ಕಡಲತಡಿಯ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತರ ಕೋಟದಲ್ಲಿರುವ ಮೂಲ ಮನೆ ಇಂದು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ನೆಲಸಮಗೊಳ್ಳುವ ಆತಂಕ ಎದುರಿಸುತ್ತಿದೆ.
ಶತಮಾನ ದಾಟಿದ ಕಾರಂತಜ್ಜನ ಈ ಮನೆ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟದಲ್ಲಿದೆ.
ಇಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಕಾರಂತರ ಮನೆ ಉಳಿಸಿಕೊಳ್ಳಬೇಕಾದರೆ ಹೆದ್ದಾರಿ ಪ್ರಾಧಿಕಾರವು ಎದುರಿಗಿರುವ ಹಿರೇಮಹಾಲಿಂಗೇಶ್ವರ ದೇವಸ್ಥಾನವನ್ನು ತೆರವುಗೊಳಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ದೇವಸ್ಥಾನದ ಪಕ್ಕದಲ್ಲಿರುವ ಕೆರೆಯೂ ಕೂಡಾ ಕಾಮಗಾರಿಗೆ ತೊಡಕಾಗುತ್ತದೆ. ಹೀಗಾಗಿ ದೇವಸ್ಥಾನದ ಬದಲಿಗೆ ಹೆದ್ದಾರಿ ಪ್ರಾಧಿಕಾರ ಈ 'ಹಳೆ ಮನೆ' ನೆಲಸಮ ಮಾಡಲು ಮುಂದಾಗುವ ಸಾಧ್ಯತೆಯೇ ಹೆಚ್ಚಿದೆ. ಇದು ಸಹಜವಾಗಿಯೇ ಕಾರಂತರ ಅಭಿಮಾನಿಗಳಲ್ಲಿ ಆತಂಕ ತಂದಿಟ್ಟಿದೆ.
ಡಾ.ಶಿವರಾಮ ಕಾರಂತ ಅವರು ತಮ್ಮ ಬಾಲ್ಯದ ಹದಿನೈದು ವರ್ಷಗಳನ್ನು ಈ ಮನೆಯಲ್ಲೇ ಕಳೆದಿದ್ದಾರೆ. ಬಳಿಕ ಪುತ್ತೂರಿಗೆ ವಾಸ್ತವ್ಯ ಬದಲಿಸಿದ ಅವರು ತಮ್ಮ ಬದುಕಿನ ಕೊನೆ ದಿನಗಳನ್ನು ಸಾಲಿಗ್ರಾಮದ 'ಸುಹಾಸ'ದಲ್ಲಿ ಕಳೆದಿದ್ದರು.
ಶತಮಾನ ದಾಟದ ಕೋಟದ ಈ ಮನೆಯಲ್ಲಿ ಇಂದು ಕಾರಂತರ ವಂಶಸ್ಥರು ಯಾರೂ ವಾಸಿಸುತ್ತಿಲ್ಲ. ಕಾರಂತರು ಬಳಸುವ ಯಾವುದೇ ವಸ್ತುಗಳೂ ಇಲ್ಲಿಲ್ಲ. ಸಹಾಯಕರೊಬ್ಬರು ಮಾತ್ರ ಇಂದು ಈ ಮನೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಮುಂದಿನ ಪೀಳಿಗೆಗೆ ಕಾರಂತರ ಕುರಿತು ತಿಳಿಯಬೇಕಾದರೆ ಕೋಟದ ಈ ಮೂಲ ಮನೆ ಉಳಿಸುವುದು ಅನಿವಾರ್ಯ. ಹಾಗಾಗಿ ಹೆದ್ದಾರಿ ವಿನ್ಯಾಸವನ್ನು ಒಂದಷ್ಟು ಬದಲಾಯಿಸಿಕೊಂಡಾದರೂ ಈ ಮನೆಯನ್ನು ಉಳಿಸಿಕೊಳ್ಳಲೇಬೇಕಿದೆ.
ಆ ಮೂಲಕ ನಾಡಿನ ಶ್ರೇಷ್ಠ ಸಾಹಿತಿಗೆ ನಾವು ಗೌರವ ಸಲ್ಲಿಸಬೇಕಿದೆ.
ಧಾರವಾಡದಲ್ಲಿ ವರಕವಿ ದ.ರಾ.ಬೇಂದ್ರೆ ಅವರ ಮನೆ, ಮೈಸೂರಿನಲ್ಲಿ ಕುವೆಂಪು ಅವರ ಮನೆಯನ್ನು ಸ್ಮಾರಕವಾಗಿ ಉಳಿಸಿಕೊಂಡಂತೆಯೇ ಕೋಟದಲ್ಲಿರುವ ಕಾರಂತರ ಈ ಮೂಲ ಮನೆಯನ್ನು ಸ್ಮಾರಕವಾಗಿ ಉಳಿಸಿಕೊಳ್ಳಬೇಕೆನ್ನುವುದು ಸಾಹಿತ್ಯ ಪ್ರಿಯರ ಅಪೇಕ್ಷೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಈ ಕುರಿತು ಸರಕಾರದ ಗಮನ ಸೆಳೆಯಬೇಕಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ