ಬುಧವಾರ, ಏಪ್ರಿಲ್ 27, 2011

ಗಾಯದ ಮೇಲೆ ಬರೆ!

ಮಾರಕ ಎಂಡೋಸಲ್ಫಾನ್ ಪರ ಕೇಂದ್ರ ಸರಕಾರ ವಕಾಲತ್ತು ವಹಿಸುತ್ತಿರುವ ಘಳಿಗೆಯಲ್ಲೇ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಕಮ್ಯೂನಿಟಿ ಮೆಡಿಸಿನ್ ವಿಭಾಗ ನೇತೃತ್ವದ ತಂಡ ತನ್ನ ಅಧ್ಯಯನ ವರದಿಯನ್ನು ಬಹಿರಂಗಗೊಳಿಸಿ ಬೆಚ್ಚಿಬೀಳಿಸಿದೆ.
ಈ ವರದಿಯ ಪ್ರಕಾರ ಮಾರಕ ಎಂಡೋಸಲ್ಫಾನ್ ಸಿಂಪಡಣೆಯ ಸಂತ್ರಸ್ತ ಪ್ರದೇಶಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಸಂಖ್ಯೆ ಪ್ರಮಾಣದಲ್ಲಿ ಗಣನೀಯ ಕುಸಿತ ದಾಖಲಾಗಿದೆ.
ಈ ತಂಡ ಎಂಡೋಸಲ್ಫಾನ್ ಸಂತ್ರಸ್ತ ಕಾಸರಗೋಡು ಜಿಲ್ಲೆಯ ಮುಳಿಯಾರು ಹಾಗೂ ಎಂಡೋಸಲ್ಫಾನ್ ಪೀಡಿತವಲ್ಲದ ಪ್ರದೇಶ ಬಾನಾ ಪಂಚಾಯತ್ ವ್ಯಾಪ್ತಿಯಲ್ಲಿ ಸಮಗ್ರ ಅಧ್ಯಯನ ನಡೆಸಿತ್ತಲ್ಲದೆ ಹಲವರನ್ನು ತಪಾಸಣೆಗೂ ಒಳಪಡಿಸಿತು. ಈ ವೇಳೆ ಹಲವು ಆಘಾತಕಾರಿ ಅಂಶಗಳು ತಂಡದ ಗಮನಕ್ಕೆ ಬಂದವು.
ಅದೆಂದರೆ ಬಾನಾ ಪಂಚಾಯತ್ ವ್ಯಾಪ್ತಿಗಿಂತ ಮುಳಿಯಾರು ಪಂಚಾಯತ್ ವ್ಯಾಪ್ತಿಯಲ್ಲಿ ಮಹಿಳೆಯರ ಹಾಗೂ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಾಣಿಸಿಕೊಂಡಿರುವುದು ಮತ್ತು ಹಲವು ತೊಂದರೆಗಳು ಕಾಣಿಸಿಕೊಂಡಿರುವುದು.
ಬಾನಾ ವ್ಯಾಪ್ತಿಯಲ್ಲಿ ಸಾವಿರಕ್ಕೆ 1016 ಮಹಿಳೆಯರಿದ್ದರೆ, ಮುಳಿಯಾರು ವ್ಯಾಪ್ತಿಯಲ್ಲಿ ಸಾವಿರಕ್ಕೆ 956 ಮಹಿಳೆಯರಷ್ಟೇ ಇದ್ದಾರೆ. ಅಲ್ಲದೆ ಮುಳಿಯಾರು ವ್ಯಾಪ್ತಿಯಲ್ಲಿ ಅತ್ಯಧಿಕ ಶಿಶು ಮರಣಗಳು ಸಂಭವಿಸಿದೆ. 8ರಿಂದ 10ನೇ ತರಗತಿ ಮಕ್ಕಳಲ್ಲಿರುವ ವಿಕಲಾಂಗತೆ ಬಾನಾಗಿಂತ ಮುಳಿಯಾರು ವ್ಯಾಪ್ತಿಯಲ್ಲಿ ಶೇ.16ರಷ್ಟು ಅಧಿಕವಾಗಿದೆ.
ಮುಳಿಯಾರುವಿನಲ್ಲಿ ಶೇ.1.41 ಶಿಶು ಪ್ರಮಾಣವಿದ್ದು, ಈ ಪೈಕಿ ಶೇ. 1.63 ಮಂದಿ ಅಪಸ್ಮಾರ, ಶೇ. 1.94 ಮಂದಿ ಕಿಡ್ನಿ ಸಂಬಂಧಿ ರೋಗಗಳಿಗೆ ತುತ್ತಾಗಿದ್ದಾರೆ. ಬಂಜೆತನ ಪ್ರಮಾಣವೂ ಬಾನಾಗಿಂತ ಮುಳಿಯಾರಿನಲ್ಲಿ ಶೇ. 1.81ರಷ್ಟು ಹೆಚ್ಚಿದೆ. ಇಲ್ಲಿ ಗರ್ಭಿಣಿಯರು, ಮಕ್ಕಳು ಅತ್ಯಧಿಕ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಶ್ವಾಸಕೋಶ, ಸಂಧಿವಾತ, ಕ್ಯಾನ್ಸರ್ ನಂತಹ ರೋಗಗಳು ಅತೀ ಹೆಚ್ಚು ಮಂದಿಯಲ್ಲಿವೆ.
ಎಂಡೋಸಲ್ಫಾನ್ ವಿರುದ್ಧ ರಾಜ್ಯದಲ್ಲಿ ಈಗಾಗಲೇ ಹೋರಾಟಗಳು ಕಾವೇರಿದೆ. ಈ ನಡುವೆ ಎಂಡೋ ದುಷ್ಪರಿಣಾಮಕ್ಕೆ ಈ ವರದಿ ಇನ್ನಷ್ಟು ಪುಷ್ಠಿನೀಡಿದೆ.
ಜೀವ ಸಂಕುಲಕ್ಕೆ ಮಾರಕವಾದ ರಾಸಾಯನಿಕ ಬಳಕೆ, ಮಾರಾಟ ಹಾಗೂ ಉತ್ಪಾದನೆ ನಿಯಂತ್ರಣ ಕುರಿತಾದ ಸದಸ್ಯ ರಾಷ್ಟ್ರಗಳ ಐದನೇ ವಿಶ್ವಪರಿಸರ  ಸಮಾವೇಶ ಜಿನೀವಾದಲ್ಲಿ ಆರಂಭಗೊಂಡಿದೆ.
ಭಾರತವೂ ಇದರಲ್ಲಿ ಭಾಗವಹಿಸಲಿದ್ದು, ಎರ‌ಡು ವರ್ಷಗಳ ಹಿಂದೆ. ನಡೆದ ಸಮಾವೇಶದಲ್ಲಿ ಎಂಡೋಸಲ್ಫಾನ್ ಕೀಟನಾಶಕದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ್ದ ಭಾರತ ಈ ಬಾರಿಯೂ ಅದೇ ವಾದ ಮಂಡಿಸಲು ನಿರ್ಧರಿಸಿರುವುದು ದುರಂತ.
ಸರಕಾರ ಎಂಡೋಸಲ್ಫಾನ್ ನಿಂದ ಯಾವುದೇ ಹಾನಿಯಾಗಿದೆ ಎನ್ನಲು ಪುರಾವೆಗಳಿಲ್ಲ ಎನ್ನುತ್ತಿದೆ. ಆದರೆ ಇದರಿಂದಾದ ದುಷ್ಪರಿಣಾಮ ಕಣ್ಣಾರೆ ಕಾಣಬೇಕಾದರೆ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಗ್ರಾಮಗಳಿಗೆ ಭೇಟಿ ನೀಡಬೇಕು. ಆದರೆ ಎಂಡೋ ಪರ ಹೇಳಿಕೆ ನೀಡುತ್ತಿರುವ ಯಾರೊಬ್ಬರೂ ಇಲ್ಲಿಗೆ ಭೇಟಿ ನೀಡುವ ಧೈರ್ಯ ಮಾಡುತ್ತಿಲ್ಲ ಎನ್ನುವ ಆರೋಪ ನಾಗರಿಕರದ್ದು.
ಕಳೆದ ಒಂದು ದಶಕದ ಅವಧಿಯಲ್ಲಿ ಹಲವು ಸಮಿತಿಗಳು ಈ ಬಗ್ಗೆ ಅಧ್ಯಯನ ನಡೆಸಿವೆ. ಈ ಪ್ರದೇಶದ ಜನರಲ್ಲಿ ಕಾಣಿಸಿಕೊಂಡಿರುವ ದೈಹಿಕ, ಮಾನಸಿಕ ನ್ಯೂನ್ಯತೆಗಳಿಗೆ ಕೀಟನಾಶಕ ಕಾರಣವಲ್ಲ ಎಂದಾದರೆ ಹಾಗಾದರೆ ಇದಕ್ಕೆ ಕಾರಣವಾಗಿರುವುದು ಏನು ಎಂಬುದು ಎಲ್ಲೂ ಬಹಿರಂಗಗೊಂಡಿಲ್ಲ.
ಅತ್ತ ಜಿನೀವಾದಲ್ಲಿ ಸಮಾವೇಶ ಆರಂಭಗೊಂಡಿದೆ. ಇತ್ತ ಕೇರಳದಾದ್ಯಂತ ಭಾರತ ಇಲ್ಲಿ ತೆಗೆದುಕೊಳ್ಳಲಿರುವ ನಿಲುವಿನ ವಿರುದ್ಧ ಹೋರಾಟ, ಪ್ರತಿಭಟನೆ ಆರಂಭಗೊಂಡಿದೆ.
ತಮ್ಮದಲ್ಲದ ತಪ್ಪಿಗೆ ನರಕಯಾತನೆ ಅನುಭವಿಸುತ್ತಿರುವ ಸಂತ್ರಸ್ತರು ಮಾತ್ರ ಮೌನವಾಗಿ ಈ ಎಲ್ಲಾ ಬೆಳವಣಿಗೆ ವೀಕ್ಷಿಸುತ್ತಿದ್ದಾರೆ. ಯಾಕೆಂದರೆ ಅನ್ಯಾಯದ ವಿರುದ್ಧ ಕೂಗಲು ಅವರಿಗೆ ಶಕ್ತಿಯಿಲ್ಲ, ಒಂದು ವೇಳೆ ಇದ್ದಬದ್ದ ಶಕ್ತಿ ಒಗ್ಗೂಡಿಸಿ ಕೂಗಿದರೂ ಅದನ್ನು ಕೇಳುವರೇ ಇಲ್ಲ.
ಎಂಥಾ ದುರಂತ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ