ಮಾತೃಭಾಷೆಯಲ್ಲೇ ಸ್ನೇಹ ಬೆಸೆಯುವ ಅಪರೂಪದ ಶಾಲೆ
ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಆಶಯ ಹಾಗೂ ಕನ್ನಡ ಮಾಧ್ಯಮದ ಒಂದು ಮಾದರಿ ಶಾಲೆ ನಿರ್ಮಿಸಬೇಕೆಂಬ ಕನಸು ಸುಳ್ಯದಲ್ಲಿ ಯಶಸ್ಸಿನ ಪಥದಲ್ಲಿ ದಾಪುಗಾಲಿಡುತ್ತಿರುವ 'ಸ್ನೇಹ ಶಾಲೆ'ಯ ಉಗಮದೊಂದಿಗೆ ಸಾಕಾರಗೊಂಡಿದೆ.
ಪ್ರಾಥಮಿಕ ಶಿಕ್ಷಣದ ಗುಣಮಟ್ಟದ ವಿಷಯದಲ್ಲಿ ಡಾ. ಚಂದ್ರಶೇಖರ ದಾಮ್ಲೆಯವರು ಹೊಂದಿರುವ ಕಾಳಜಿ ಸ್ನೇಹ ಶಾಲೆಯ ಹುಟ್ಟಿಗೆ ಪ್ರಮುಖ ಕಾರಣವಾಗಿದೆ.
ತನ್ನ ಹಿರಿಯ ಮಗ ಹೋಗುತ್ತಿದ್ದ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಸುಧಾರಣೆಯ ಪ್ರಯತ್ನಕ್ಕೆ ಮೊದಲು ಕೈ ಹಾಕಿದರು. ಆದರೆ ಅಲ್ಲಿ ಅವರಿಗೆ ಸರಿಯಾದ ಬೆಂಬಲ ಸಿಗಲಿಲ್ಲ. ನಂತರ ಸುಳ್ಯದ ಶ್ರೀಮಂತ ಭೂಮಾಲಕರಲ್ಲಿ ಪ್ರಸ್ತಾಪಿಸಿದ್ದರೂ ಪ್ರಯೋಜನವಾಗಲಿಲ್ಲ. ಆ ಬಳಿಕ ಅವರು ಚರ್ಚಿಸಿದ್ದು ಸ್ನೇಹಿತರ ಬಳಗದಲ್ಲಿ. ಕನ್ನಡ ಮಾಧ್ಯಮದಲ್ಲಿ ಒಂದು ಒಳ್ಳೆಯ ಶಾಲೆ ಮಾಡಿ ತೋರಿಸಬೇಕೆಂಬ ಹಂಬಲಕ್ಕೆ ಬೆಂಬಲ ಸಿಕ್ಕಿದ್ದೂ ಅಲ್ಲೇ.
ಪುತ್ತೂರಿನ ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ ಕುಮಾರ್ ಮತ್ತು ಅವರ ಪತ್ನಿ ರೇಖಾ ಆನಂದ್, ಸುಳ್ಯದ ಡಾ. ವಿದ್ಯಾಶಾಂಭವ ಪಾರೆ, ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್, ಮಂಗಳೂರಿನ ಶ್ರೀಕರ ದಾಮ್ಲೆ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಇವರು ಕನ್ನಡ ಮಾಧ್ಯಮದ ಬಗ್ಗೆ ಭರವಸೆ ಹೊಂದಿದ್ದರು. ಹೀಗೆ, ಒಂದೇ ಐಡಿಯಾದ ಸ್ನೇಹಿತರು ಸೇರಿ ಕಟ್ಟಿದ ಸಂಸ್ಥೆಗೆ 'ಸ್ನೇಹ ಶಿಕ್ಷಣ ಸಂಸ್ಥೆ' ಎಂಬುದಾಗಿ ಹೆಸರಿಡಲಾಯಿತು.
ಆಂಗ್ಲ ಮಾಧ್ಯಮದ ಶಾಲೆಗಳಲ್ಲೇ ನಿಜವಾದ ಶಿಕ್ಷಣ ಆಗುತ್ತಿರುವುದು ಎಂಬ ವಾದ ಬಲವಾಗಿದ್ದ ಕಾಲ ಅದು. ಕನ್ನಡ ಮಾಧ್ಯಮದ ಶಾಲೆಗಳು ಪ್ರಯೋಜನಕ್ಕಿಲ್ಲ ಎಂಬ ತೀರ್ಮಾನಕ್ಕೆ ಸುಶಿಕ್ಷಿತರೆಂಬವರು ಬಂದಾಗಿತ್ತು. ಆದರೆ ಕನ್ನಡ ಮಾಧ್ಯಮದಲ್ಲೂ ಸಶಕ್ತ ಶಾಲೆ ಕಟ್ಟಿ ಅದನ್ನು ಪ್ರಗತಿ ಪಥದಲ್ಲಿ ಮುನ್ನಡೆಸಿರುವುದು 'ಸ್ನೇಹ ಶಿಕ್ಷಣ ಸಂಸ್ಥೆ'ಯ ಸಾಧನೆಯಾಗಿದೆ.
ಕಲಿಕೆಯಲ್ಲಿ ಮಕ್ಕಳು ಸಫಲರಾಗಬೇಕಿದ್ದರೆ ಮೊದಲನೆಯದಾಗಿ ಶಿಶು ಕೇಂದ್ರಿತ ಶಿಕ್ಷಣದ ವ್ಯವಸ್ಥೆ ಇರಬೇಕು. ಮುಖ್ಯವಾಗಿ ಮಕ್ಕಳು ಶಿಕ್ಷಕಿ/ಶಿಕ್ಷಕರಲ್ಲಿ ಮುಕ್ತವಾಗಿ ಮಾತಾಡುವಂತಹ ಪ್ರೀತಿಯ ವಾತಾವರಣ ಇರಬೇಕು. ಸ್ನೇಹ ಶಾಲೆಯಲ್ಲಿ ಅದು ಇದೆ. ಮಗು ತನಗೆ ಬೇಕಾದ ಯಾವುದೇ ಸಂಗತಿ ಅಥವಾ ಸೌಲಭ್ಯಕ್ಕಾಗಿ ಗುರುಗಳಲ್ಲಿ ಅಳುಕಿಲ್ಲದೆ ಕೇಳಬಹುದು.
ಎರಡನೇಯದಾಗಿ, ಮಗುವಿನ ಸಮಯಕ್ಕೆ ಮಹತ್ವ ನೀಡಬೇಕು. ಒಬ್ಬ ಶಿಕ್ಷಕಿ ರಜೆ ಹಾಕಿದರೆ ಆಕೆಯ ದೃಷ್ಟಿಯಲ್ಲಿ ಶಾಲೆಗೆ ಆರು ಗಂಟೆಗಳ ನಷ್ಟ. ಆದರೆ ವಿದ್ಯಾರ್ಥಿಗಳ ಲೆಕ್ಕಾಚಾರ ನೋಡಿದರೆ 30 ಗುಣಿಸು 6 ಅಂದರೆ 180 ಗಂಟೆಗಳ ನಷ್ಟ! ಇದನ್ನು ಪರಿಗಣಿಸಿದ ಸ್ನೇಹದ ಆಡಳಿತ ಮಂಡಳಿ ಇಬ್ಬರು ಹೆಚ್ಚುವರಿ ಶಿಕ್ಷಕಿಯರನ್ನು ನೇಮಿಸಿಕೊಂಡಿದ್ದಾರೆ. ರಜೆಯಲ್ಲಿರುವ ಶಿಕ್ಷಕರ ತರಗತಿಗಳನ್ನು ಉಳಿದವರು ತುಂಬುತ್ತಾರೆ. 'ಇವತ್ತು ಲೆಕ್ಕ ಟೀಚರ್ ಇಲ್ಲ, ಇನ್ನೂ ಯಾರೂ ಬಂದಿಲ್ಲ. ನೀವು ಬರ್ತೀರಾ ನಮ್ಮ ಕ್ಲಾಸಿಗೆ?' ಎಂತ ಮುಖ್ಯೋಪಾಧ್ಯಾಯಿನಿಯವರಲ್ಲೇ ಕೇಳುವ ಧೈರ್ಯ 'ಸ್ನೇಹ'ದ ಮಕ್ಕಳಿಗಿದೆ.
ಮೂರನೇಯದಾಗಿ, ಓದುವಿಕೆಯಲ್ಲಿ ವೇಗ ಮತ್ತು ಬರವಣಿಗೆಯಲ್ಲಿ ಸ್ಪಷ್ಟತೆ ಇವು ಹೆಚ್ಚಿನ ಕಲಿಕೆಗಾಗಿ ವಿದ್ಯಾರ್ಥಿಯು ಬೆಳೆಸಿಕೊಳ್ಳಬೇಕಾದ ಸಾಮರ್ಥ್ಯಗಳು. ಓದು ಸ್ಪಷ್ಟವಾಗಿರಬೇಕು. ಬರವಣಿಗೆ ಅಂದವಾಗಿರಬೇಕು. ಇದಕ್ಕಾಗಿ ಶಿಕ್ಷಕರು ಗಮನ ಕೊಡಲು ಸಾಧ್ಯವಾಗುವಷ್ಟೇ ಮಕ್ಕಳು ತರಗತಿಗಳಲ್ಲಿರಬೇಕು. ಈ ದೃಷ್ಟಿಯಿಂದ ಸ್ನೇಹಶಾಲೆಯಲ್ಲಿ ಪ್ರತಿ ತರಗತಿಗೆ ಮೂವತ್ತಕ್ಕಿಂತ ಹೆಚ್ಚು ಮಕ್ಕಳನ್ನು ಸೇರಿಸಿಕೊಳ್ಳುವುದಿಲ್ಲ.
ನಾಲ್ಕನೇಯದಾಗಿ, ಮಕ್ಕಳ ಸಣ್ಣ ಸಣ್ಣ ಸಾಧನೆಗಳನ್ನೂ ಗುರುತಿಸುವ ಎಚ್ಚರ ಹಾಗೂ ಉದಾರತೆಯನ್ನು ತೋರಬೇಕು. ಎಷ್ಟೋ ಸಲ ದೊಡ್ಡವರು ಮಕ್ಕಳ ತಪ್ಪುಗಳನ್ನು ತಕ್ಷಣ ಎತ್ತಿ ಹೇಳುತ್ತಾರೆ. ಆದರೆ ಅವರ ಒಳ್ಳೆಯ ಸಾಧನೆಯನ್ನು ಪ್ರಶಂಸಿಸಲು ಮರೆಯುತ್ತಾರೆ. ಸ್ನೇಹ ಶಾಲೆಯಲ್ಲಿ ಮಕ್ಕಳ ಸರಿತಪ್ಪುಗಳನ್ನು ಸಮಾನವಾಗಿ ಸೌಹಾರ್ದವಾಗಿ ಕಾಣಲಾಗುತ್ತದೆ.
ಐದನೇಯದಾಗಿ ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಕೌಶಲ್ಯ ಇದ್ದೇ ಇರುತ್ತದೆ. ಹಾಗಾಗಿ ಎಲ್ಲಾ ಮಕ್ಕಳಿಗೂ ಪ್ರತಿವರ್ಷ ಒಮ್ಮೆಯಾದರೂ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಹತ್ತಲು ಸಿಗುತ್ತದೆ. ಹಾಗೆಯೇ ವಾರ್ಷಿಕೋತ್ಸವದಲ್ಲಿ ಬಹುಮಾನಗಳನ್ನೂ ನೀಡಲಾಗುತ್ತದೆ. ಇಲ್ಲಿ ಇನ್ನೂ ಒಂದು ಎಚ್ಚರವನ್ನು ವಹಿಸಲಾಗುತ್ತದೆ. ಯಾವುದೇ ಒಂದು ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಒಬ್ಬನನ್ನೇ ಫಸ್ಟ್ ಎಂದು ಬಹುಮಾನಿಸುವುದಲ್ಲ. ಬದಲಾಗಿ ಹೆಚ್ಚು ಅಂಕಗಳ ಒಂದು ರೇಂಜ್ ನಲ್ಲಿರುವ ಎಲ್ಲರನ್ನೂ ತರಗತಿಯಲ್ಲಿ ಫಸ್ಟ್ ಎಂದು ಬಹುಮಾನ ನೀಡಲಾಗುತ್ತದೆ. ಇದು ಸ್ಪರ್ಧೆಯಿಂದಾಗಿ ವಿದ್ಯಾರ್ಥಿಗಳ ನಡುವೆ ದ್ವೇಷಾಸೂಯೆಗಳುಂಟಾಗದಂತೆ ತಡೆಯುತ್ತದೆ.
ಮಗುವಿನ ಸರ್ವತೋಮುಖ ವಿಕಾಸಕ್ಕಾಗಿ ಎಲ್ಲ ಸೌಲಭ್ಯಗಳೂ ಶಾಲೆಯಲ್ಲಿರಬೇಕೆಂಬುದು ಸ್ನೇಹದ ಆಡಳಿತ ಮಂಡಳಿಯವರ ಅಪೇಕ್ಷೆ. ನೃತ್ಯ, ಸಂಗೀತ, ಚಿತ್ರಕಲೆ, ಕರಾಟೆ, ಕ್ರೀಡೆ ಇತ್ಯಾದಿ ಕೌಶಲ್ಯಗಳಿಗಾಗಿ ಒಂದೊಂದು ಕಡೆ ಅಲೆಯುವ ಸಮಸ್ಯೆ ಬರಬಾರದು. ಎಲ್ಲವೂ ಶಾಲೆಯಲ್ಲೇ ಸಿಗಬೇಕು. ಆದಿತ್ಯವಾರ ಮಗುವಿಗೆ ಹೆತ್ತವರೊಡನೆ ಕಳೆಯುವ ವಿರಾಮದ ದಿನವಾಗಿರಬೇಕು. ಇದಕ್ಕಾಗಿ ಶಾಲೆಯಲ್ಲಿಯೇ ಕೌಶಲ್ಯಗಳ ಶಿಕ್ಷಣದ ಸೌಲಭ್ಯಗಳಿರಬೇಕು. ಈ ದೃಷ್ಟಿಯಿಂದ ಸ್ನೇಹದ ಮುಂದಿನ ನಿರ್ಮಾಣ ಯೋಜನೆಗಳೆಂದರೆ ಪ್ರದರ್ಶನ ಮಂದಿರ, ಒಳಾಂಗಣ ಕ್ರೀಡಾಂಗಣ, ಗ್ರಂಥಾಲಯ, ಪ್ರಯೋಗಾಲಯ ಮತ್ತು ಮುಖ್ಯವಾಗಿ ಧ್ಯಾನಮಂದಿರದ ನಿರ್ಮಾಣ.
ಸ್ನೇಹ ಪ್ರೌಢಶಾಲೆಯಲ್ಲಿ ಪ್ರವೇಶ ಬಯಸಿ ಬರುವ ದೂರಪ್ರದೇಶದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಈಗಾಗಲೇ ಉತ್ತಮ ಹಾಸ್ಟೆಲ್ ಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಅಂತರ್ಗತವಾಗಿರುವ ಪ್ರತಿಭೆಯನ್ನು ಹೊರತರುವ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇನ್ನು ದಸರಾ ಮತ್ತು ಬೇಸಿಗೆ ರಜೆಗಳಲ್ಲಿ ನಗರದ ಮಕ್ಕಳಿಗಾಗಿ ಗ್ರಾಮೀಣ ಬದುಕಿನ ಪರಿಚಯ ನೀಡುವ ಶಿಬಿರಗಳನ್ನು ಏರ್ಪಡಿಸುವ ಯೋಜನೆ ಇದೆ. ಈ ಶಿಬಿರಗಳಲ್ಲಿ ಸ್ವಾವಲಂಬನೆ, ಮೆದುಳಿನ ವ್ಯಾಯಾಮ, ಸಾಹಿತ್ಯಾಧ್ಯಯನ, ಮೌಲ್ಯಗಳ ಶಿಕ್ಷಣ, ಯೋಗ ಮತ್ತು ಆರೋಗ್ಯದ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ.
ಇದುವರೆಗೆ ಸರಕಾರದಿಂದ ಅನುದಾನ ದೊರೆಯದಿದ್ದರೂ ಸ್ನೇಹ ಶಿಕ್ಷಣ ಸಂಸ್ಥೆಯ ಸಾಧನೆ ಹಲವರ ಗಮನ ಸೆಳೆದಿದೆ. ಬೆಂಗಳೂರಿನ ಕೆನರಾ ಬ್ಯಾಂಕ್ ನ ನಿವೃತ್ತ ಅಧಿಕಾರಿ ಎಂ.ಎಂ.ಕೆ. ರಾಜು, ಕೆನರಾ ಬ್ಯಾಂಕ್ ನ ಮತ್ತೋರ್ವ ನಿವೃತ್ತ ಅಧಿಕಾರಿಯ ಪತ್ನಿ ಪ್ರಭಾ ಆಚಾರ್ಯ, ನವಕರ್ನಾಟಕ ಪಬ್ಲಿಕೇಷನ್ ನ ಮಾಲಕ ರಾಜಾರಾಮ್ ಈಗಾಗಲೇ ಆರ್ಥಿಕ ನೆರವು ನೀಡಿದ್ದಾರೆ. ಇಂತಹ ಸಹೃದಯಿಗಳ ನೆರವು ಹರಿದು ಬಂದಲ್ಲಿ ಮತ್ತಷ್ಟು ಸಾಧಿಸುವ ಹುಮ್ಮಸ್ಸಿನಲ್ಲಿರುವ ಸ್ನೇಹ ಶಿಕ್ಷಣ ಸಂಸ್ಥೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ