ಶನಿವಾರ, ಜೂನ್ 18, 2011

ಕ್ಯಾಂಟೀನ್ ಜೀವನ...

pic: srikanth
ಕಲಿತ ವಿದ್ಯೆಗೆ ತಕ್ಕ ಉದ್ಯೋಗ ಸಿಕ್ಕಿಲ್ಲ ಎಂದು ಕೊರಗುವ ಮಂದಿಗೆ ಇಲ್ಲೊಂದು ದಂಪತಿ ಮಾದರಿಯಾಗಿದ್ದಾರೆ.
ಪತಿ ಕಾನೂನು ಪದವೀಧರ, ಪತ್ನಿ ಬಿ.ಕಾಂ ಪದವೀಧರೆ. ಆದರೆ ಬದುಕಿಗಾಗಿ ಕ್ಯಾಂಟೀನ್!
ಇದು ಬ್ರಹ್ಮಾವರ ಹಳೆ ಬಸ್ ನಿಲ್ದಾಣ ಹಳೆ ಪೊಲೀಸ್ ಠಾಣೆಯ ಬಳಿ ಚಾಂತಾರು ಗ್ರಾಮ ಪಂಚಾಯತ್ ಕಟ್ಟಡದಲ್ಲಿರುವ ಹೊಟೇಲ್ ಶ್ರೀ ಗಣೇಶ್ ಪ್ರಸಾದ್ ಮಾಲಿಕ ದಂಪತಿಗಳ ಸ್ವಉದ್ಯೋಗದ ಸಾಧನೆ.
ಹಾಱ್ಯಾಡಿ ಮಂಜುನಾಥ್ ಕೆದ್ಲಾಯ ಬಳ್ಳಾರಿಯಲ್ಲಿ ಬಿ.ಕಾಂ. ಪದವಿ ಪೂರೈಸಿ, ಕಾನೂನು ಪದವಿ ಮಾಡಿ, ಬಳ್ಳಾರಿಯಲ್ಲಿ ಎಸ್ಪಿ ಗಗನ್ ದೀಪ್ ರ ಅವಧಿಯಲ್ಲಿ ಒಂದು ತಿಂಗಳು ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿರುವಾಗ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿರುವ ಬಿ.ಕಾಂ. ಪದವೀಧರೆ ವಿಜಯಲಕ್ಷ್ಮೀ ಕೈ ಹಿಡಿದು ಕಾರಣಾಂತರದಿಂದ ಸರಕಾರಿ ಕೆಲಸಕ್ಕೆ ತಿಲಾಂಜಲಿ ಇಟ್ಟು ಬ್ರಹ್ಮಾವರಕ್ಕೆ 13 ವರ್ಷಗಳ ಹಿಂದೆ 6 ತಿಂಗಳ ಮಗುವಿನೊಂದಿಗೆ ಬಂದು ಚಿಕ್ಕದಾದ ಒಂದು ಕ್ಯಾಂಟೀನ್ ನನ್ನು ವಿಜಯಲಕ್ಷ್ಮಿಯವರ ಸಹೋದರ ರಾಮಕೃಷ್ಣ ಅಡಿಗರ ನೆರವಿನೊಂದಿಗೆ ಆರಂಭಿಸಿದರು.
ಪೊಲೀಸ್ ಠಾಣೆ, ರಿಜಿಸ್ಟ್ರರ್ ಆಫೀಸ್, ಪಂಚಾಯತ್ ಕಛೇರಿ, ಮಣೆಗಾರರ ಕಛೇರಿಗೆ ಬರುವ ಜನಗಳಿಂದ ಮಾತ್ರವೆ ಆ ಮಾರ್ಗಕ್ಕೆ ಜೀವಕಳೆ. ಬೇರೆಲ್ಲಾ ದಿನ ಜನ ಸಂಚಾರವೇ ವಿರಳ ಎನ್ನುವ ಬ್ರಹ್ಮಾವರ ಹಳೆ ಬಸ್ ನಿಲ್ದಾಣದಲ್ಲಿ ಕ್ಯಾಂಟೀನು ಮಾಡಿದಾಗ ಅನೇಕರು ಭವಿಷ್ಯ ನುಡಿದಿದ್ದರು, ಒಂದು ವರ್ಷದಲ್ಲಿ ಮುಚ್ಚುತ್ತಾರೆ ಎಂದು!
ಪತಿ ಪತ್ನಿಯರು ಇಬ್ಬರೂ ಕೂಡಾ ಸಮಭಾಗಿತ್ವ ಸಹಬಾಳ್ವೆಯಿಂದ ದಿನದ 12 ಗಂಟೆಗಳ ದುಡಿತದಿಂದ ಇದೀಗ ಕ್ಯಾಂಟೀನ್ ನ ಸನಿಹವೆ ಜಾಗ ಖರೀದಿಸಿ ಸ್ವಂತದ್ದಾದ ಮನೆಯೊಂದನ್ನು ಮಾಡಿಕೊಂಡು ಇಬ್ಬರು ಗಂಡು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ನೀಡುತ್ತಿದ್ದು, ವಿದ್ಯಾವಂತರು ಸ್ವ-ಶ್ರಮದಿಂದ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡು ಸಂತೃಪ್ತಿಯಲ್ಲಿ ಬದುಕು ಕಾಣಬಹುದು ಎನ್ನುವುದಕ್ಕೆ ಮಾದರಿಯಾಗಿದ್ದಾರೆ.
ತುಂಬಾ ಸಾಂಪ್ರದಾಯಿಕ ಕುಟುಂಬದಿಂದ ಬಂದ ನಮ್ಮನ್ನು ಹೊಟೇಲ್ ನಲ್ಲಿ ದುಡಿಯುತ್ತಿರುವುದನ್ನು ಕಂಡು ಅನೇಕರು ಪ್ರಶಂಶಿಸಿದರೆ, ಕೆಲವರು ತಾತ್ಸಾರದಿಂದ ನೋಡುವ ಜನರೂ ಇದ್ದಾರೆ. ಆದರೂ ನಮಗೆ ಆತ್ಮ ಸಂತೋಷವಿದೆ ಎನ್ನುತ್ತಾರೆ ಶ್ರೀಮತಿ ವಿಜಯಲಕ್ಷ್ಮೀ
2 ರಾಷ್ಟ್ರೀಕೃತ ಬ್ಯಾಂಕ್ 1 ಸೊಸೈಟಿ ತಮಗೆ ಆರ್ಥಿಕ ನೆರವು ನೀಡಿದುದರಿಂದ ನಮ್ಮ ಜೀವನ ದಾರಿಗೆ ಮಾರ್ಗ ದೊರತಿದೆ. ನಾವೇ ಸ್ವತಃ ದುಡಿಯುವುದರಿಂದ ಸಂತೃಪ್ತಿ ಇದೆ. ಅನೇಕ ಶಾಲೆ ಕಾಲೇಜು ಎಲ್.ಐ.ಸಿ ಕಛೇರಿ ಬ್ಯಾಂಕ್ ಮುಂತಾದ ಕಡೆಗಳಿಂದ ತಿಂಡಿ ತಿನಿಸು ಚಾ ಕಾಫಿಯ ಬೇಡಿಕೆ ಇದೆ ಎನ್ನುತ್ತಾರೆ ಮಂಜುನಾಥ ಕೆದ್ಲಾಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ