ಸೋಮವಾರ, ಜುಲೈ 4, 2011

ಸೌಂದರ್ಯವರ್ಧಕಗಳ ಪಟ್ಟಿಯಲ್ಲಿ ಬದನಾಜೆ ಸೋಪು!


ಕಳೆದ ಹತ್ತು ವರ್ಷಗಳಿಂದ ತಮ್ಮ ಕೃಷಿಯಲ್ಲಿ ಸತತ ಸೋಲು ಕಂಡು ಕಂಗಾಲಾಗಿರುವ ಅಡಿಕೆ ಬೆಳೆಗಾರರಿಗೆ ಇದೀಗ ಸಂತಸದ ಸುದ್ದಿಯೊಂದು ಕೇಳಿಬಂದಿದೆ!
ಅಡಿಕೆಯನ್ನೇ ಮೂಲ ವಸ್ತುವನ್ನಾಗಿಸಿ ಸಾಬೂನು ತಯಾರಿಸುವ ಪ್ರಯೋಗವೊಂದು ಯಶಸ್ವಿಯಾಗಿದ್ದು, ಶೀಘ್ರವೇ ಈ ಸಾಬೂನು ಮಾರುಕಟ್ಟೆ ಪ್ರವೇಶಿಸುವ ಹಂತದಲ್ಲಿದೆ. ಈ ಅಪರೂಪದ ಸಾಧನೆಯಲ್ಲಿ ಯಶಸ್ಸನ್ನು ಕಂಡವರು ಪುತ್ತೂರಿನ ಅಡಿಕೆ ಕೃಷಿಕ ಹಾಗೂ ಅಡಿಕೆ ಪರ್ಯಾಯ ಉತ್ಪನ್ನಗಳ ಕುರಿತು ನಿರಂತರ ಪ್ರಯೋಗಗಳಲ್ಲಿ ನಿರತರಾಗಿರುವ ಬದನಾಜೆ ಶಂಕರ ಭಟ್.
ಅಡಿಕೆಯ ಪರ್ಯಾಯ ಉಪಯೋಗಗಳ ಕುರಿತು ಹಲವಾರು ಸಂಶೋಧನೆಗಳು ದೇಶದಾದ್ಯಂತ ನಡೆಯುತ್ತಿದ್ದರೂ ಅವೆಲ್ಲ ಇನ್ನೂ ಪ್ರಯೋಗಿಕ ಹಂತದಲ್ಲೇ ಇವೆ. ಹಾಗಾಗಿ ಇದುವರೆಗೂ ಅಡಿಕೆಯ ಪರ್ಯಾಯ ಬಳಕೆಯ ಅವಕಾಶಗಳು ಪುಟಿದೆದ್ದಿರಲಿಲ್ಲ. ಆದರೆ ಬದನಾಜೆ ಶಂಕರ ಭಟ್ಟರು ಸಾಬೂನು ತಯಾರಿಯಲ್ಲಿ ಯಶಸ್ಸು ಕಂಡಿದ್ದು, ಪೂಗ-ಸಿಂಗಾರ ಹೆಸರಿನ ಈ ಸಾಬೂನಿಂದಾಗಿ ಅಡಿಕೆ ಬೆಳೆಗಾರಿಕೆ ತಮ್ಮ ಕ್ಷೇತ್ರದಲ್ಲಿ ಹೊಸ ಬೆಳಕೊಂದು ಕಂಡುಬರುವ ಸ್ಪಷ್ಟ ಸೂಚನೆ ನೀಡಿದೆ. ಈ ಕುರಿತು ಅವರು ಹೇಳಿದ್ದಿಷ್ಟು...

ಆಯುರ್ವೇದದಲ್ಲಿ ಅಡಿಕೆಯ ಗುಣಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಚರ್ಮದ ಕಾಯಿಲೆಗಳಿಗೆ, ಕೂದಲುದುರುವಿಕೆಗೆ, ಗಾಯಗಳಿಗೆ ಚಿಕಿತ್ಸೆ ನೀಡಲು ಅಡಿಕೆ ಅತ್ಯುತ್ತಮ ಔಷಧೀಯ ಗುಣ ಹೊಂದಿರುವ ವಸ್ತುವಾಗಿದೆ. ನಾವು ದಿನನಿತ್ಯ ಬಳಸುವ ಸಾಬೂನಿನ ಮೂಲಕ ಅಡಿಕೆಯ ಔಷಧೀಯ ಗುಣಗಳನ್ನು ಚರ್ಮಕ್ಕೆ ಸುಲಭವಾಗಿ ತಲುಪಿಸುವ ಉದ್ದೇಶ ಈ ಸಾಬೂನು ತಯಾರಿಕೆಯ ಹಿಂದಿದೆ.
ಸಾಬೂನಿನ ಗುಣಮಟ್ಟದಲ್ಲಿ ಎಂದೂ ರಾಜಿ ಮಾಡಿಕೊಂಡಿಲ್ಲ. ಅತ್ಯಂತ ಪರಿಶುದ್ಧ ತೆಂಗಿನ ಎಣ್ಣೆ, ಕೆಲವೊಂದು ಗಿಡಮೂಲಿಕೆಗಳ ಅಂಶಗಳು, ಸುಗಂಧಕ್ಕಾಗಿ ತುಳಸಿ, ಮಲ್ಲಿಗೆ, ಗುಲಾಬಿಯ ಮಿಶ್ರಣಗಳನ್ನು ಸೇರಿಸಲಾಗುತ್ತದೆ. ಮೊದಲಿಗೆ ಮೂರು ಸಾವಿರ ಸೋಪುಗಳನ್ನು ಉಚಿತವಾಗಿ ನೀಡಿ ಅಭಿಪ್ರಾಯ ಸಂಗ್ರಹಿಸಲಾಯಿತು. ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತಲ್ಲದೆ ಕೆಲವು ಮಂದಿ ತಮ್ಮ ಕೂದಲು ಉದುರುವ ಸಮಸ್ಯೆ, ತುರಿಕೆ ಇತ್ಯಾದಿಗಳು ಸಂಪೂರ್ಣ ನಿಂತಿದೆ ಎಂದು ಅಭಿಪ್ರಾಯಿಸಿದ್ದಾರೆ. ಈ ಬಗ್ಗೆ ಕೆಲವೊಂದು ವೈದ್ಯರುಗಳಿಂದಲೂ ಪ್ರಶಂಸೆ ವ್ಯಕ್ತವಾಗಿದೆ.
ಇಂದು ನಾವು ತಿನ್ನಲು ಮಾತ್ರ ಅಡಿಕೆ ಬಳಸುತ್ತಿದ್ದೇವೆ. ವಿದೇಶದಲ್ಲಿ ಈಗಾಗಲೇ ಈ ಕುರಿತು ನಿರಂತರ ಸಂಶೋಧನೆಗಳು ನಡೆದಿದೆ. ನಮ್ಮಲ್ಲೂ ಸಂಶೋಧನೆಗಳು ನಡೆಯುತ್ತಿದೆಯಾದರೂ, ಸಾಕಷ್ಟು ಪ್ರೋತ್ಸಾಹ ಇಲ್ಲದೆ ಹಿನ್ನೆಡೆ ಕಾಣುವಂತಾಗಿದೆ. ಅಡಿಕೆ ಚರ್ಮರೋಗಕ್ಕೆ ರಾಮಬಾಣ, ಜೀರ್ಣ ಕ್ರಿಯೆಗೆ ಸಹಕಾರಿ, ಮೂತ್ರದ ಕಲ್ಲಿಗೆ, ಹೊಟ್ಟೆಯಲ್ಲಿ ಹುಳದ ತೊಂದರೆ ಮೊದಲಾದವುಗಳಿಗೆ ಉತ್ತಮ ಔಷಧ. ಅಡಿಕೆ ವಾಜೀಕರವೂ ಹೌದು. ಇದು ಸಂತಾನ ಶಕ್ತಿಯನ್ನೂ ಹೆಚ್ಚಿಸುತ್ತದೆ. ಉತ್ತಮ ದಾಂಪತ್ಯ ಜೀವನಕ್ಕೂ ಇದು ಸಹಕಾರಿ. ಇದೆಲ್ಲವನ್ನೂ ನಾವು ಸಮೀಕ್ಷೆಯ ಮೂಲಕ ಕಂಡುಕೊಂಡು ದೃಢಪಡಿಸಿದ್ದೇವೆ. ಅಡಿಕೆಯ ಔಷಧೀಯ ಗುಣ ಎಲ್ಲರಿಗೂ ಸಿಗವಂತಾಗಬೇಕು ಎಂಬ ಉದ್ದೇಶದಿಂದ ಅಡಿಕೆಯ ಪರ್ಯಾಯ ಉತ್ಪನ್ನಗಳ ಕುರಿತು ಸಂಶೋಧನೆ ನಡೆಸುತ್ತಿದ್ದೇನೆ.
ಪೂಗ ಎನ್ನುವುದು ಸಂಸ್ಕೃತ ಶಬ್ದ. ಅಡಿಕೆ ಗಿಡಗಳ ಸಮೂಹಕ್ಕೂ ಪೂಗ ಎನ್ನುತ್ತಾರೆ. ಸಿಂಗಾರ ಎಂದರೆ ಅಡಿಕೆ ಗಿಡದಲ್ಲಿ ಅರಳುವ ಹೂವು. ಸೌಂದರ್ಯ ಎಂದೂ ಅರ್ಥೈಸಬಹುದು ಎಂದು ತಮ್ಮ ಸೋಪಿನ ಹೆಸರಿನ ಕುರಿತು ವಿವರಿಸುವ ಅವರು, ಇಂದು ಕರ್ನಾಟಕದ ವಿವಿಧೆಡೆ, ಕೇರಳ, ಹೈದರಾಬಾದ್ ಗಳಿಂದ ಈ ಸಾಬೂನಿಗೆ ಬೇಡಿಕೆ ಬರುತ್ತಿದೆ. ಶೀಘ್ರವೇ ಮಾರುಕಟ್ಟೆ ಜಾಲ ವಿಸ್ತರಿಸುವ ಯೋಚನೆಯಿದೆ. ಆರಂಭದಲ್ಲಿ ಕೇವಲ 20 ರೂ.ಗಳನ್ನಷ್ಟೇ ನಿಗದಿಪಡಿಸಲಾಗಿದೆ. ಉತ್ಪನ್ನದ ಬೇಡಿಕೆ ಹೆಚ್ಚಿದಂತೆ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಒದಗಿಸುವ ಯೋಚನೆಯನೂ ಇದೆ. ಸದ್ಯಕ್ಕೆ ವರ್ಷಾವಧಿ ಎರಡು ಲಕ್ಷ ಸಾಬೂನು ಉತ್ಪಾದಿಸುವ ಗುರಿ ಹೊಂದಲಾಗಿದೆ.
ಪೂಗ-ಸಿಂಗಾರ್ 'ಮಂಗಳಾ ಹರ್ಬಲ್ ಪಾರ್ಕ್' ಉತ್ಪನ್ನವಾಗಿದ್ದು, ಔಷಧೀಯ ಗುಣಗಳಿರುವ ಈ ಸಾಬೂನು ಖಂಡಿತವಾಗಿ ಎಲ್ಲರ ಮೆಚ್ಚುಗೆ ಗಳಿಸುತ್ತದೆ ಎಂಬ ವಿಶ್ವಾಸ ಅವರದು.
ಸದ್ಯಕ್ಕೆ ಮಂಗಳೂರಿನ ಮಂಗಳಾ ಆಸ್ಪತ್ರೆ, ವಿಟ್ಲದ ಶಂಕರ್ ಮೆಡಿಕಲ್ಸ್ ಗಳಲ್ಲಷ್ಟೇ ಇದು ಲಭ್ಯ.
ಕಳೆದ ಎರಡು ದಶಕಗಳಿಂದ ಅಡಿಕೆಯಿಂದ ಪರ್ಯಾಯ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಬದನಾಜೆಯವರು ನಿರಂತರ ಪ್ರಯತ್ನ ನಡೆಸುತ್ತಿದ್ದು, ಇವರಿಗೆ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ -ಎಆರ್ ಡಿಎಫ್ ನಿರಂತರ ಪ್ರೋತ್ಸಾಹ ನೀಡುತ್ತಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷರಾಗಿ, ಕೊಂಕೋಡಿ ಪದ್ಮನಾಭ ಆಡಳಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಎಆರ್ ಡಿಎಫ್ ನ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಬದನಾಜೆಯವರು.
ಸಂಪರ್ಕ ವಿಳಾಸ: ಮಂಗಳ ಹರ್ಬಲ್ ಪಾರ್ಕ್, ಪೂಗವನ, ವಿಟ್ಲ- 574243. ದೂರವಾಣಿ ಸಂಖ್ಯೆ: 08255-233231.
ಕೇವಲ ಸಾಬೂನು ಅಷ್ಟೇ ಅಲ್ಲ, ಶಂಕರಭಟ್ಟರ ಬತ್ತಳಿಕೆಯಲ್ಲಿ ಇನ್ನೂ ಹಲವು ಉತ್ಪನ್ನಗಳಿವೆ. ಶೀಘ್ರದಲ್ಲಿಯೇ ಪಶುಗಳ ವಿವಿಧ ಕಾಯಿಲೆ ನಿವಾರಿಸುವ ಸಾಬೂನು ದ್ರಾವಣ ಪ್ರಯೋಗದ ಹಂತದಲ್ಲಿದೆ. ಇದು ಪಶುಗಳಿಗೆ ಬರುವ ಕೆಚ್ಚಲು ಬಾವು ಮೊದಲಾದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಅಡಿಕೆಯಿಂದ ಪ್ರಸಾದನ ಸಾಮಾಗ್ರಿಗಳಾದ ಹೇರ್ ಡೈ, ಲಿಪ್ ಸ್ಟಿಕ್, ಪಾನೀಯಗಳಾದ ಅಡಿಕೆ ಕಾಫಿ, ವೈನ್ ಗಳನ್ನು ಅವರು ಈಗಾಗಲೇ ತಯಾರಿಸಿ ಯಶಸ್ವಿಯಾಗಿದ್ದಾರೆ. ಇವರು ಅಡಿಕೆಯಿಂದ ತಯಾರಿಸಿದ ವೈನ್ ಸ್ವಾದಕ್ಕೆ ನಾಸಿಕ್ ನಲ್ಲಿ ನಡೆದ ವೈನ್ ಫೆಸ್ಟಿವಲ್ ನಲ್ಲಿ ಬಿಜಾಪುರದಲ್ಲಿನ ಹೆರಿಟೇಜ್ ವೈನ್ ಫ್ಯಾಕ್ಟರಿಗಳಲ್ಲಿ ಬ್ರಿಟನ್, ಫ್ರಾನ್ಸ್, ಇಟೆಲಿ ಮಂದಿಗಳು ಮರುಳಾಗಿದ್ದಾರೆ. ಅಲ್ಲದೆ ವಿದೇಶಗಳಿಂದಲೂ ಇದಕ್ಕೆ ಬೇಡಿಕೆ ಬಂದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ