡಿ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಉರುಳಿಹೋದರೂ, ಬಡತನ ತೊಲಗಿಲ್ಲ. ಸಂಪೂರ್ಣ ಸಾಕ್ಷರತೆ ಆಗಿಲ್ಲ. ಪ್ರತೀ ವ್ಯಕ್ತಿಗೂ ಸೂಕ್ತ ಉದ್ಯೋಗ ದೊರಕುತ್ತಿಲ್ಲ. ಮೂಲಭೂತ ಸೌಕರ್ಯಗಳಿಲ್ಲ. ಮೇಲು-ಕೀಳು ಅಳಿದಿಲ್ಲ. ಜಾತಿಪದ್ಧತಿ ದೂರಾಗಿಲ್ಲ. ದಿನನಿತ್ಯ ಹಸಿವಿನಿಂದ, ಅನಾರೋಗ್ಯದಿಂದ ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸಾಯುತ್ತಿದ್ದಾರೆ...
ಕನಿಷ್ಟ ಅದಕ್ಕೊಂದು ಕಣ್ಣೀರು ಹರಿಸುವ ಜನನಾಯಕರೂ ನಮ್ಮ ಕಣ್ಣಮುಂದೆ ಕಾಣುತ್ತಿಲ್ಲ. ಇದಕ್ಕೆ ಕಾರಣ ಯಾರು?
ಸತ್ಯಸಾಯಿಬಾಬಾ ಒಂದರ್ಥದಲ್ಲಿ ನಿಜಕ್ಕೂ ಪವಾಡ ಪುರುಷರೇ.
ಶೂನ್ಯದಿಂದ ಬಂಗಾರದ ಉಂಗುರ ಸೃಷ್ಟಿ(!)ಸುತ್ತಿದ್ದ ಬಾಬಾ ಸ್ವತಃ ತಾನೂ ಕೂಡಾ ಶೂನ್ಯದಿಂದಲೇ ಬಂದವರಾಗಿದ್ದರು. ಆದರೆ ಬದುಕಿನ ಕೊನೆಯ ಹಂತದಲ್ಲಿ ಅದೆಷ್ಟು ಸಂಪತ್ತು ಕ್ರೋಢೀಕರಿಸಿದ್ದರು ಎನ್ನುವುದನ್ನು ಮೊನ್ನೆ ಮೊನ್ನೆ ತೆರೆದುಕೊಂಡ ತಿಜೋರಿ ಬಹಿರಂಗಗೊಳಿಸಿದೆ.
ಆದರೆ ಬಾಬಾ ಇತರರಂತೆ ತಾನಷ್ಟೇ ದುಡ್ಡು ಕೂಡಿ ಹಾಕಿಕೊಳ್ಳಲಿಲ್ಲ ಎನ್ನುವುದು ಗಮನಾರ್ಹ. ಅವರು ತನ್ನ ಸಂಪತ್ತಿನಲ್ಲಿ ಕೆಲವು ಅಂಶಗಳಾದರೂ ಸಮಾಜಕ್ಕೆ ಉಪಕಾರವಾಗುವ ಕೆಲಸಕ್ಕೆ ಬಳಸಿದ್ದರು. ಆದರೆ ಇವಿಷ್ಟನ್ನೂ ಬಳಸಿಕೊಂಡಿದ್ದರೆ ನಿಜವಾದ ದೇವರಾಗುತ್ತಿದ್ದರು! ಆದರೆ ಆ ಕೆಲಸವನ್ನು ಅವರು ಮಾಡಿಲ್ಲ.
ದೇಶದಲ್ಲಿರುವ ಅದೆಷ್ಟು ಇಂತಹಾ ಬಾಬಾಗಳು, ಸನ್ಯಾಸಿಗಳು, ಸ್ವಾಮೀಜಿ ಎನ್ನಿಸಿಕೊಳ್ಳುವರು ಇಂತಹಾ ಕಾರ್ಯ ಮಾಡಿದ್ದಾರೆ? ಬೆರಳೆಣಿಕೆಗೆ ಬಿಟ್ಟರೆ ಹೆಚ್ಚಿನ ಲೆಕ್ಕ ಸಿಕ್ಕಲಾರದು.
ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಎಲ್ಲಾ ತ್ಯಾಗ ಮಾಡಿ ಸಂತನೆನ್ನಿಸಿಕೊಳ್ಳುವ ಮಂದಿ ಕೂಡಿಡುವ ಸಂಪತ್ತು ಮುಂದೆ ಏನಾಗುತ್ತದೆ ಎನ್ನುವುದು. ಉತ್ತರಕ್ಕಾಗಿ ಸತ್ಯಸಾಯಿ ಬಾಬಾ ಪ್ರಕರಣ ನಮ್ಮ ಕಣ್ಣಮುಂದೆಯೇ ಇದೆ!
ಸಾಯಿಬಾಬಾ ಅದೆಷ್ಟು ಕಷ್ಟಪಟ್ಟರೋ... ಈ ಮಟ್ಟಿನ ಸಂಪತ್ತು ಕೂಡಿಡಲು. ಆದರೆ ಇಂದು ಅದೆಲ್ಲಾ ಕಂಡವರ ಪಾಲಾಗುತ್ತಿದೆ.
ಕೇವಲ ಸ್ವಿಸ್ ಬ್ಯಾಂಕ್ ಗಳಿಂದಷ್ಟೇ ಅಲ್ಲ. ಇಂತಹಾ ಕಡೆಗಳಿಂದಲೂ ಹಣ ವಾಪಸ್ ಸರಕಾರದ ಬೊಕ್ಕಸ ಸೇರಿಸುವ ಕೆಲಸವಾಗಬೇಕಿದೆ. ಮನಸ್ಸು ಮಾಡಿದರೆ ಸರಕಾರಕ್ಕೆ ಇದೇನೂ ಕಷ್ಟದ ವಿಚಾರವಲ್ಲ. ಎಲ್ಲೆಲ್ಲಿ ಅಕ್ರಮ ಆಸ್ತಿಪಾಸ್ತಿಗಳು ಜಮೆಗೊಂಡಿದೆಯೋ ಅದೆಲ್ಲವೂ ಹೊರಬರುವಂತೆ ಸರಕಾರ ನೋಡಿಕೊಳ್ಳಬೇಕಿದೆ. ಯಾಕೆಂದರೆ ಸರಕಾರದ ಬೊಕ್ಕಸ ತುಂಬಿ ತುಳುಕಿದಾಗಲಷ್ಟೇ ಜನಸಾಮಾನ್ಯರು ನೆಮ್ಮದಿಯ ಬದುಕು ಕಾಣಬಹುದು. ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ... ಸಮಸ್ಯೆ ಇಲ್ಲೂ ಇದೆ!
ದುರಂತವೆಂದರೆ ಇಂದು ಸರಕಾರವನ್ನು ಚಲಾಯಿಸುವವರೇ ದಿನಕ್ಕೊಂದು ಅಪವಾದಕ್ಕೆ ತುತ್ತಾಗುತ್ತಿದ್ದಾರೆ. ಬಹುತೇಕ ಎಲ್ಲ ರಾಜಕಾರಣಿಗಳ ಮೇಲೂ ಕೋಟಿಗಟ್ಟಲೆ ಭ್ರಷ್ಟಾಚಾರ ನಡೆಸಿದ ದೂರುಗಳಿವೆ. ಹಾಗಾದರೆ ಇವರೇ ನಡೆಸುವ ಸರಕಾರದ ಬೊಕ್ಕಸ ತುಂಬಿದರೆ ಪ್ರಯೋಜನವೇನು?
ಈ ನಡುವೆ ಸಮಾಧಾನ ತರುವ ಸಂಗತಿಯೆಂದರೆ ಭ್ರಷ್ಟಾಚಾರಿ ಬೆಕ್ಕುಗಳಿಗೆ ಲೋಕಪಾಲ ಹೆಸರಿನ ಘಂಟೆಯೊಂದು ರೆಡಿಯಾಗುತ್ತಿದೆ ಎನ್ನುವುದು. ಇನ್ನಷ್ಟು ಖುಷಿ ಎಂದರೆ ಕಥೆಯಲ್ಲಿರುವಂತೆ ಇಲ್ಲಿ ಘಂಟೆ ಕಟ್ಟಲು ಹೊರಟಿರುವವರು ಮಾತ್ರ ಇಲಿಗಳಲ್ಲ....
ಅವರು ಹುಲಿಗಳು!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ