ಏನ್ಮಾಡ್ತಿದ್ದೀಯೋ ಪಾಪಚ್ಚಿ?
ಇಲ್ಲಾಗಲೇ ಮಳೆಗಾಲ ಶುರು ಹಚ್ಕಂಡಿದೆ. ಹೊರಗಂತೂ ಕಾಲೂ ಇಡೋಕೆ ಆಗದ ಹಾಗೆ ವರುಣ ನರ್ತನ.
ಈಗಷ್ಟೇ ಮಳೆ ನೋಡಿ ಒಳಕ್ಕೆ ಬಂದು ಬಿಸ್ಸೀ ಬಿಸ್ಸೀ ಕಾಫಿ ಹೀಱ್ತಾ ಇದ್ದೀನಿ. ಒಂದೆಡೆ ಕಾಫಿ ಮೈ ಬಿಸಿ ಮಾಡುತ್ತಿದ್ದರೆ, ಇನ್ನೊಂದೆಡೆ ನಿನ್ನ ನೆನಪುಗಳು ಮನಸ್ಸನ್ನು ಬೆಚ್ಚಗೆ ಮಾಡುತ್ತಿದೆ.
ಸುರಿಯುವ ಸೋನೆಯು
ಸೂಸಿದೆ ನಿನ್ನದೇ ಪರಿಮಳ
ಇನ್ನು ಯಾರ ಕನಸಲೂ
ನೀನು ಹೋದರೆ ತಳಮಳ...
ನೀನು ಗಮನಿಸಿದ್ಯಾ? ಮಳೆ ಮುತ್ತು ನಮ್ಮ ಬದುಕು ನಡುವಲ್ಲಿ ಏನೋ ತಿಳಿಯದ ಅವಿನಾಭಾವ ಸಂಬಂಧವಿದೆ. ಪ್ರತಿ ಮಳೆಗಾಲದಲ್ಲೂ ನಮ್ಮ ಬದುಕು ಒಂದಲ್ಲಾ ಒಂದು ಟಿಸಿಲೊಡೆಯುತ್ತಾ ಬಂದಿದೆ. ಬರೆಯಲು ಹೋದರೆ ಪ್ರತಿ ಮಳೆಗಾಲದ್ದೂ ಒಂದು ಕಥೆಯಾದೀತು. ಅಂದಹಾಗೆ ನೀನಿಲ್ಲದೆ ಕಳೆದುಹೋಗುತ್ತಿರುವ ಮೊದಲ ಮಳೆಗಾಲ ಕಣೋ ಇದು! ಲೋ, ಪಾಪಿ, ಮುಂದೆಂದೂ ತಪ್ಪಿಸಿಕೊಳ್ಳಬೇಡ. ಒಂಟಿಯಾಗಿ ಕೂತು ಮಳೆ ನೋಡುವುದು ಯಾಕೋ ಬೋರು... ಬೋರು...!
ಅಂದಹಾಗೆ ಇಂದು ಊರೆಲ್ಲ ಸುತ್ತಾಡಿ ಬಂದೆ. ತಲೆ ಮೇಲೆ ಪನ್ನೀರ ಹನಿಯಂತೆ ಮಳೆ ಚಿಮುಕುತ್ತಿತ್ತು. ಮೊದಲಾದರೆ ಕಿವಿ ಹಿಡಿದು ಗದರಿಸಲು ನೀನಿದ್ದೆ. ಈ ಬಾರಿ ನೀನಿಲ್ಲ ಎಂಬ ಧೈರ್ಯದಲ್ಲೇ ಮನಸ್ಸಿಗೆ ತೃಪ್ತಿಯಾಗುವಷ್ಟು ಹೊತ್ತು ಮಳೆಯಲ್ಲಿ ನೆಂದು ಬಂದೆ! ನಿಂಗೊತ್ತಾ? ಹೋದ ಮಳೆಗಾಲದಲ್ಲಿ ನಾನೂ ನೀನೂ ಒಂದೇ ಕೊಡೆಯ ಕೆಳಗೆ ಕೂತು ಅರ್ಧಂಬರ್ಧ ತೊಯ್ಸಿಕೊಂಡು ನೆಟ್ಟ ಹೂವಿನ ಗಿಡಗಳೆಲ್ಲ ಇಂದು ಮೊಣಕಾಲೆತ್ತರಕ್ಕೆ ಬೆಳೆದು ಬಿಟ್ಟಿವೆ. ಛೇ ಸದ್ದಿಲ್ಲದೆ ಅವುಗಳಲ್ಲಿ ಅರಳಿ ನಿಂತ ಹೂವಿನ ಮೇಲೆ ಬಣ್ಣಬಣ್ಣದ ಚಿಟ್ಟೆಗಳು ಬಂದು ಮುತ್ತಿಕ್ಕುವುದನ್ನು ನೋಡಲಿಕ್ಕಾದರೂ ನೀನಿರಬೇಕಿತ್ತು.
ಅಂದಹಾಗೆ ಮಳೆಯಲ್ಲಿ ಪೂರ್ತಿ ನೆಂದು ಮನೆಗೆ ಬಂದಳಿಗೆ ಭರ್ತಿ ಸನ್ಮಾನವೂ ಅಮ್ಮನಿಂದ ದಕ್ಕಿತು. 'ಏನೇ... ಇನ್ನೂ ಮಕ್ಕಳಾಟಿಕೆ ಬಿಟ್ಟಿಲ್ವಾ? ಗಂಡನ ಮನೆಗೆ ಹೋಗುವ ಪ್ರಾಯವಾಯ್ತು, ಅಲ್ಲೆಲ್ಲಾದರೂ ಹಿಂಗೆ ಮಾಡಿದ್ರೆ ಅಷ್ಟೇ...' ಅಂತ ಅಮ್ಮ ಗದರುತ್ತಿದ್ದರೆ, ಬೇಡ ಬೇಡವೆಂದರೂ ನಿನ್ನನ್ನು ಎಳೆದುಕೊಂಡೇ ಮಳೆಯಲ್ಲಿ ಊರಾಚೆಗಿನ ಹೊಳೆಗೆ ಮೀನು ನೋಡಲು ಹೋಗುತ್ತಿದ್ದುದು ಯಾಕೋ ನೆನಪಾಯಿತು.
ಅಂದಹಾಗೆ, ಇದಿಷ್ಟೂ ಹೊತ್ತು ನಾನೇ ಮಾತಾಡಿದ್ದಾಯ್ತು. ಕೆಲಸಾ ಅಂತ ಬ್ಯಾಗ್ ಎತ್ಕೊಂಡು ಹೋದ ಈ ಮಹಾನುಭಾವನದ್ದೇನು ಸುದ್ದಿ? ಬರಬರುತ್ತಾ ರಾಯರ ಕುದುರೆ ಕತ್ತೆಯಾಯಿತು ಅಂದಹಾಗೆ ಹೋದ ಮಾರನೇ ದಿನ 22 ಫೋನು, ನಂತರದ ದಿನ 19, ಮತ್ತೆ 17, ಆಮೇಲೆ 12, ಆಮೇಲೆ ದಿನಕ್ಕೆ ನಾಲ್ಕು ಫೋನ್ ಕಾಲ್ ಗಳಾಗಿ ಈಗ ದಿನಕ್ಕೊಂದೇ ಬಾರಿ ಮಾತು ಎಂಬಲ್ಲಿಗೆ ಬಂದುನಿಂತಿದೆ. ಈ ಹುಡುಗ್ರೇ ಇಷ್ಟು ಅಂತ ಅಮ್ಮ ಬಯ್ಕೊಂತಾ ಇದ್ದಿದ್ದು ಅದೆಷ್ಟು ಸರಿ ಅಲ್ವಾ ಕೋತಿ?
ಇರಲಿ, ಕೆಲಸ ಬೇಗ ಬೇಗ ಮುಗಿಸ್ಕೋ, ಮಳೆಗಾಲ ಈಗಷ್ಟೇ ಶುರುವಾಗಿದೆ. ಈ ಬಾರಿಯ ಮಳೆಗಾಲ ಮುಗಿಯೇ ಮುನ್ನ ಊರಾಚೆಗಿನ ಹೊಳೆಗೆ ಹೊಸ ಮೀನುಗಳು ಬರುತ್ತಿದೆಯಂತೆ.
ಮಳೇಲಿ ನೆನ್ಕೊಂಡೇ ಹೋಗಿ ನೋಡಿ ಬರೋಣ!
ಏನಂತೀಯ?

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ