ಶುಕ್ರವಾರ, ಜುಲೈ 15, 2011
ದಾಟಿದ ನಂತರವಷ್ಟೇ ನಿರಾತಂಕ...!
ದಾಟುವಷ್ಟು ಹೊತ್ತು ತೀರದ ಆತಂಕ. ಒಮ್ಮೆ ದಾಟಿ ಬಂದಿರೋ ಆ ನಂತರವಷ್ಟೇ ನಿರಾತಂಕ...
ಸರಕಾರ ಗ್ರಾಮೀಣ ಅಭಿವೃದ್ಧಿಗಳಿಗೆ ಹೆಚ್ಚು ಒತ್ತು ನೀಡುವುದಾಗಿ ಹೇಳಿಕೊಳ್ಳುತ್ತದೆ. ಅಷ್ಟೇ ಅಲ್ಲ ಅದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಬಿಡುಗಡೆ ಮಾಡುತ್ತದೆ. ಆದರೆ ಇದರ ಪ್ರಯೋಜನ ಗ್ರಾಮೀಣ ಪ್ರದೇಶದ ಮಂದಿಗೆ ಎಷ್ಟರ ಮಟ್ಟಿಗೆ ಸಿಗುತ್ತದೆ? ಉತ್ತರಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ ಕಾಣಿಯೂರು ಗ್ರಾಮದಲ್ಲಿ ಕಾಣಸಿಗುವ ಕಾಲುಸಂಕ.
ಸುಳ್ಯ ವಿಧಾನ ಸಭಾ ವ್ಯಾಪ್ತಿಗೆ ಬರುವ ಈ ಸೇತುವೆ, ಕಾಣಿಯೂರು ಕಟ್ಟತ್ತಾರು ಪರಿಸರದಲ್ಲಿರುವ ಸುಮಾರು 30ಕ್ಕೂ ಅಧಿಕ ಮನೆಗಳಿಗೆ ಪಟ್ಟಣದ ಸಂಪರ್ಕ ಕಲ್ಪಿಸುವ ಏಕೈಕ ದಾರಿ.
ಇಲ್ಲೊಂದು ಸುಸಜ್ಜಿತ ಸೇತುವೆ ನಿರ್ಮಿಸಿಕೊಡಿ ಎಂಬ ಸ್ಥಳೀಯರ ಹಲವು ವರ್ಷಗಳ ಕೂಗು ಕೇಳುವವರೇ ಇಲ್ಲ.
ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿ ಇಲ್ಲಿನ ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಿಸಿ ಅದರ ಮೇಲ್ಭಾಗದಲ್ಲಿ ಸೇತುವೆ ನಿರ್ಮಿಸಲು ಸುಮಾರು 10 ಲಕ್ಷ ರೂ. ಮಂಜೂರುಗೊಳಿಸಿದ್ದರು. 2006ರಲ್ಲಿ ಕಿಂಡಿ ಅಣೆಕಟ್ಟಿಗೆ ಅಡಿಪಾಯ ಹಾಕಿ ಪಿಲ್ಲರ್ ಗಳನ್ನು ನಿರ್ಮಿಸಲಾಗಿತ್ತು. ಆ ಬಳಿಕ ಅನುದಾನ ಕೊರತೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿದ್ದು, ಇದೀಗ ನಮಗೆ ಕಿಂಡಿ ಅಣೆಕಟ್ಟು ಇಲ್ಲ ಸೇತುವೆಯೂ ಇಲ್ಲ ಎಂಬ ಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಸ್ಥಳೀಯರು.
ಮಳೆಗಾಲದಲ್ಲಿ ಈ ಹೊಳೆ ತುಂಬಿ ಹರಿಯುತ್ತದೆ. ಹೊಳೆ ದಾಟಲು ಸ್ಥಳೀಯರೇ ಇಲ್ಲಿನ ಪಿಲ್ಲರ್ ಗಳ ಮೇಲೆ ಅಡಿಕೆ ಮರದ ಸಲಾಕೆ ಜೋಡಿಸಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಇದು ಅಪಾಯಕಾರಿಯಾದರೂ ಸ್ಥಳೀಯರಿಗೆ ಅನಿವಾರ್ಯ. ಶಾಲೆಗೆ ತೆರಳುವ ಮಕ್ಕಳು ಈ ಸಂಕ ದಾಟಬೇಕಾದರೆ ಪೋಷಕರು ಇರಲೇಬೇಕೆಂಬ ಪರಿಸ್ಥಿತಿ. ಎಚ್ಚರ ತಪ್ಪಿದರೆ ಹೊಳೆಗೆ ಉರುಳುವ ಅಪಾಯ. ಅನೇಕ ಮಕ್ಕಳು ಈ ಸೇತುವೆ ದಾಟಲು ಭಯಪಟ್ಟು ಶಾಲೆಗೆ ತೆರಳಲು ಕೇಳುತ್ತಿಲ್ಲ ಎಂಬ ಕೊರಗು ಇಲ್ಲಿಯವರದ್ದು.
ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ. ಅದಕ್ಕಾಗಿ ಪ್ರಯತ್ನಗಳು ನಡೆಯುತ್ತಿದೆ. ಸರಕಾರದ ಅನುದಾನವೂ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಲೇ ಇದ್ದಾರೆ.
ಆದರೆ ಇಲ್ಲಿಯವರೆಗೂ ಬರೀ ಆಶ್ವಾಸನೆಗಳಷ್ಟೇ ದೊರಕಿದೆ. ನಂಬುವುದೇನಿದ್ದರೂ ಸೇತುವೆ ನಿರ್ಮಾಣವಾದ ಬಳಿಕವಷ್ಟೇ... ಎನ್ನುತ್ತಿದ್ದಾರೆ ಸ್ಥಳೀಯರು.!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ